ಅ.23ರಂದು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಹಾವೇರಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ
ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಅ.23ರಂದು ಮತದಾನ ನಡೆಯಲಿದ್ದು, ಹಾವೇರಿ ಜಿಲ್ಲೆಯಲ್ಲಿ ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ. ವಿಜಯ ಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.
-
ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಅ.23ರಂದು ಮತದಾನ ನಡೆಯಲಿದ್ದು, ಹಾವೇರಿ ಜಿಲ್ಲೆಯಲ್ಲಿ ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.
ಜಿಲ್ಲೆಯ ಎಂಟು ತಾಲೂಕುಗಳ ವ್ಯಾಪ್ತಿಯ 29 ಮತಗಟ್ಟೆಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಒಟ್ಟು 24,648 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಇವರಲ್ಲಿ 15,547 ಪುರುಷರು ಹಾಗೂ 9,101 ಮಹಿಳೆಯರಿದ್ದಾರೆ.
ಎಲ್ಲ 29 ಮತಗಟ್ಟೆಗಳೂ ಅತಿಸೂಕ್ಷ್ಮ
ಜಿಲ್ಲೆಯ ಎಲ್ಲ 29 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲು ಎಲ್ಲ ಮತಗಟ್ಟೆಗಳಲ್ಲೂ ವೆಬ್ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸ ಲಾಗಿದೆ. ಮತಗಟ್ಟೆ ಅಧಿಕಾರಿಗಳು ಹಾಗೂ ಮೈಕ್ರೋ ಅಬ್ಸರ್ವರ್ಗಳಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ.
ಇದನ್ನೂ ಓದಿ: Haveri News: ಪ.ಪದವೀಧರ ಕ್ಷೇತ್ರದ ಕೈ ಗೆಲುವು ಖಚಿತ: ಉಸ್ತುವಾರಿ ಮಿನಿಸ್ಟರ್ ಆರ್.ಲಮಾಣಿ
252 ಪೊಲೀಸ್ ಸಿಬ್ಬಂದಿ ನಿಯೋಜನೆ
ಚುನಾವಣೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಮೂವರು ಡಿವೈಎಸ್ಪಿ, 10 ಸಿಪಿಐ, 19 ಪಿಎಸ್ಐ, 29 ಎಎಸ್ಐ, 77 ಹೆಡ್ಕಾನ್ಸ್ಟೆಬಲ್, 85 ಪೊಲೀಸ್ ಕಾನ್ಸ್ಟೆಬಲ್ ಹಾಗೂ 29 ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳು ಸೇರಿದಂತೆ ಒಟ್ಟು 252 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮತದಾನಕ್ಕೆ ಯಾವ ದಾಖಲೆ ಅಗತ್ಯ?
ಮತದಾರರು ಚುನಾವಣಾ ಆಯೋಗ ನಿಗದಿಪಡಿಸಿರುವ ಕೆಳಗಿನ 10 ದಾಖಲೆಗಳ ಪೈಕಿ ಯಾವುದಾದರೂ ಒಂದು ಮಾನ್ಯ ದಾಖಲೆಯನ್ನು ಹಾಜರುಪಡಿಸಿ ಮತ ಚಲಾಯಿಸಬಹುದು.
ಆಧಾರ್ ಕಾರ್ಡ್
ಚಾಲನಾ ಪರವಾನಗಿ
ಪ್ಯಾನ್ ಕಾರ್ಡ್
ಭಾರತೀಯ ಪಾಸ್ಪೋರ್ಟ್
ಸರ್ಕಾರಿ, ಸಾರ್ವಜನಿಕ ವಲಯದ ಉದ್ಯಮ, ಸ್ಥಳೀಯ ಸಂಸ್ಥೆ ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆ ನೀಡಿದ ಸೇವಾ ಗುರುತಿನ ಚೀಟಿ
ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ
ಪದವೀಧರರ ಕ್ಷೇತ್ರದ ಮತದಾರರು ಉದ್ಯೋಗದಲ್ಲಿರುವ ಶಿಕ್ಷಣ ಸಂಸ್ಥೆ ನೀಡಿದ ಸೇವಾ ಗುರುತಿನ ಚೀಟಿ
ವಿಶ್ವವಿದ್ಯಾಲಯ ನೀಡಿದ ಮೂಲ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ
ಸಕ್ಷಮ ಪ್ರಾಧಿಕಾರ ನೀಡಿದ ಮೂಲ ಅಂಗವೈಕಲ್ಯ ಪ್ರಮಾಣಪತ್ರ
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ (ಯುಡಿಐಡಿ).
ಮತಗಟ್ಟೆಯೊಳಗೆ ಹರಿತವಾದ ವಸ್ತುಗಳು, ಮೊಬೈಲ್ ಕ್ಯಾಮೆರಾ, ಪೆನ್, ಬೆಂಕಿಪೊಟ್ಟಣ, ಲೈಟರ್ ಹಾಗೂ ನೀರಿನ ಬಾಟಲಿಯಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸ ಲಾಗಿದೆ.
19 ವಾಹನಗಳ ವ್ಯವಸ್ಥೆ
ಮತದಾನ ಕಾರ್ಯಕ್ಕೆ ಸಿಬ್ಬಂದಿ ಹಾಗೂ ಅಗತ್ಯ ಸಾಮಗ್ರಿಗಳ ಸಾಗಣೆಗಾಗಿ ಜಿಲ್ಲೆಯಲ್ಲಿ ಒಟ್ಟು 19 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಹಾವೇರಿ ಮತ್ತು ರಾಣೇಬೆನ್ನೂರಿಗೆ ತಲಾ ಮೂರು, ಬ್ಯಾಡಗಿಗೆ ಎರಡು, ಹಿರೇಕೆರೂರು, ರಟ್ಟಿಹಳ್ಳಿ ಹಾಗೂ ಸವಣೂರಿಗೆ ತಲಾ ಒಂದು ಮತ್ತು ಶಿಗ್ಗಾಂವ ಹಾಗೂ ಹಾನಗಲ್ಲ ತಾಲೂಕುಗಳಿಗೆ ತಲಾ ನಾಲ್ಕು ವಾಹನಗಳನ್ನು ನಿಯೋಜಿಸಲಾಗಿದೆ.
ನಾಳೆ ಮಸ್ಟರಿಂಗ್, 27ರಂದು ಮತ ಎಣಿಕೆ
ಅಕ್ಟೋಬರ್ 22ರಂದು ಜಿಲ್ಲೆಯ ಎಂಟು ತಾಲೂಕುಗಳ ತಹಶೀಲ್ದಾರ್ ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಸಾಮಗ್ರಿಗಳನ್ನು ವಿತರಿಸಿ, ನಿಗದಿತ ಮತಗಟ್ಟೆಗಳಿಗೆ ಕಳುಹಿಸಲಾಗುತ್ತದೆ.
ಅಕ್ಟೋಬರ್ 23ರಂದು ಮತದಾನ ಮುಕ್ತಾಯಗೊಂಡ ಬಳಿಕ ಮತಪೆಟ್ಟಿಗೆಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪೊಲೀಸ್ ಭದ್ರತೆಯಲ್ಲಿ ಸಂಗ್ರಹಿಸಿ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿರುವ ಭದ್ರತಾ ಕೊಠಡಿಗೆ ಸಾಗಿಸಿ ಹಸ್ತಾಂತರಿಸಲಾಗುತ್ತದೆ.
ಅ.27ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣೆಯನ್ನು ಪಾರದರ್ಶಕವಾಗಿ, ಮುಕ್ತವಾಗಿ ಹಾಗೂ ಶಾಂತಿಯುತ ವಾಗಿ ನಡೆಸಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.