ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಾಗತಿಕ ಮಾರುಕಟ್ಟೆಯಲ್ಲಿ ಕಲಬುರಗಿ ತೊಗರಿ ಬೇಳೆ ಕಂಪು; ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

Man Ki Baat: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದ 139ನೇ ಆವೃತ್ತಿಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು. ಕಲಬುರಗಿ ತೊಗರಿ ಬೇಳೆಯು ಇದೀಗ ಮೊದಲ ಬಾರಿಗೆ ಮಾಲ್ಡೀವ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮೋದಿ ಈ ಕುರಿತು ಮಾತನಾಡಿದ್ದಾರೆ.

ಕಲಬುರಗಿ ತೊಗರಿ ಬೇಳೆ ಕುರಿತು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 25, 2026 1:13 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ 'ಮನ್ ಕಿ ಬಾತ್' (Man Ki Baat) ಕಾರ್ಯಕ್ರಮದ 139ನೇ ಆವೃತ್ತಿಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು. ಕಲಬುರಗಿ ತೊಗರಿ ಬೇಳೆಯು ಇದೀಗ ಮೊದಲ ಬಾರಿಗೆ ಮಾಲ್ಡೀವ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಐತಿಹಾಸಿಕ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ಲಾಘಿಸಿದ್ದಾರೆ.

‘ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ) ಅಭಿಯಾನದ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ, ಬಿಹಾರದ ಮಖಾನಾ ಗ್ರೀಸ್ ದೇಶವನ್ನು ತಲುಪುತ್ತಿರುವುದರ ಜೊತೆಗೆ ಕರ್ನಾಟಕದ ಕಲಬುರಗಿ ತೊಗರಿ ಬೇಳೆ ಮಾಲ್ಡೀವ್ಸ್ ತಲುಪಿರುವುದು ದೇಶದ ಗ್ರಾಮೀಣ ಆರ್ಥಿಕತೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ ಎಂದರು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಸಾರಥ್ಯದಲ್ಲಿ ಈ ವಿಶೇಷ ರಫ್ತು ಪ್ರಕ್ರಿಯೆ ನಡೆದಿದೆ. ಮೈಸೂರಿನ ‘ಮೆಸರ್ಸ್ ಸಿಲ್ಕನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಅಂಡ್ ಇಂಪೋರ್ಟ್ಸ್’ ಸಂಸ್ಥೆಯು ರೈತ ಉತ್ಪಾದಕ ಸಂಸ್ಥೆಗಳ (FPO) ಸಹಭಾಗಿತ್ವದಲ್ಲಿ 1 ಮೆಟ್ರಿಕ್ ಟನ್ (10 ಕ್ವಿಂಟಾಲ್) ಪ್ರೀಮಿಯಂ ಗುಣಮಟ್ಟದ ತೊಗರಿ ಬೇಳೆಯನ್ನು ಸಮುದ್ರ ಮಾರ್ಗದ ಮೂಲಕ ಮಾಲ್ಡೀವ್ಸ್‌ಗೆ ಯಶಸ್ವಿಯಾಗಿ ರವಾನಿಸಿದೆ.

ವಿಡಿಯೋ ನೋಡಿ



ಕಲಬುರಗಿ ಜಿಲ್ಲೆಯ ಜಮೀನುಗಳಲ್ಲಿನ ಮಣ್ಣು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅಂಶಗಳಿಂದ ಸಮೃದ್ಧವಾಗಿದೆ. ಈ ವಿಶಿಷ್ಟ ನೈಸರ್ಗಿಕ ಗುಣದಿಂದಾಗಿ ಇಲ್ಲಿ ಬೆಳೆಯುವ ತೊಗರಿ ಬೇಳೆಯು ವಿಶಿಷ್ಟ ರುಚಿ, ಅದ್ಭುತ ಸುಗಂಧ ಮತ್ತು ಸುಲಭವಾಗಿ ಬೇಯುವ ಗುಣವನ್ನು ಹೊಂದಿದೆ. ಇದೇ ಕಾರಣಕ್ಕೆ ಇದಕ್ಕೆ 2019 ರಲ್ಲಿ ಭೌಗೋಳಿಕ ಸೂಚ್ಯಂಕ ಮಾನ್ಯತೆ ನೀಡಲಾಗಿತ್ತು. ಈ ಮೊದಲ ರಫ್ತು ಸರಕು ಕೇವಲ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಮಾಲ್ಡೀವ್ಸ್ ಸೇರಿದಂತೆ ಇತರ ವಿದೇಶಿ ರಾಷ್ಟ್ರಗಳಿಗೆ ಕಲಬುರಗಿ ತೊಗರಿ ಬೇಳೆಯನ್ನು ನಿಯಮಿತವಾಗಿ ಸರಬರಾಜು ಮಾಡಲು ಗೇಟ್‌ವೇ ಮುಕ್ತವಾಗಿದೆ.

Mudhol Breed Dogs: ಕರ್ನಾಟಕ ಮೂಲದ ಮುಧೋಳ ತಳಿಯ ಶ್ವಾನದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ; ಮನ್‌ ಕಿ ಬಾತ್‌ನಲ್ಲಿ ಹೇಳಿದ್ದೇನು?

ಇದು ಕರ್ನಾಟಕದ ರೈತ ಉತ್ಪಾದಕ ಸಂಸ್ಥೆಗಳು ಮತ್ತು ಸ್ಥಳೀಯ ರಫ್ತುದಾರರಿಗೆ ನಿರಂತರ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲಿದ್ದು, ರೈತರ ಆದಾಯ ದುಪ್ಪಟ್ಟುಗೊಳಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.