Sandalwood Actor Ramesh Arvind: ಪ್ರೀತಿ–ಸಲುಗೆಯಿಂದ ಮಕ್ಕಳ ಪ್ರತಿಭೆ ಹೊರ ತನ್ನಿ: ಪ್ರೇಕ್ಷಕರ ನೋಟದಲ್ಲಿ ಪ್ರೀತಿ ಇರಲಿ ನಟ ಅರವಿಂದ ರಮೇಶ್
ಮಕ್ಕಳನ್ನು ಬೆದರಿಸಿ, ಹೆದರಿಸಿ ಕಲಿಸುವ ಬದಲು ಪ್ರೀತಿ ಹಾಗೂ ಸಲುಗೆಯಿಂದ ಅವರಲ್ಲಿನ ಪ್ರತಿಭೆ ಯನ್ನು ಗುರುತಿಸಿ ಹೊರತರುವ ಪ್ರಯತ್ನ ಮಾಡಬೇಕು. ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಸುಂದರ ಮೂರ್ತಿಯಂತೆ ರೂಪಿಸಬಹುದು. ಶಿಕ್ಷಕರ ನಿರಂತರ ಬೆಂಬಲ ದೊರೆತರೆ ಮಕ್ಕಳು ಇತಿಹಾಸ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ
-
ಕಲಬುರಗಿ: ವಿದ್ಯಾರ್ಥಿಗಳಲ್ಲಿರುವ ಭಯ, ತಪ್ಪು ಕಲ್ಪನೆ ಹಾಗೂ ಕೀಳರಿಮೆಯನ್ನು ಹೋಗಲಾ ಡಿಸಿ, ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದು ಚಲನಚಿತ್ರ ನಟ ಅರವಿಂದ ರಮೇಶ್(Ramesh Arvind) ಹೇಳಿದರು.
ನಗರದ ಜಸ್ಟಿಸ್ ಶಿವರಾಜ ವಿ.ಪಾಟೀಲ ಸಾಂಸ್ಕೃತಿಕ ಭವನದಲ್ಲಿ ನಡೆದ ‘ಗುರುವೇ ನಮಃ–ಕಲ್ಯಾಣ ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಮೌಲ್ಯಾಧಾರಿತ ಶಿಕ್ಷಣ’ ವಿಷಯದ ಪ್ರೌಢ ಶಾಲಾ ಶಿಕ್ಷಕರ ಸಮಾವೇಶದಲ್ಲಿ ಪ್ರೇರಣಾ ಉಪನ್ಯಾಸ ನೀಡಿದರು.
ಮಕ್ಕಳನ್ನು ಬೆದರಿಸಿ, ಹೆದರಿಸಿ ಕಲಿಸುವ ಬದಲು ಪ್ರೀತಿ ಹಾಗೂ ಸಲುಗೆಯಿಂದ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರುವ ಪ್ರಯತ್ನ ಮಾಡಬೇಕು. ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಸುಂದರ ಮೂರ್ತಿಯಂತೆ ರೂಪಿಸಬಹುದು. ಶಿಕ್ಷಕರ ನಿರಂತರ ಬೆಂಬಲ ದೊರೆತರೆ ಮಕ್ಕಳು ಇತಿಹಾಸ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ತರಗತಿಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ಜತೆಗೆ ವಿದ್ಯಾರ್ಥಿಗಳ ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ‘ನೀನು ಸರಿ ಇದ್ದರೆ ಸಮಾಜ ಹಾಗೂ ದೇಶವೂ ಸರಿಯಾಗಿರುತ್ತದೆ’ ಎಂಬ ಸಂದೇಶವನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: Actor Ramesh Aravind: ರಮೇಶ್ ಅರವಿಂದ್ ಡೇ; ಅಮೆರಿಕದ ಟೆಕ್ಸಾಸ್‌ನಲ್ಲಿ ಕನ್ನಡದ ನಟನಿಗೆ ವಿಶೇಷ ಗೌರವ
ವಿದ್ಯಾರ್ಥಿಗಳ ಗೆಲುವು ಶಿಕ್ಷಕರ ಗೆಲುವಾಗಬೇಕು. ನಿಷ್ಠೆ, ಬದ್ಧತೆ ಹಾಗೂ ಶಿಸ್ತಿನಿಂದ ಬೋಧಿಸುವ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಬೇಕು. ಕಠಿಣ ವಿಷಯಗಳ ಬಗ್ಗೆ ಮಕ್ಕಳಲ್ಲಿ ಭಯ ಮೂಡಿಸುವ ಬದಲು ‘ಇದು ಕಷ್ಟವಲ್ಲ, ಸರಳವಾಗಿದೆ’ ಎಂಬ ಆತ್ಮವಿಶ್ವಾಸ ತುಂಬಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ವೃತ್ತಿ ಒಂದು ಯೋಗ: ನ್ಯಾ.ಇನವಳ್ಳಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ಟಿ.ಎನ್. ಇನವಳ್ಳಿ, ಶಿಕ್ಷಕರಾಗಿ ಕೆಲಸ ಮಾಡುವುದು ಒಂದು ಯೋಗ. ಸಮಾಜ ಶಿಕ್ಷಕರ ಮೇಲೆ ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳ ಬೇಕು. ಶಿಕ್ಷಕರಲ್ಲಿ ವಿದ್ಯೆ, ಜ್ಞಾನ ಹಾಗೂ ಧರ್ಮದ ಅರಿವು ಇರಬೇಕು ಎಂದರು.
ಮಕ್ಕಳಿಗೆ ಬೋಧಿಸುವ ಮೊದಲು ಶಿಕ್ಷಕರು ಗ್ರಂಥಾಲಯದಲ್ಲಿ ಕುಳಿತು ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನ ಶಕ್ತಿ ನೀಡುತ್ತದೆ; ಕಲಿಕೆಗೆ ಅಂತ್ಯವಿಲ್ಲ. ಅಂಕಗಳ ಜತೆಗೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವೂ ಆಗಬೇಕು ಎಂದು ಹೇಳಿದರು.
ಇತ್ತೀಚೆಗೆ ಬಿಎಸ್ಸಿ-ಬಿಇಡಿ, ಎಂಎಸ್ಸಿ-ಬಿಇಡಿ ಹಾಗೂ ಎಂಎ-ಬಿಇಡಿ ಪದವೀಧರರು ನ್ಯಾಯಾಲಯ ಗಳಲ್ಲಿ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸೇರುತ್ತಿದ್ದಾರೆ. ಶಿಕ್ಷಕರ ಕೆಲಸ ಸಿಗುತ್ತಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. ಈ ಬೆಳವಣಿಗೆ ಕುರಿತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರೊ. ಚನ್ನರೆಡ್ಡಿ ಪಾಟೀಲ್ ಮಾತನಾಡಿದರು. ನ್ಯಾ.ನಾಡೋಜ ಶಿವರಾಜ ವಿ.ಪಾಟೀಲ ಆನ್‌ಲೈನ್ ಮೂಲಕ ಮಾರ್ಗದರ್ಶನ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ಎನ್.ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಯಲ್ಲಿ ಶಿಕ್ಷಕರ ಪಾತ್ರ ಕುರಿತು ಪ್ರೊ. ಎಸ್.ಎಂ. ಶಿವಪ್ರಸಾದ ಹಾಗೂ ತರಬೇತುದಾರ ಮಹೇಶ್ ಮಸಾಳ ಉಪನ್ಯಾಸ ನೀಡಿದರು.
ಡಿಡಿಪಿಐಗಳಾದ ಸಿ.ಎಸ್. ಮುಧೋಳ್, ಶಂಕ್ರಮ್ಮ ಢವಳಗಿ, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ ಪಾಟೀಲ್, ಸರ್ವಜ್ಞ ಶಾಲೆ ನಿರ್ದೇಶಕಿ ಸಂಗೀತಾ ಪಾಟೀಲ್, ಎಸ್.ಎಂ. ಪಾಟೀಲ್, ಪ್ರಶಾಂತ ಬಿಜಾಸಪುರ, ಪ್ರಶಾಂತ ಕುಲಕರ್ಣಿ, ರಾಕೇಶ ಪಾಟೀಲ್, ವಿನುತಾ ಆರ್.ಬಿ., ಡಾ.ಶೋಭಾ ಪಾಟೀಲ್, ಕರುಣೇಶ ಹಿರೇಮಠ ಹಾಗೂ ಗುರುರಾಜ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.
ಅಂಕಗಳ ಜತೆಗೆ ಆತ್ಮವಿಶ್ವಾಸವೂ ಮುಖ್ಯ: ನ್ಯಾ.ಟಿ.ಎನ್.ಇನವಳ್ಳಿ
ಜ್ಞಾನ ಮನುಷ್ಯನಿಗೆ ಶಕ್ತಿ ನೀಡುತ್ತದೆ. ಕಲಿಕೆಗೆ ಅಂತ್ಯವಿಲ್ಲ. ವಿದ್ಯಾರ್ಥಿಗಳ ಸಾಧನೆಯನ್ನು ಕೇವಲ ಅಂಕಗಳ ಆಧಾರದಲ್ಲಿ ಅಳೆಯಬಾರದು. ಅವರಲ್ಲಿ ಆತ್ಮವಿಶ್ವಾಸ, ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವುದು ಶಿಕ್ಷಕರ ಕರ್ತವ್ಯ. ಮಕ್ಕಳಿಗೆ ಬೋಧಿಸುವ ಮೊದಲು ಶಿಕ್ಷಕರು ಸ್ವತಃ ನಿರಂತರವಾಗಿ ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಮಾಜ ಶಿಕ್ಷಕರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಪ್ರತಿಯೊಬ್ಬ ಶಿಕ್ಷಕರೂ ನಿಷ್ಠೆ ಹಾಗೂ ಬದ್ಧತೆ ಯಿಂದ ಕಾರ್ಯನಿರ್ವಹಿಸಬೇಕು ಎಂದು ನ್ಯಾ.ಟಿ.ಎನ್. ಇನವಳ್ಳಿ ಅವರು ಕಿವಿಮಾತು ಹೇಳಿದರು.
![]()
ಮಕ್ಕಳನ್ನು ಬೆದರಿಸಿ, ಹೆದರಿಸಿ ಕಲಿಸುವ ಬದಲು ಪ್ರೀತಿ ಮತ್ತು ಸಲುಗೆಯಿಂದ ಅವರ ಪ್ರತಿಭೆ ಹೊರ ತನ್ನಿ. ಶಿಕ್ಷಕರ ನೋಟದಲ್ಲಿ ಪ್ರೀತಿ ಇದ್ದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಶಿಕ್ಷಕರ ನಿರಂತರ ಮಾರ್ಗದರ್ಶನದಿಂದ ಮಕ್ಕಳು ಇತಿಹಾಸ ಸೃಷ್ಟಿಸಬಲ್ಲರು.
- ಅರವಿಂದ ರಮೇಶ್, ನಟ
![]()
ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರೇರಣಾದಾಯಕ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ನಿರಂತರ ಅಧ್ಯಯನದ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು. ತಂದೆ-ತಾಯಿಯ ನಿರೀಕ್ಷೆಗೆ ತಕ್ಕಂತೆ ಗುರಿ ರೂಪಿಸಿಕೊಳ್ಳಬೇಕು.
- ಪ್ರೊ. ಚನ್ನರೆಡ್ಡಿ ಪಾಟೀಲ್, ಸಂಸ್ಥಾಪಕ, ಸರ್ವಜ್ಞ ಶಿಕ್ಷಣ ಸಂಸ್ಥೆ