ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೆ.8ರಿಂದ 14ರವರೆಗೆ ಕನ್ನೂರಿನಲ್ಲಿ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ 118ನೇ ಜಯಂತ್ಯುತ್ಸವ ಸಪ್ತಾಹ; ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮ

Shree Ganapatrao Maharaj Kannur's 118th Janmotsav Saptah: ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರದಲ್ಲಿ ಸೆಪ್ಟೆಂಬರ್ 8ರಂದು ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರ 18ನೇ ಜಯಂತ್ಯುತ್ಸವ ಸಪ್ತಾಹಕ್ಕೆ ಚಾಲನೆ ಸಿಗಲಿದೆ. ವಿವಿಧ ಮಠಾಧೀಶರು, ಸಂತರು, ಸ್ವಾಮೀಜಿಗಳು, ವಿದ್ವಾಂಸರು, ಪ್ರವಚನಕಾರರು ಹಾಗೂ ಕಲಾವಿದರು ಸಪ್ತಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆ.8ರಿಂದ ಕನ್ನೂರಿನಲ್ಲಿ ಸದ್ಗುರು ಗಣಪತರಾವ ಮಹಾರಾಜರ ಜಯಂತ್ಯುತ್ಸವ

-

Prabhakara R
Prabhakara R Sep 7, 2026 3:06 PM

ಕನ್ನೂರ: ಬ್ರಹ್ಮನಿಷ್ಠ ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರ (Shree Ganapatrao Maharaj Kannur) 118ನೇ ಜಯಂತ್ಯುತ್ಸವ ಸಪ್ತಾಹವನ್ನು ಸೆಪ್ಟೆಂಬರ್ 8ರಿಂದ 14ರವರೆಗೆ ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರದಲ್ಲಿ ವೈಭವದಿಂದ ಆಯೋಜಿಸಲಾಗಿದೆ. ಸದ್ಗುರುಗಳ ಆಧ್ಯಾತ್ಮಿಕ ಚಿಂತನೆ, ಜೀವನ ಸಂದೇಶ ಹಾಗೂ ಶಾಂತಿ ಕುಟೀರ ಸಂಪ್ರದಾಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ಯುವಪೀಳಿಗೆಗೆ ತಲುಪಿಸುವ ಆಶಯದೊಂದಿಗೆ ಏಳು ದಿನಗಳ ಕಾಲ ಜ್ಞಾನ, ಭಕ್ತಿ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಸಂಗಮವಾಗಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

ವಿವಿಧ ಮಠಾಧೀಶರು, ಸಂತರು, ಸ್ವಾಮೀಜಿಗಳು, ವಿದ್ವಾಂಸರು, ಪ್ರವಚನಕಾರರು ಹಾಗೂ ಕಲಾವಿದರು ಸಪ್ತಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 8ರಂದು ಸಪ್ತಾಹದ ಉದ್ಘಾಟನೆಯೊಂದಿಗೆ ‘ದಾಸಬೋಧ’ ಗ್ರಂಥ ವಾಚನ ಆರಂಭವಾಗಲಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆಧ್ಯಾತ್ಮಿಕ ಪ್ರವಚನ, ಭಜನೆ, ಭಕ್ತಿ ಸಂಗೀತ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿದಿನ ಬೆಳಗಿನ ಕಾಕಡಾರತಿ, ಸಾಮೂಹಿಕ ಧ್ಯಾನ, ಶ್ರೀ ಸದ್ಗುರುಗಳ ಧ್ವನಿಮುದ್ರಿತ ಪ್ರವಚನಗಳ ಪ್ರಸಾರ, ಶ್ರಮದಾನ ಹಾಗೂ ಸಾಂಪ್ರದಾಯಿಕ ಭಜನೆಗಳು ನಡೆಯಲಿವೆ.

‘ಪರಮಾಮೃತ ಬೋಧ’ ಭಾಗ–2 ಸೇರಿ ಪ್ರಮುಖ ಕೃತಿಗಳ ಲೋಕಾರ್ಪಣೆ

ಜಯಂತ್ಯುತ್ಸವದ ಅಂಗವಾಗಿ ಹಲವು ಮಹತ್ವದ ಆಧ್ಯಾತ್ಮಿಕ ಪ್ರಕಟಣೆಗಳು ಲೋಕಾರ್ಪಣೆಗೊಳ್ಳಲಿವೆ. ಮರಾಠಿ ‘ಭಾವಾರ್ಥ ದಾಸಬೋಧ’ದ ಎರಡನೇ ಆವೃತ್ತಿ ಶ್ರೀ ಸದ್ಗುರುಗಳ ಕನ್ನಡ ಪ್ರವಚನಗಳ ಸಂಕಲನವಾದ ‘ಪರಮಾಮೃತ ಬೋಧ’ ಭಾಗ–2ಹಾಗೂ ‘ಶಾಂತಿ ಕುಟೀರ ಸಂದೇಶ’ ವಿಶೇಷ ಸಂಚಿಕೆ ಬಿಡುಗಡೆಗೊಳ್ಳಲಿವೆ.

ಸದ್ಗುರುಗಳ ಆಧ್ಯಾತ್ಮಿಕ ಚಿಂತನೆ ಮತ್ತು ಅನುಭಾವದ ಸಂದೇಶವನ್ನು ಸಾಹಿತ್ಯದ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನವಾಗಿ ಈ ಪ್ರಕಟಣೆಗಳನ್ನು ಹೊರತರಲಾಗುತ್ತಿದೆ.

ಯುವಪೀಳಿಗೆಗೆ ‘Know Your Sampradaya’

ಶಾಂತಿ ಕುಟೀರ ಸಂಪ್ರದಾಯದ ತತ್ವ, ಪರಂಪರೆ, ಗುರುಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ KYS – ‘Know Your Sampradaya’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದರೊಂದಿಗೆ ನನ್ನ ಗುರುಬಂಧು, ನನ್ನ ಸಂಪ್ರದಾಯ’ ವಿಷಯದಡಿ ಸಂವಾದಾತ್ಮಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ. ಸಂಪ್ರದಾಯದ ಕುರಿತು ಯುವಜನರಲ್ಲಿರುವ ಕುತೂಹಲ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಗುರುಪರಂಪರೆಯ ತಾತ್ವಿಕ ನೆಲೆಯನ್ನು ಪರಿಚಯಿಸುವುದು ಕಾರ್ಯಕ್ರಮದ ಆಶಯವಾಗಿದೆ.

ಆಧ್ಯಾತ್ಮಿಕ ಪರಂಪರೆಯನ್ನು ಆಧುನಿಕ ಡಿಜಿಟಲ್ ಮಾಧ್ಯಮಗಳೊಂದಿಗೆ ಬೆಸೆಯುವ ಪ್ರಯತ್ನವಾಗಿ Ramarajya Connect’ ಹಾಗೂ ಡಿಜಿಟಲ್ ಮ್ಯಾಗಜಿನ್** ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿವೆ.

‘ಅನಹದ್ – The Kabir Way’ ವಿಶೇಷ ಪ್ರದರ್ಶನ

ಸಪ್ತಾಹದಲ್ಲಿ ಅಧ್ಯಾತ್ಮದೊಂದಿಗೆ ಕಲೆ ಮತ್ತು ಸಂಸ್ಕೃತಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಕಬೀರ ದಾಸರ ದೋಹೆಗಳಲ್ಲಿರುವ ಜೀವನದರ್ಶನ ಮತ್ತು ಆಧ್ಯಾತ್ಮಿಕ ಸಂದೇಶವನ್ನು ನಾಟಕೀಯ ಅಭಿವ್ಯಕ್ತಿಯ ಮೂಲಕ ಕಟ್ಟಿಕೊಡುವ ‘ಅನಹದ್ – The Kabir Way’ ವಿಶೇಷ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ.

ಭಕ್ತಿ ಸಂಗೀತ, ಕೀರ್ತನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಲಾ ಪ್ರದರ್ಶನಗಳೊಂದಿಗೆ ಮಕ್ಕಳಿಗಾಗಿ ʼಅನುಭವ ಪದ ಗಾಯನ ಸ್ಪರ್ಧೆʼ ಹಾಗೂ ಯುವಜನತೆಗಾಗಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಆಯ್ದ ದಿನಗಳಲ್ಲಿ ಶ್ರೀ ಸದ್ಗುರುಗಳ ಅಪರೂಪದ ಪ್ರವಚನಗಳು ಹಾಗೂ ಶಾಂತಿ ಕುಟೀರ ಸಂಪ್ರದಾಯದ ವಿವಿಧ ಚಟುವಟಿಕೆಗಳಿಗೆ ಸಂಬಂಧಿಸಿದ ʼವಿಡಿಯೊ ದೃಶ್ಯಾವಳಿಗಳ ಪ್ರದರ್ಶನʼ ಏರ್ಪಡಿಸಲಾಗಿದೆ.

ರಾಮರಾಜ್ಯ ಕಲಾಮೇಳಕ್ಕೆ ರಜತ ಸಂಭ್ರಮ

ರಾಮರಾಜ್ಯ ಕಲಾಮೇಳದ ರಜತ ಮಹೋತ್ಸವ ಕೂಡ ಜಯಂತ್ಯುತ್ಸವ ಸಪ್ತಾಹಕ್ಕೆ ವಿಶೇಷ ಮೆರುಗು ನೀಡಲಿದೆ. ಇದರ ಅಂಗವಾಗಿ ವಿಶೇಷ ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಾಗರಣೆ ನಡೆಯಲಿದೆ.

ವಿವಿಧ ದಿನಗಳಲ್ಲಿ ಗಣ್ಯರು, ಮಠಾಧೀಶರು, ಸಂತರು ಮತ್ತು ವಿದ್ವಾಂಸರ ಸಾನ್ನಿಧ್ಯದಲ್ಲಿ ಪ್ರವಚನ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಸೆ. 14ರಂದು ಭವ್ಯ ಪಲ್ಲಕ್ಕಿ ಉತ್ಸವ

ಸಪ್ತಾಹದ ಸಮಾರೋಪ ದಿನವಾದ ಸೆಪ್ಟೆಂಬರ್ 14ರಂದು ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ಜನ್ಮಸ್ಥಳದಿಂದ ಶಾಂತಿ ಕುಟೀರದವರೆಗೆ ಸಕಲ ವಾದ್ಯವೃಂದಗಳೊಂದಿಗೆ ಭವ್ಯ ಪಲ್ಲಕ್ಕಿ ಉತ್ಸವ ಮತ್ತು ಮೆರವಣಿಗೆ ನಡೆಯಲಿದೆ.

ಗುರುಭಕ್ತಿ ಮತ್ತು ಸಂಪ್ರದಾಯದ ವೈಭವವನ್ನು ಅನಾವರಣಗೊಳಿಸುವ ಈ ಮೆರವಣಿಗೆಯ ಬಳಿಕ ದಾಸಬೋಧ ಗ್ರಂಥ ವಾಚನದ ಮಂಗಳ ಸಮಾಪ್ತಿ, ಪುಷ್ಪವೃಷ್ಟಿ ಹಾಗೂ ಮಹಾಪ್ರಸಾದ ನಡೆಯಲಿದ್ದು, ಇದರೊಂದಿಗೆ ಏಳು ದಿನಗಳ ಜಯಂತ್ಯುತ್ಸವ ಸಪ್ತಾಹ ಸಂಪನ್ನಗೊಳ್ಳಲಿದೆ.

ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜ ಕನ್ನೂರು ವಿಶ್ವಸ್ಥ ಸಮಿತಿ, ಶಾಂತಿ ಕುಟೀರ ಹಾಗೂ ಸದ್ಗುರುಗಳಿಂದ ನಿರ್ದೇಶಿತ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 118ನೇ ಜಯಂತ್ಯುತ್ಸವ ಸಪ್ತಾಹವನ್ನು ಆಯೋಜಿಸಲಾಗಿದೆ.

ನಾಡಿನ ವಿವಿಧ ಭಾಗಗಳಿಂದ ಭಕ್ತರು, ಗುರುಬಂಧು–ಭಗಿನಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜ್ಞಾನ–ಭಕ್ತಿ ಸಂಗಮದ ಈ ಸಪ್ತಾಹದಲ್ಲಿ ಪಾಲ್ಗೊಂಡು ಸದ್ಗುರುಗಳ ತತ್ವ–ಸಂದೇಶದ ಜ್ಞಾನಾಮೃತವನ್ನು ಸವಿಯಬೇಕುಎಂದು ಶಾಂತಿ ಕುಟೀರ ಟ್ರಸ್ಟ್ ಅಧ್ಯಕ್ಷ ಶ್ರೀ ಗೋವಿಂದ ಬಾಹೇತಿ ಹಾಗೂ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: 9880279268 | 9880419364 | 8095219521 | 9845066861 ಸಂಪರ್ಕಿಸಿ