ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾಸನಾಂಬೆ ದರ್ಶನೋತ್ಸವದ ದಿನಾಂಕ ಪ್ರಕಟ; ಭಕ್ತರಿಗೆ ಸಿಗಲಿದೆ 12 ದಿನಗಳ ದರ್ಶನ ಭಾಗ್ಯ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ವಿಶ್ವವಿಖ್ಯಾತ ಶ್ರೀ ಹಾಸನಾಂಬೆ ದೇವಿಯ 2026ರ ದರ್ಶನೋತ್ಸವದ ದಿನಾಂಕಗಳು ಅಧಿಕೃತವಾಗಿ ಪ್ರಕಟಗೊಂಡಿದ್ದು, ಜಿಲ್ಲಾಡಳಿತದಿಂದ ಭರದ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿಯ ಮಹೋತ್ಸವವು ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಒಟ್ಟು 14 ದಿನಗಳ ಕಾಲ ಜರುಗಲಿದೆ.

ಹಾಸನಾಂಬೆ ದರ್ಶನೋತ್ಸವದ ದಿನಾಂಕ ಪ್ರಕಟ

ಹಾಸನಾಂಬೆ -

Vishakha Bhat Heggar
Vishakha Bhat Heggar Sep 27, 2026 8:40 AM

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ವಿಶ್ವವಿಖ್ಯಾತ ಶ್ರೀ ಹಾಸನಾಂಬೆ ದೇವಿಯ ( Hasanamba Devi) 2026ರ ದರ್ಶನೋತ್ಸವದ ದಿನಾಂಕಗಳು ಅಧಿಕೃತವಾಗಿ ಪ್ರಕಟಗೊಂಡಿದ್ದು, ಜಿಲ್ಲಾಡಳಿತದಿಂದ ಭರದ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿಯ ಮಹೋತ್ಸವವು ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಒಟ್ಟು 14 ದಿನಗಳ ಕಾಲ ಜರುಗಲಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಹಾಗೂ ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಹಾಸನಾಂಬೆ ದರ್ಶನಕ್ಕೆ ಬರುವ ಸಾರ್ವಜನಿಕರು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಬಾರದು. ಆರು-ಏಳು ಗಂಟೆ ಕ್ಯೂನಲ್ಲಿ ನಿಂತು ಭಕ್ತರು ಅಸಮಾಧಾನ ವ್ಯಕ್ತಪಡಿಸುವಂತಾಗಬಾರದು ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಏಳೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಬಾರಿ ಅನಗತ್ಯ ಅದ್ದೂರಿತನ ಹಾಗೂ ದುಂದುವೆಚ್ಚಕ್ಕೆ ಬ್ರೇಕ್ ಹಾಕಲಾಗಿದೆ.

ಹಾಸನಾಂಬೆಯ ಪರಂಪರೆ ಹಾಗೂ ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ಧಕ್ಕೆಯಾಗದಂತೆ, ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಸಡಗರದಿಂದ ಉತ್ಸವ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಗಮ ಸಂಚಾರ ಹಾಗೂ ಮೂಲಸೌಕರ್ಯಕ್ಕಾಗಿ ಈಗಾಗಲೇ ಹಲವು ಸಮಿತಿಗಳನ್ನು ರಚಿಸಲಾಗಿದೆ.

ದರ್ಶನೋತ್ಸವದ ಸಂಪೂರ್ಣ ವೇಳಾಪಟ್ಟಿ

ಅಕ್ಟೋಬರ್ 29 (ಗುರುವಾರ): ಮಧ್ಯಾಹ್ನ 12:00 ಗಂಟೆಗೆ ಸಂಪ್ರದಾಯದಂತೆ ಹಾಸನಾಂಬ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಮೊದಲ ದಿನ ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.

ಅಕ್ಟೋಬರ್ 30 ರಿಂದ ನವೆಂಬರ್ 10: ಸತತ 12 ದಿನಗಳ ಕಾಲ ಭಕ್ತರಿಗೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಸಂಪೂರ್ಣ ಅವಕಾಶ ಕಲ್ಪಿಸಲಾಗಿದೆ.

ನವೆಂಬರ್ 11 (ಬುಧವಾರ): ಉತ್ಸವದ ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಅಂದೂ ಕೂಡ ಸಾರ್ವಜನಿಕ ದರ್ಶನವಿರುವುದಿಲ್ಲ.