ಮೀಸಲು ಉಲ್ಲಂಘನೆ: ಕಲಬುರ್ಗಿ ಹೈಕೋರ್ಟ್ ಪೀಠ ಮಹತ್ವದ ತೀರ್ಪು: 5 ಸಾವಿರ ಶಿಕ್ಷಕರ ನೇಮಕ ರದ್ದು
ಕಲ್ಯಾಣ ಕರ್ನಾಟಕ ಭಾಗದಲ್ಲಿ 2023ರಲ್ಲಿ ನಡೆದ ಆರರಿಂದ ಎಂಟನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್‌ಟಿಆರ್) ನೇಮಕಾತಿ ಪಟ್ಟಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ. ಇದರೊಂದಿಗೆ ಈಗಾಗಲೇ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 15 ಸಾವಿರ ಶಿಕ್ಷಕರ ಮುಂದಿನ ಸೇವಾ ಸ್ಥಿತಿಗತಿ ಅತಂತ್ರಕ್ಕೆ ಸಿಲುಕಿದೆ.
-
ಅರ್ಹರನ್ನು ಪರಿಗಣಿಸಿ 3 ತಿಂಗಳಲ್ಲಿ ಹೊಸ ನೇಮಕ ಪಟ್ಟಿಗೆ ಸೂಚನೆ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ 2023ರಲ್ಲಿ ನಡೆದ ಆರರಿಂದ ಎಂಟನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್‌ಟಿಆರ್) ನೇಮಕಾತಿ ಪಟ್ಟಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ರದ್ದು ಪಡಿಸಿ ಮಹತ್ವದ ಆದೇಶ ನೀಡಿದೆ. ಇದರೊಂದಿಗೆ ಈಗಾಗಲೇ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 15 ಸಾವಿರ ಶಿಕ್ಷಕರ ಮುಂದಿನ ಸೇವಾ ಸ್ಥಿತಿಗತಿ ಅತಂತ್ರಕ್ಕೆ ಸಿಲುಕಿದೆ. ಹೈದರಾಬಾದ್ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಯೇತರ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಈ ಹಿಂದೆ ಪ್ರಕಟವಾಗಿದ್ದ ತಾತ್ಕಾಲಿಕ ಹಾಗೂ ಅಂತಿಮ ಪಟ್ಟಿಗಳನ್ನು ರದ್ದುಪಡಿ ಸಿರುವ ಹೈಕೋರ್ಟ್, ನಿಯಮಾನುಸಾರ ಹೊಸದಾಗಿ ಪ್ರಕ್ರಿಯೆ ನಡೆಸಲು ನಿರ್ದೇಶಿಸಿದೆ.
ರಾಜ್ಯ ಸರಕಾರ 15 ಸಾವಿರ ಜಿಪಿಎಸ್ ಟಿಆರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ನೇಮಕಾತಿಯಲ್ಲಿ ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಸ್ಥಳೀಯ ಅಭ್ಯರ್ಥಿ ಗಳಿಗೆ ಅನ್ವಯಿಸುವ ಮೀಸಲಾತಿ ಹಾಗೂ ಎಚ್‌ಕೆ, ನಾನ್-ಎಚ್‌ಕೆ ವೃಂದಗಳ ಹಂಚಿಕೆ ವಿಚಾರ ದಲ್ಲಿ ಗೊಂದಲ ಉಂಟಾಗಿತ್ತು. ಇದನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ 2023ರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪ್ರಕಟಿಸಿದ್ದ ತಾತ್ಕಾಲಿಕ ಹಾಗೂ ಅಂತಿಮ ಆಯ್ಕೆ ಪಟ್ಟಿಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಜತೆಗೆ, 2023ರ ಫೆಬ್ರವರಿ 1ರಂದು ಡಿಪಿಎಆರ್ ಹೊರಡಿಸಿದ್ದ ಸುತ್ತೋಲೆ ಹಾಗೂ 2024ರ ಜನವರಿ 31ರ ಕೆಎಸ್‌ಎಟಿ ಆದೇಶವನ್ನೂ ರದ್ದುಪಡಿಸಿರು ವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. 371(ಜೆ) ನಿಯಮಾವಳಿ ಮತ್ತು ಮೆರಿಟ್ ಮಾನದಂಡಗಳನ್ನು ಅನುಸರಿಸಿ ಅರ್ಹತೆಯುಳ್ಳ ಎಲ್ಲ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸ ಲಾಗಿದೆ. ಈ ಮೂಲಕ ಹಿಂದಿನ ಆಯ್ಕೆ ಪ್ರಕ್ರಿಯೆಯಲ್ಲಿದ್ದ ಗೊಂದಲಗಳನ್ನು ಸರಿಪಡಿಸಿ ಹೊಸ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ.
ಆದೇಶದ ಪ್ರತಿ ಲಭಿಸಿದ ದಿನದಿಂದ ಮೂರು ತಿಂಗಳೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ನ್ಯಾಯಾಲಯ ಗಡುವು ವಿಧಿಸಿದೆ. ಹೀಗಾಗಿ ಶಿಕ್ಷಣ ಇಲಾಖೆ ನಿಗದಿತ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೊಸ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಅರ್ಹತೆ, ಮೀಸಲಾತಿ ವೃಂದ ಹಾಗೂ ಮೆರಿಟ್ ಕ್ರಮವನ್ನು ಯಾವ ರೀತಿಯಲ್ಲಿ ಅನ್ವಯಿಸ ಲಾಗುತ್ತದೆ ಎಂಬುದು ಪ್ರಮುಖವಾಗಲಿದೆ. ವಿಶೇಷವಾಗಿ ಎಚ್‌ಕೆ ಮತ್ತು ನಾನ್-ಎಚ್‌ಕೆ ಹುದ್ದೆಗಳ ಹಂಚಿಕೆಯನ್ನು ನಿಯಮಬದ್ಧವಾಗಿ ನಿರ್ವಹಿಸುವುದು ಇಲಾಖೆಯ ಮುಂದಿರುವ ಪ್ರಮುಖ ಹೊಣೆಗಾರಿಕೆಯಾಗಿದೆ.
ಶಿಕ್ಷಕರ ಸ್ಥಿತಿ ಅತಂತ್ರ
ಈಗಾಗಲೇ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮುಂದಿನ ಸೇವಾ ಸ್ಥಿತಿಗತಿ ಕುರಿತು ಚರ್ಚೆ ಆರಂಭವಾಗಿದೆ. ಹಿಂದಿನ ಪ್ರಕ್ರಿಯೆಯ ಆಧಾರದಲ್ಲಿ ನೇಮಕ ಗೊಂಡವರ ವಿಚಾರದಲ್ಲಿ ಸರಕಾರ ಯಾವ ಕ್ರಮ ಅನುಸರಿಸಲಿದೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಹೊಸ ಪಟ್ಟಿಯ ನಂತರ ಉಂಟಾಗ ಬಹುದಾದ ಬದಲಾವಣೆಗಳ ಕುರಿತು ಇಲಾಖೆಯಿಂದ ಸ್ಪಷ್ಟ ಮಾರ್ಗಸೂಚಿ ಹೊರ ಬರುವ ನಿರೀಕ್ಷೆಯಿದೆ. ಇದರಿಂದ ಸಾವಿರಾರು ಕುಟುಂಬಗಳ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಆಯ್ಕೆ ಕುತೂಹಲ
ಮುಂದಿನ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ಜತೆಗೆ ಹುದ್ದೆಗಳ ಸ್ಥಳವಾರು ಲಭ್ಯತೆ ಕೂಡ ಪ್ರಮುಖ ವಾಗಲಿದೆ. ನೇಮಕಾತಿಗೆ ಅರ್ಹತೆ ಪಡೆದವರಿಗೆ ಶಾಲೆಗಳ ಆಯ್ಕೆಯಲ್ಲಿ ಯಾವ ಮಾನದಂಡ ಅನು ಸರಿಸಲಾಗುತ್ತದೆ ಎಂಬುದರತ್ತ ಅಭ್ಯರ್ಥಿಗಳ ಗಮನ ನೆಟ್ಟಿದೆ. ವೃಂದವಾರು ಹುದ್ದೆಗಳ ವಿವರ, ಖಾಲಿ ಸ್ಥಾನಗಳ ಮಾಹಿತಿ ಹಾಗೂ ಅಭ್ಯರ್ಥಿ ಗಳಿಗೆ ಲಭ್ಯವಾಗುವ ಆಯ್ಕೆ ಅವಕಾಶಗಳನ್ನು ಮುಂಚಿತವಾಗಿ ಪ್ರಕಟಿಸಿದರೆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಮೂಡಲಿದೆ. ಇಲಾಖೆಯು ಈ ಬಾರಿ ಸಂಪೂರ್ಣ ವ್ಯವಸ್ಥೆಯನ್ನು ಡಿಜಿಟಲ್, ಪಾರದರ್ಶಕ ವಾಗಿ ನಿರ್ವಹಿಸುವ ನಿರೀಕ್ಷೆಯಿದೆ.