Hassan Woman Missing: ಹಾಸನದಲ್ಲಿ ನವವಿವಾಹಿತೆ ಕಣ್ಮರೆ ಕೇಸ್; 8 ದಿನಗಳ ಬಳಿಕ ಮೃತದೇಹ ಪತ್ತೆ!
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಬಳಿ ಹೇಮಾವತಿ ನಾಲೆಯಲ್ಲಿ ನವವಿವಾಹಿತೆ ಪ್ರಿಯಾಂಕಾ ಅವರ ಮೃತದೇಹ ಸಿಕ್ಕಿದೆ. ಸೆ.19ರ ರಾತ್ರಿ ಚನ್ನರಾಯಪಟ್ಟಣ ತಾಲೂಕು ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ತನ್ನ ಎದುರೇ ಪ್ರಿಯಾಂಕಾ ನಾಲೆಗೆ ಜಿಗಿದಿದ್ದಳು ಎಂದು ಪತಿ ರಾಜಶೇಖರ್ ಹೇಳಿದ್ದ. ಸುದೀರ್ಘ ಶೋಧ ಕಾರ್ಯಾಚರಣೆ ಬಳಿಕ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ.
ಮೃತ ನವವಿವಾಹಿತೆ ಪ್ರಿಯಾಂಕಾ. -
ಹಾಸನ: ಜಿಲ್ಲೆಯಲ್ಲಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ನವವಿವಾಹಿತೆ ಪ್ರಿಯಾಂಕಾ (Hassan Woman Missing) ಅವರ ಮೃತದೇಹ ಪತ್ತೆಯಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಬಳಿ ಹೇಮಾವತಿ ನಾಲೆಯಲ್ಲಿ ಇಂದು ಮೃತದೇಹ ಸಿಕ್ಕಿದೆ. 8 ದಿನಗಳಿಂದ ಪ್ರಿಯಾಂಕಾ ಮೃತದೇಹಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು.
ಸೆ.19ರ ರಾತ್ರಿ ಚನ್ನರಾಯಪಟ್ಟಣ ತಾಲೂಕು ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ತನ್ನ ಎದುರೇ ಪ್ರಿಯಾಂಕಾ ನಾಲೆಗೆ ಜಿಗಿದಿದ್ದಳು ಎಂದು ಪತಿ ರಾಜಶೇಖರ್ ಹೇಳಿದ್ದ. ಆದರೆ, ಮಗಳನ್ನು ಆಕೆಯೇ ಪತಿಯೇ ನಾಲೆಗೆ ತಳ್ಳಿದ್ದಾನೆಂದು ಪೋಷಕರು ಆರೋಪಿಸಿದ್ದರು.
ಆಕೆಗೆ ಈಜು ಬರುತ್ತದೆ, ಅವಳಿಗೆ ಮೊದಲೆ ಮದುವೆಯಾಗಿತ್ತು ಎಂದು ರಾಜಶೇಖರ್ ಪೋಷಕರು ಪ್ರತ್ಯಾರೋಪ ಮಾಡಿದ್ದರು. ಹೇಮಾವತಿ ನಾಲೆಯಲ್ಲಿ ನೀರು ನಿಲ್ಲಿಸಿದ ಹಿನ್ನೆಲೆ ಇಂದು ಶ್ರವಣಬೆಳಗೊಳದ ಬಳಿ ಹೇಮಾವತಿ ನಾಲೆಯಲ್ಲಿ ಪ್ರಿಯಾಂಕಾ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಪ್ರಿಯಾಂಕ ಅವರಿಗೆ ಕೇವಲ 8 ತಿಂಗಳ ಹಿಂದೆಯಷ್ಟೇ ಕುರುವಂಕ ಗ್ರಾಮದ ರಾಜಶೇಖರ (27) ಎಂಬಾತನೊಂದಿಗೆ ಮದುವೆಯಾಗಿತ್ತು. ಇನ್ನು, ನವವಿವಾಹಿತೆ ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದರು. ಆದರೆ, ಸೆಪ್ಟೆಂಬರ್ 19 ರಂದು ಪತಿ ರಾಜಶೇಖರ ಆಕೆಯನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಪ್ರಿಯಾಂಕಾ ತನ್ನ ತಂದೆ ದೊರೆಸ್ವಾಮಿಗೆ ಫೋನ್ ಮಾಡಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು. ತಂದೆಗೆ ಫೋನ್ ಮಾಡಿದ ವಿಷಯವಾಗಿ ಪತಿ ಹಾಗೂ ಅತ್ತೆ ವಿಜಯಲಕ್ಷ್ಮಿ ಜಗಳವಾಡಿದ್ದರು ಎನ್ನಲಾಗಿದೆ.
ಮುಂದುವರಿದು, ಆಸ್ಪತ್ರೆಯಲ್ಲಿ ತೋರಿಸಿ ವಾಪಸ್ ಚಿಕ್ಕನಾಯಕನಹಳ್ಳಿ ಗ್ರಾಮದ ಹೇಮಾವತಿ ಎಡದಂಡೆ ನಾಲೆ ಬಳಿ ಬರುವಾಗ, ಪತ್ನಿ ಬೈಕ್ ನಿಲ್ಲಿಸುವಂತೆ ಹೇಳಿ ಧಿಡೀರ್ ಎಂದು ನಾಲೆ ನೀರಿಗೆ ಜಿಗಿದಿದ್ದಾಳೆ ಎಂದು ಪತಿ ರಾಜಶೇಖರ ಹೇಳಿಕೊಂಡಿದ್ದ. ಜತೆಗೆ, ಆಕೆಯನ್ನು ರಕ್ಷಿಸಲು ತಾನೂ ಸಹ ನೀರಿಗೆ ಜಿಗಿದಿದ್ದೆ, ಆದರೆ ನೀರು ಕುಡಿದು ಅಸ್ವಸ್ಥನಾದೆ, ಆಕೆಯನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಆತ ಹೇಳಿದ್ದ. ಇದರೊಂದಿಗೆ, ತಾನು ಅಥವಾ ತನ್ನ ಮನೆಯವರು ಯಾವುದೇ ವರದಕ್ಷಿಣೆ ಕಿರುಕುಳ ನೀಡಿಲ್ಲ ಎಂದು ಆತ ವಾದಿಸಿದ್ದಾನೆ.
ಯುವತಿ ಮೇಲೆ ಮತ್ತೆ ಯುವಕರ ಗುಂಪಿನಿಂದ ಹಲ್ಲೆ; ವಿಡಿಯೊ ವೈರಲ್
ಮತ್ತೊಂದೆಡೆ, ಪ್ರಿಯಾಂಕಾ ಪೋಷಕರ ಪ್ರಕಾರ, ಮದುವೆಯಾದಾಗಿನಿಂದಲೂ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು ಮತ್ತು ಈ ಸಂಬಂಧ ಈ ಹಿಂದೆ ಎರಡು ಬಾರಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಪತಿಯೇ ಆಕೆಯನ್ನು ನಾಲೆಗೆ ತಳ್ಳಿ ಕೊಲೆ ಮಾಡಿ, ಈಗ ಕಥೆ ಕಟ್ಟುತ್ತಿದ್ದಾನೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.