ಕರುಣೆಯಿಲ್ಲದ ಬುದ್ಧಿವಂತಿಕೆ ಸಮಾಜಕ್ಕೆ ಅಪಾಯಕಾರಿ: ಸದ್ಗುರು ಶ್ರೀ ಮಧುಸೂದನ ಸಾಯಿ
Sadguru Sri Madhusudan Sai: ವಿದ್ಯಾಸಂಸ್ಥೆಗಳ ಮೂಲಕ ಚಾರಿತ್ರ್ಯದ ಶಕ್ತಿ ಇರುವ ದೈವೀ ಪುರುಷರನ್ನು ನಾವು ರೂಪಿಸಬೇಕು. ಶಿಕ್ಷಣ ಸುಧಾರಿಸಬೇಕಾದರೆ ಉತ್ತಮ ಶಿಕ್ಷಕರು ಬೇಕು. ಉತ್ತಮ ಶಿಕ್ಷಕರು ರೂಪುಗೊಳ್ಳಲು ಪೂರಕವಾದ ಸಂದರ್ಭ ಸಮಾಜದಲ್ಲಿ ನಿರ್ಮಾಣವಾಗಬೇಕು. ಶಿಕ್ಷಕರಿಗೆ ಉತ್ತಮ ಸಂಬಳ, ಗೌರವ ಸಿಗಬೇಕು. ಮಕ್ಕಳ ಪಾಲಿಗೆ ಶಿಕ್ಷಕರು ತಂದೆ-ತಾಯಿ ಮತ್ತು ಗುರುವೂ ಆಗಿರುತ್ತಾರೆ” ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿದರು. -
ಕಲಬುರಗಿ, ಆ.05: ತೀವ್ರ ಸ್ಪರ್ಧೆಯ ಕಾರಣ ಸಮಕಾಲೀನ ಶಿಕ್ಷಣ ಪದ್ಧತಿಯಲ್ಲಿ ಬುದ್ಧಿವಂತ ತಲೆಗಳು ನಿರ್ಮಾಣವಾಗುತ್ತಿವೆ. ಅದರೆ ದಯೆ-ಹೃದಯ ಇರುವ ಹೃದಯವಂತರನ್ನು, ಚಾರಿತ್ರ್ಯವಂತರನ್ನು ರೂಪಿಸುತ್ತಿಲ್ಲ. ಕರುಣೆಯಿಲ್ಲದ ಬುದ್ಧಿವಂತರು ದಾನವರಾಗುತ್ತಾರೆ. ಇದು ಅತ್ಯಂತ ಅಪಾಯಕಾರಿ ವಿದ್ಯಮಾನ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಎಚ್ಚರಿಸಿದರು.
ನಗರದಲ್ಲಿ ಬುಧವಾರ ನಡೆದ "ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಖ್ಯಾತ ವಾಗ್ಮಿ ಮತ್ತು ಶಿಕ್ಷಣ ತಜ್ಞ ಡಾ ಗುರುರಾಜ ಕರ್ಜಗಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. “ಮೌಲ್ಯ ಶಿಕ್ಷಣವು ನಮ್ಮ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಬೇಕು. ಇಂದು ಶಿಕ್ಷಕರಿಗೆ ಶಾಲೆಗಳಲ್ಲಿ ನೀತಿ ಕಥೆ ಹೇಳುವ ಸ್ವಾತಂತ್ರ್ಯವೂ ಇಲ್ಲದಂತೆ ಆಗಿದೆ. ಶಿಕ್ಷಣವು ವ್ಯಾಪಾರವಾಗಿರುವ ದುರಂತದಿಂದ ಇಂಥ ಸಂದರ್ಭ ಬಂದಿದೆ” ಎಂದು ಸದ್ಗುರುಗಳು ವಿಷಾದಿಸಿದರು.
“ವಿದ್ಯಾಸಂಸ್ಥೆಗಳ ಮೂಲಕ ಚಾರಿತ್ರ್ಯದ ಶಕ್ತಿ ಇರುವ ದೈವೀ ಪುರುಷರನ್ನು ನಾವು ರೂಪಿಸಬೇಕು. ಶಿಕ್ಷಣ ಸುಧಾರಿಸಬೇಕಾದರೆ ಉತ್ತಮ ಶಿಕ್ಷಕರು ಬೇಕು. ಉತ್ತಮ ಶಿಕ್ಷಕರು ರೂಪುಗೊಳ್ಳಲು ಪೂರಕವಾದ ಸಂದರ್ಭ ಸಮಾಜದಲ್ಲಿ ನಿರ್ಮಾಣವಾಗಬೇಕು. ಶಿಕ್ಷಕರಿಗೆ ಉತ್ತಮ ಸಂಬಳ, ಗೌರವ ಸಿಗಬೇಕು. ಮಕ್ಕಳ ಪಾಲಿಗೆ ಶಿಕ್ಷಕರು ತಂದೆ-ತಾಯಿ ಮತ್ತು ಗುರುವೂ ಆಗಿರುತ್ತಾರೆ” ಎಂದು ಕಿವಿಮಾತು ಹೇಳಿದರು.
“ಕಲಬುರಗಿ ಜಿಲ್ಲೆಯ ಪ್ರಗತಿಗಾಗಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಎನ್ನುವುದು ನಮ್ಮ ಆದ್ಯತೆ ಆಗಬೇಕು. ಈ ಪ್ರದೇಶದಲ್ಲಿ ರಕ್ತಹೀನತೆ ದೊಡ್ಡ ಸಮಸ್ಯೆಯಾಗಿದೆ. ಈ ಭಾಗದಲ್ಲಿ ಮಕ್ಕಳ ಎತ್ತರ ಕಡಿಮೆಯಾಗುತ್ತಿದೆ. ಅಪೌಷ್ಟಿಕತೆಯು ಮಾನಸಿಕತೆಯ ಮೇಲೆಯೂ ಪರಿಣಾಮ ಬೀರುತ್ತದೆ. ಈ ಮೂರು ವಿಚಾರಗಳಲ್ಲಿ ನಮ್ಮ ಸಂಸ್ಥೆಯಿಂದ ಮತ್ತಷ್ಟು ಸೇವೆ ಒದಗಿಸಲು ಪ್ರಯತ್ನಿಸುತ್ತೇವೆ. ಶೀಘ್ರದಲ್ಲಿಯೇ ನಮ್ಮ ಕ್ಯಾಂಪಸ್ ಬಳಿ ಆಸ್ಪತ್ರೆಯನ್ನು ಆರಂಭಿಸುತ್ತೇವೆ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ "ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್" ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಕಲಬುರಗಿ ಜಿಲ್ಲೆಯಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು.
ಕಾರ್ಯಕ್ರಮವು ಕಮಲಾಪುರ ತಾಲೂಕು ನವನಿಹಾಳ ಗ್ರಾಮದಲ್ಲಿರುವ ‘ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯʼದ ವಿದ್ಯಾರ್ಥಿಗಳ ವೇದಮಂತ್ರಗಳ ಪಾರಾಯಣದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ" ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ವಾದ್ಯಗೋಷ್ಠಿ (ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.
ದಕ್ಷಿಣ ಭಾರತದ ಸಾಂಸ್ಕೃತಿಕ ರಾಜಧಾನಿ ಕಲಬುರ್ಗಿ: ನರಸಿಂಹಮೂರ್ತಿ
ʼದಿವ್ಯ ಸಂಜೆʼ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, ಕಲಬುರಗಿ ಜನರ ಸಹಕಾರ ಸ್ಮರಿಸಿ ಧನ್ಯವಾದ ಅರ್ಪಿಸಿದರು.
“ದಕ್ಷಿಣ ಭಾರತದ ಹೃದಯ ಭಾಗದಲ್ಲಿರುವ ಕಲಬುರಗಿ ನಗರವು ದಕ್ಷಿಣ ಭಾರತದ ಸಾಂಸ್ಕೃತಿಕ ರಾಜಧಾನಿಯೂ ಆಗಿದೆ. ಭಗವಾನ್ ಸತ್ಯ ಸಾಯಿ ಬಾಬಾ ಅವರು ದೇಹ ತ್ಯಾಗ ಮಾಡಿದ ನಂತರ ಮೊದಲ ಶಿಕ್ಷಣ ಸಂಸ್ಥೆಯು ಇಲ್ಲಿಯೇ ರೂಪುಗೊಂಡಿತು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಇಡೀ ವಿಶ್ವಕ್ಕೆ ಸೇವೆ ಸಲ್ಲಿಸಿದಂತೆ ಆಗುತ್ತದೆ” ಎಂದು ವಿವರಿಸಿದರು.
ಕಲ್ಲನ್ನು ಶಿಲ್ಪವಾಗಿಸಿದ ಸದ್ಗುರು: ವಿದ್ಯಾರ್ಥಿಯ ನಮನ
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಆಗಿರುವ ಕಮಲಾಪುರ ತಾಲ್ಲೂಕು ನವನಿಹಾಳ ಗ್ರಾಮದ ಮಹದೇವ್ ಮಾತನಾಡಿ, ಬಾಲ್ಯದಲ್ಲಿ ತಾನು ಎದುರಿಸಿದ ಸಂಕಷ್ಟದ ದಿನಗಳು ಹಾಗೂ ಸದ್ಗುರುಗಳ ಕರುಣೆಯಿಂದ ಒದಗಿದ ಅವಕಾಶಗಳ ಬಗ್ಗೆ ಭಾವುಕವಾಗಿ ವಿವರಿಸಿದರು.
“ಚಿಕ್ಕಂದಿನಲ್ಲಿಯೇ ನನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡರು. ಅವಳ ಮರಣದ ನಂತರ ಅಜ್ಜಿಯ ಮನೆಯಲ್ಲಿದ್ದೆ. ಸಂಬಂಧಿಕರ ಮೂದಲಿಕೆಯು ನನ್ನ ಆತ್ಮವಿಶ್ವಾಸ ಕಿತ್ತುಕೊಂಡಿದ್ದು. ಶಾಲೆ ಬಿಟ್ಟು ದನ ಮೇಯಿಸಿಕೊಂಡು ಇರೋಣ ಎಂದುಕೊಂಡಿದ್ದೆ. ಆದರೆ ದೇವರದಯೆಯಿಂದ ನನಗೆ ಸತ್ಯ ಸಾಯಿ ಸಂಸ್ಥೆಯಲ್ಲಿ ಪ್ರವೇಶ ಸಿಕ್ಕಿತು. ಅಲ್ಲಿನ ಉಪಾಧ್ಯಾಯರ ಪ್ರೀತಿ-ಕರುಣೆಯಿಂದ ನನ್ನಲ್ಲಿ ಭಯ ಹೋಗಿ ಆತ್ಮವಿಶ್ವಾಸ ಮೂಡಿತು. ಇಂದು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತೇನೆ. ಸಾವಿರಾರು ಜನರ ಎದುರು ನಿಂತು ಮಾತನಾಡುವ ಧೈರ್ಯ ಬಂದಿದೆ. ಕಲ್ಲು ಒಬ್ಬ ಶಿಲ್ಪಿಯ ಕೈಗೆ ಸಿಕ್ಕರೆ ಸುಂದರ ಶಿಲ್ಪವಾಗುತ್ತದೆ. ಸದ್ಗುರುಗಳು ನನ್ನನ್ನು ಹೀಗೆ ರೂಪಿಸಿದ್ದಾರೆ. ನನ್ನಂಥ ಎಷ್ಟೋ ಮಕ್ಕಳಿದ್ದಾರೆ. ಅವರಿಗೂ ಗುರುಗಳು ಆಸರೆಯಾಗಬೇಕು” ಎಂದು ತನ್ನ ಕಥೆಯ ಮೂಲಕ ಕೋರಿದರು.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಕೆ. ಶ್ರೀಕಂಠಮೂರ್ತಿ ಸ್ವಾಗತಿಸಿದರು. ಶರಣ ಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಡಾ ದಾಕ್ಷಾಯಿಣಿ ಉಪಸ್ಥಿತರಿದ್ದರು. ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ನ ವಿಶ್ವಸ್ಥರಾದ ರಾಜಶೇಖರ್ ನಿರೂಪಿಸಿದರು.
ಕರ್ನಾಟಕ ಪರಿವರ್ತಕ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಬಸವರಾಜ ಪಾಟೀಲ ಸೇಡಂ ಮತ್ತು ಡಾ ಸಂಜೀವ್ ಗುಪ್ತ ಅವರಿಗೆ ಶಿಕ್ಷಣ ಮತ್ತು ಇತರ ಕ್ಷೇತ್ರಗಳ ಸಾರ್ಥಕ ಸೇವೆಯನ್ನು ಗುರುತಿಸಿ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ವತಿಯಿಂದ 'ಕರ್ನಾಟಕ ಪರಿವರ್ತಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವರಾಜ ಪಾಟೀಲ ಸೇಡಂ, "ನಮ್ಮ ಯುವಜನರು ನೌಕರಿ ಹುಡುಕಲು 15 ರಿಂದ 20 ವರ್ಷ ಕಳೆಯುತ್ತಾರೆ. ಹುಚ್ಚುತನದ ಪ್ರವಾಹದಲ್ಲಿ ಉನ್ನತ ಶಿಕ್ಷಣ ಹಾದಿತಪ್ಪಿದೆ. ಕೋಚಿಂಗ್ ಸೆಂಟರ್‌ಗಳಿಗೆ 16 ಲಕ್ಷ ಕೋಟಿಯನ್ನು ಪೋಷಕರು ಖರ್ಚು ಮಾಡುತ್ತಿದ್ದಾರೆ. ನಮ್ಮ 60 ಕೋಟಿ ಮಕ್ಕಳನ್ನು ಉಳಿಸಲು ಹೊಸಹಾದಿ ಹುಡುಕಬೇಕು" ಎಂದು ಆಶಯ ಹಂಚಿಕೊಂಡರು.
ಶ್ರೀ ಸತ್ಯ ಸಾಯಿ ವಿದ್ಯಾನಿಕೇತನಂ: ಗ್ರಾಮೀಣ ಶಿಕ್ಷಣದಲ್ಲಿ ವಿಶಿಷ್ಟ ಮಾದರಿ
ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕು ನವನಿಹಾಳ ಗ್ರಾಮದಲ್ಲಿರುವ “ಶ್ರೀ ಸತ್ಯ ಸಾಯಿ ವಿದ್ಯಾನಿಕೇತನಂ” ಕ್ಯಾಂಪಸ್ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಮಾದರಿಯನ್ನು ನಿರ್ಮಿಸುತ್ತಿದೆ. ಇದೇ ಪರಿಸರದಲ್ಲಿ “ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ” ದ ಕೇಂದ್ರ ಕಚೇರಿಯೂ ಇದೆ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಮತ್ತು ಶ್ರೀ ಮಡಿಯಾಲ ನಾರಾಯಣ ಭಟ್ ಅವರು ಪ್ರತಿಪಾದಿಸಿದ ಮೌಲ್ಯಭರಿತ ಶಿಕ್ಷಣ ತತ್ತ್ವವನ್ನು ಆಧಾರವಾಗಿಟ್ಟುಕೊಂಡು, 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ʼ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಈ ಶಿಕ್ಷಣ ಸಂಸ್ಥೆಯನ್ನು 2012ರಲ್ಲಿ ಸ್ಥಾಪಿಸಿದರು.
ಈ ಕ್ಯಾಂಪಸ್‌ನಲ್ಲಿ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಸಂಶೋಧನೆಯವರೆಗೂ ವ್ಯಾಸಂಗ ಮಾಡಲು ಅವಕಾಶವಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಬೋಧಿಸಲಾಗುತ್ತಿದೆ. 6ರಿಂದ 12ನೇ ತರಗತಿಯವರೆಗಿನ ಹಂತದಲ್ಲಿ ಒಟ್ಟು 143 ಮಕ್ಕಳು ಓದುತ್ತಿದ್ದಾರೆ. ಈ ಪೈಕಿ ಶೇ 91ರಷ್ಟು ಮಕ್ಕಳು ಬಡತನರೇಖೆಗಿಂತಲೂ ಕೆಳಗಿನ ಕುಟುಂಬಗಳಿಂದ ಬಂದವರು ಹಾಗೂ ಶೇ 87ರಷ್ಟು ಮಕ್ಕಳು ಗ್ರಾಮೀಣ ಹಿನ್ನೆಲೆಯವರು. ವಿಶ್ವವಿದ್ಯಾಲಯದ ಈ ಕ್ಯಾಂಪಸ್‌ನಲ್ಲಿರುವ ವಿವಿಧ ಕೋರ್ಸ್‌ಗಳಲ್ಲಿ ಒಟ್ಟು 117 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಶೇ 88ರಷ್ಟು ಮಕ್ಕಳು ಬಡತನರೇಖೆಗಿಂತಲೂ ಕೆಳಗಿನ ಕುಟುಂಬಗಳಿಂದ ಬಂದವರು ಮತ್ತು ಶೇ 90ರಷ್ಟು ಮಕ್ಕಳು ಗ್ರಾಮೀಣ ಹಿನ್ನೆಲೆಯವರು ಎನ್ನುವುದು ವಿಶೇಷ.
ವಿಶ್ವಮಾನವ: ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ವಿಶ್ವಾದ್ಯಂತ ಅಪಾರ ಗೌರವಕ್ಕೆ ಪಾತ್ರರಾದ ಮಹಾನ್ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರು ಬೋಧಿಸಿದ 'ಪ್ರೀತಿ ಮತ್ತು ಸೇವೆ'ಯ ಆದರ್ಶಗಳ ತಳಹದಿಯ ಮೇಲೆ, "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ಹೆಸರಿನ ಬೃಹತ್ ಸೇವಾ ಅಭಿಯಾನವನ್ನು ಅವರು ಮುನ್ನಡೆಸುತ್ತಿದ್ದಾರೆ.
ಪ್ರಸ್ತುತ 100 ದೇಶಗಳಿಗೆ ವಿಸ್ತರಿಸಿರುವ ಈ ಅಭಿಯಾನದ ಮೂಲಕ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಕೋಟ್ಯಂತರ ಜನರಿಗೆ ಸಂಪೂರ್ಣ ಉಚಿತವಾಗಿ ಲಭ್ಯವಾಗುತ್ತಿವೆ.
ಈ ಅಭಿಯಾನವು ಆಧ್ಯಾತ್ಮಿಕ ಜ್ಞಾನದ ಮೂಲಕ ವ್ಯಕ್ತಿ ಮತ್ತು ಸಮಾಜದ ಆಂತರಿಕ ಪರಿವರ್ತನೆಗೂ ನಾಂದಿ ಹಾಡಿದೆ. ಅದ್ಭುತ ವಾಗ್ಮಿ ಹಾಗೂ ಪ್ರಬುದ್ಧ ಲೇಖಕರೂ ಆಗಿರುವ ಸದ್ಗುರುಗಳು, ತಮ್ಮ ಗ್ರಂಥಗಳು ಮತ್ತು ಪ್ರವಚನಗಳ ಮೂಲಕ ಸನಾತನ ಧರ್ಮದ ತತ್ತ್ವಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುತ್ತಿದ್ದಾರೆ. ಸದ್ಗುರುಗಳ ಜೀವನ, ಸಾಧನೆ ಮತ್ತು ಕಾರ್ಯಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ www.owofmission.org ಜಾಲತಾಣಕ್ಕೆ ಭೇಟಿ ನೀಡಿ.
ಸತ್ಯ ಸಾಯಿ ಗ್ರಾಮಕ್ಕೆ 50 ವರ್ಷ
ಅವಿಭಜಿತ ಕೋಲಾರ ಜಿಲ್ಲೆಯ ಜನರ ಒತ್ತಾಸೆಯ ಮೇರೆಗೆ ಪೂಜ್ಯ ಶ್ರೀ ಮಡಿಯಾಲ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಮುದ್ದೇನಹಳ್ಳಿ ಗ್ರಾಮದ ಸಮೀಪ 1973ರಲ್ಲಿ ಮೊದಲ ಶಿಕ್ಷಣ ಸಂಸ್ಥೆ ಆರಂಭಿಸಲಾಯಿತು. ನಂತರ 1976ರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಭಗವಾನ್ ಸತ್ಯ ಸಾಯಿ ಬಾಬಾ ಅವರಿಗೆ ಅರ್ಪಿಸಲಾಯಿತು. ಆಗ ಸ್ವತಃ ಬಾಬಾ ಅವರೇ ಈ ಶಿಕ್ಷಣ ಕ್ಯಾಂಪಸ್‌ಗೆ "ಸತ್ಯ ಸಾಯಿ ಗ್ರಾಮ" ಎಂದು ನಾಮಕರಣ ಮಾಡಿದ್ದರು.
ಇಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ಸತ್ಯ ಸಾಯಿ ಗ್ರಾಮವು ಸೇವಾ ಚಟುವಟಿಕೆಗಳ ಜಾಗತಿಕ ರಾಜಧಾನಿಯಾಗಿ ಹೊರಹೊಮ್ಮಿದೆ. ಬಾಬಾ ಅವರ ಕೃಪಾಶೀರ್ವಾದಕ್ಕೆ ಐವತ್ತು ವರ್ಷಗಳಾದ ಹಿನ್ನೆಲೆಯಲ್ಲಿ ಈ ವರ್ಷ ಸತ್ಯ ಸಾಯಿ ಗ್ರಾಮದ ಸುವರ್ಣ ಮಹೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.