ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆ ದಿನ; ಹರಿದು ಬಂದ ಭಕ್ತ ಸಾಗರ
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಐತಿಹಾಸಿಕ ಮತ್ತು ಪ್ರಸಿದ್ಧ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಇಂದಿನ ಮಂಡಲ ಪೂಜೆಯ ನಂತರ, ಮಧ್ಯರಾತ್ರಿಯವರೆಗೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಐತಿಹಾಸಿಕ ಮತ್ತು ಪ್ರಸಿದ್ಧ ಹಾಸನಾಂಬೆ ದೇವಿಯ (Haasanamba Temple) ಸಾರ್ವಜನಿಕ ದರ್ಶನಕ್ಕೆ ಇಂದು (ನವೆಂಬರ್ 10, 2026) ಕೊನೆಯ ದಿನವಾಗಿದೆ. ಇಂದಿನ ಮಂಡಲ ಪೂಜೆಯ ನಂತರ, ಮಧ್ಯರಾತ್ರಿಯವರೆಗೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಹಾಸನಕ್ಕೆ ಭಕ್ತರ ಮಹಾಪೂರವೇ ಹರಿದುಬರುತ್ತಿದೆ
ಕಳೆದ ಕೆಲವು ದಿನಗಳಿಂದ ಅತ್ಯಂತ ವೈಭವದಿಂದ ನಡೆಯುತ್ತಿದ್ದ ಹಾಸನಾಂಬೆ ದರ್ಶನೋತ್ಸವವು ಇಂದು ಮುಕ್ತಾಯದ ಹಂತಕ್ಕೆ ತಲುಪಿದೆ. ಸಾರ್ವಜನಿಕರು ಮತ್ತು ಧರ್ಮದರ್ಶನ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಇಂದು ಮಧ್ಯರಾತ್ರಿಯವರೆಗೆ ಮಾತ್ರ ಕ್ಯೂ ನಿಲ್ಲಲು ಅವಕಾಶವಿರುತ್ತದೆ. ಆ ಬಳಿಕ ಸಾಲನ್ನು ಸ್ಥಗಿತಗೊಳಿಸಲಾಗುತ್ತದೆ. ಕೊನೆಯ ದಿನವಾದ್ದರಿಂದ ಹಾಸನ ನಗರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ವಿಐಪಿ ಪಾಸ್ ಹಾಗೂ ಸಾಮಾನ್ಯ ಸಾಲುಗಳೆರಡರಲ್ಲೂ ಕಿಲೋಮೀಟರ್‌ಗಟ್ಟಲೆ ಜನ ಜಮಾಯಿಸಿದ್ದಾರೆ. ಕೊನೆಯ ಕ್ಷಣದವರೆಗೂ ಸಾಲಿನಲ್ಲಿ ನಿಲ್ಲುವ ಪ್ರತಿಯೊಬ್ಬ ಭಕ್ತನಿಗೂ ದೇವಿಯ ದರ್ಶನ ಕಲ್ಪಿಸಲಾಗುತ್ತದೆ.
ಶಾಸ್ತ್ರೋಕ್ತ ಸಂಪ್ರದಾಯಗಳ ಪ್ರಕಾರ ನಾಳೆ (ನವೆಂಬರ್ 11, ಬುಧವಾರ) ಮಧ್ಯಾಹ್ನ 12 ಗಂಟೆಯ ನಂತರ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಅಧಿಕೃತವಾಗಿ ಮುಚ್ಚಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಗೆ ಬೀಗ ಮುದ್ರೆ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಳೆ ಸಾರ್ವಜನಿಕ ದರ್ಶನಕ್ಕೆ ಸಂಪೂರ್ಣವಾಗಿ ಅವಕಾಶವಿರುವುದಿಲ್ಲ.
ನಾಳೆ ದೇವಾಲಯದ ಬಾಗಿಲು ಮುಚ್ಚಿದರೆ, ಗರ್ಭಗುಡಿಯಲ್ಲಿ ಹಚ್ಚಿರುವ ದೀಪ, ಮುಡಿಸಿರುವ ಹೂವು ಹಾಗೂ ಇಟ್ಟಿರುವ ನೈವೇದ್ಯವು ಮುಂದಿನ ವರ್ಷದ ದರ್ಶನೋತ್ಸವದವರೆಗೂ ಹಾಗೇ ಇರಲಿದೆ ಎಂಬುದು ಈ ಕ್ಷೇತ್ರದ ಪವಾಡ ಮತ್ತು ನಂಬಿಕೆ. ಈ ಅಪರೂಪದ ದರ್ಶನ ಭಾಗ್ಯವನ್ನು ಪಡೆಯಲು ಇಂದೇ ಕೊನೆಯ ಅವಕಾಶವಾಗಿದ್ದು, ಇಂದಿನ ನಂತರ ಭಕ್ತರು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತದೆ.