Infosys Jobs: ಇನ್ಫೋಸಿಸ್‌ನಿಂದ ಗುಡ್ ನ್ಯೂಸ್; ಈ ವರ್ಷ 20,000 ಹುದ್ದೆ ನೇಮಕಾತಿ
Infosys Jobs: ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್ ಈ ವರ್ಷ 20,000 ಹೊಸಬರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಾಗಿ ಘೋಷಿಸಿದೆ. ಪ್ರತಿಸ್ಪರ್ಧಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 12,000ಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಇನ್ಫೋಸಿಸ್‌ನಿಂದ ಸಿಹಿಸುದ್ದಿ ಹೊರಬಿದ್ದಿದೆ.


ಬೆಂಗಳೂರು: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ ಜೋರಾಗಿರುವ ನಡುವೆ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಇನ್ಫೋಸಿಸ್ ಗುಡ್ ನ್ಯೂಸ್ ನೀಡಿದೆ. ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್ (Infosys Jobs) ಈ ವರ್ಷ 20,000 ಹೊಸಬರನ್ನು (ಫ್ರೆಷರ್ಸ್) ಕೆಲಸಕ್ಕೆ ನೇಮಿಸಿಕೊಳ್ಳುವುದಾಗಿ ಘೋಷಿಸಿದೆ. ಈ ಬಗ್ಗೆ ಸ್ವತಃ ಕಂಪನಿಯ ಸಿಇಒ ಸಲೀಲ್ ಪರೇಖ್ ಮಾಹಿತಿ ನೀಡಿದ್ದಾರೆ.
ಪ್ರತಿಸ್ಪರ್ಧಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 12,000ಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ. ದೇಶದ ಐಟಿ ವಲಯದಲ್ಲೇ ಇದುವರೆಗಿನ ಅತಿದೊಡ್ಡ ಪಿಂಕ್ ಸ್ಲಿಪ್ ನೀಡುವ ಯೋಜನೆಯನ್ನು ಟಿಸಿಎಸ್ ಕೆಲ ದಿನಗಳ ಹಿಂದೆ ಘೋಷಿಸಿತ್ತು. ಭಾರತದ ಯಾವುದೇ ಐಟಿ ಕಂಪನಿ ಇಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತ ಘೋಷಿಸಿರಲಿಲ್ಲ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 17,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದೇವೆ ಎಂದಿರುವ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್, ಈ ವರ್ಷ ಸುಮಾರು 20,000 ಕಾಲೇಜು ಪದವೀಧರರನ್ನು ಕಂಪನಿಗೆ ಕರೆತರಲು ಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ (ಎಐ) ಮತ್ತು ಮರುಕೌಶಲ್ಯದಲ್ಲಿ ಕಾರ್ಯತಂತ್ರವಾಗಿ ಹೂಡಿಕೆ ಮಾಡಲಾಗುತ್ತಿದ್ದು, ಕಂಪನಿಗೆ ಮುಂಚೂಣಿಗೆ ಬರಲು ಸಹಾಯ ಮಾಡಿದೆ. ವಿವಿಧ ಹಂತಗಳಲ್ಲಿ ಕಂಪನಿಯ ಸುಮಾರು 2,75,000 ಉದ್ಯೋಗಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಎಐ ಪರಿಣಾಮದ ಬಗ್ಗೆ ಮಾತನಾಡಿರುವ ಅವರು, ಎಐ ಆಧಾರಿತ ಆಟೋಮೆಷನ್‌ನಿಂದ ಸಾಫ್ಟ್‌ವೇರ್ ಅಭಿವೃದ್ಧಿ ವಿಷಯದಲ್ಲಿ 5ರಿಂದ 15ರಷ್ಟು ಉತ್ಪಾದಕತೆ ಹೆಚ್ಚಾಗಲಿದೆ. ನಿಪುಣರ ಮೇಲ್ವಿಚಾರಣೆಯಲ್ಲಿ ಆಟೋಮೆಷನ್ ಕಾರಣದಿಂದ ತಮ್ಮ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಇನ್ಫೋಸಿಸ್ ಫಿನಾಕಲ್ ಶೇ.20 ಹೆಚ್ಚುವರಿ ಉತ್ಪಾದಕತೆ ಸಾಧಿಸಿದೆ. ಆದ್ದರಿಂದ ಎಐಗೆ ಕೌಶಲ್ಯಯುತ ಮಾನವ ಸಂಪನ್ಮೂಲ ಜತೆಯಾದರೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | IPL 2026: ಕೋಲ್ಕತಾ ನೈಟ್ ರೈಡರ್ಸ್ ಹೆಡ್ ಕೋಚ್ ಹುದ್ದೆಯಿಂದ ಹೊರಬಿದ್ದ ಚಂದ್ರಕಾಂತ್ ಪಂಡಿತ್!
ಇದೇ ವೇಳೆ ವೇತನ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣವಾಗಿದೆ. ಮುಂದಿನ ವೇತನ ಏರಿಕೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.