Bengaluru Airport: ದಾಖಲೆ ಬರೆದ ಬೆಂಗಳೂರು ಏರ್‌ಪೋರ್ಟ್, 4.3 ಕೋಟಿ ಪ್ರಯಾಣಿಕರ ಓಡಾಟ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ 8% ಹೆಚ್ಚಳವಾಗಿದೆ. 2025ರಲ್ಲಿ 4.3 ಕೋಟಿ ಪ್ರಯಾಣಿಕರು ಓಡಾಟ ನಡೆಸಿದ್ದು, ಪ್ರಯಾಣಿಕರ ಸೇವೆ, ಕಾರ್ಯಕ್ಷಮತೆ, ಸರಕು ಹಾಗೂ ಸಾಗಣೆಯೂ ಏರಿಕೆಯಾಗಿದೆ. ಈ ಮೂಲಕ 2025ರಲ್ಲೇ ಪ್ರಯಾಣಿಕರು ಮತ್ತು ಸರಕು ಎರಡರಲ್ಲೂ ದಾಖಲೆಯ ಬೆಳವಣಿಗೆಯಾಗಿದೆ.
ಬೆಂಗಳೂರು ಏರ್‌ಪೋರ್ಟ್ -
ಬೆಂಗಳೂರು, ಜ.14: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಮಹತ್ವದ ಸಾಧನೆ ಬರೆದಿದೆ. 2025ರಲ್ಲೇ 4.3 ಕೋಟಿ ಪ್ರಯಾಣಿಕರು ಓಡಾಟ ನಡೆಸಿ ಬೆಂಗಳೂರು ಏರ್‌ಪೋರ್ಟ್ (Bengaluru Airport) ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ 8% ಹೆಚ್ಚಳವಾಗಿದೆ. 2025ರಲ್ಲಿ 4.3 ಕೋಟಿ ಪ್ರಯಾಣಿಕರು ಓಡಾಟ ನಡೆಸಿದ್ದು, ಪ್ರಯಾಣಿಕರ ಸೇವೆ, ಕಾರ್ಯಕ್ಷಮತೆ, ಸರಕು ಹಾಗೂ ಸಾಗಣೆಯೂ ಏರಿಕೆಯಾಗಿದೆ.
ಈ ಮೂಲಕ 2025ರಲ್ಲೇ ಪ್ರಯಾಣಿಕರು ಮತ್ತು ಸರಕು ಎರಡರಲ್ಲೂ ದಾಖಲೆಯ ಬೆಳವಣಿಗೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ 8% ಏರಿಕೆಯಾಗಿದೆ. ಇದರಲ್ಲಿ 28.7% ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ನಿರ್ಗಮನಗಳು 38ರಿಂದ 51ಕ್ಕೆ ಹೆಚ್ಚಳವಾಗಿವೆ.
2025 ನವೆಂಬರ್ 23ರಂದು 1,37,317 ಪ್ರಯಾಣಿಕರು ಬೆಂಗಳೂರಿನಿಂದ ತೆರಳುವ ಮೂಲಕ ದಾಖಲೆ ನಿರ್ಮಿಸಿದೆ. 2025ರ ಅಕ್ಟೋಬರ್ 19ರಂದು ಗರಿಷ್ಠ 837 ಏರ್ ಟ್ರಾಫಿಕ್ ಮೂವ್‌ಮೆಂಟ್‌ಗಳಾಗಿದ್ದು, 5,20,985 ಟನ್‌ಗಳನ್ನು ನಿರ್ವಹಿಸಿದೆ. ಈ ಮೂಲಕ 5% ಬೆಳವಣಿಗೆ ಹಾಗೂ ಒಂದೇ ದಿನ 2,207 ಟನ್‌ಗಳಷ್ಟು ಅತ್ಯಧಿಕ ಸರಕುಗಳನ್ನು ಸಾಗಾಟ ಮಾಡಿದೆ. ವಿಮಾನ ನಿಲ್ದಾಣವು 5 ದೇಶೀಯ ಮತ್ತು 5 ಅಂತಾರಾಷ್ಟ್ರೀಯ ಸೇರಿ ಒಟ್ಟು 10 ಹೊಸ ಮಾರ್ಗಗಳನ್ನು ಸೇರಿಸಿಕೊಂಡಿದೆ.
ಕೆಐಎಎಲ್‌ಗೆ ಎಸಿಐನ 3ನೇ ಹಂತದ ಮಾನ್ಯತೆ
ವಿಮಾನ ನಿಲ್ದಾಣಗಳಲ್ಲಿ ಸೌಲಭ್ಯ, ಪ್ರಯಾಣಿಕಸ್ನೇಹಿ ಸೌಕರ್ಯ ಹಾಗೂ ತಂತ್ರಜ್ಞಾನಗಳ ಬಳಕೆಗಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru Kempegowda International Airport) ಎಸಿಐನ (ACI) 3ನೇ ಹಂತದ ಮಾನ್ಯತೆ ಪಡೆದಿದ್ದು, ಇದರೊಂದಿಗೆ ಕೆಐಎಎಲ್ (KIAL) ಈ ಮಾನ್ಯತೆಗೆ ಭಾಜನವಾದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯು (ಎಸಿಐ) ಪ್ರವೇಶ ವರ್ಧಕ ಮಾನ್ಯತೆ (ಎಇಎ) ಕಾರ್ಯಕ್ರಮದಡಿ ವಿಮಾನ ನಿಲ್ದಾಣಗಳಲ್ಲಿನ ಸೌಲಭ್ಯ, ತಂತ್ರಜ್ಞಾನ ಬಳಕೆ, ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಆಧರಿಸಿ ಮಾನ್ಯತೆ ನೀಡುತ್ತದೆ. ಕೆಐಎಎಲ್, ಈ ಹಿಂದೆ ಎಸಿಐ-1 ಮತ್ತು 2ನೇ ಹಂತದ ಮಾನ್ಯತೆ ಪಡೆದಿತ್ತು. ಎಸಿಐ, ಪ್ರಯಾಣಿಕರ ಸರ್ವೆ ಮೂಲಕ ಈಗ ಕೆಐಎಎಲ್‌ಗೆ ಎಸಿಐನ 3ನೇ ಹಂತದ ಮಾನ್ಯತೆ ನೀಡಿದೆ. ವಿಮಾನ ನಿಲ್ದಾಣಗಳ ಕಾರ್ಯತಂತ್ರ, ನೀತಿ ನಿಯಮ ಮತ್ತು ಅವುಗಳಿಂದ ದೊರೆಯುವ ಫಲಿತಾಂಶವನ್ನು ಎಸಿಐ ಮೌಲ್ಯಮಾಪನ ಮಾಡುತ್ತದೆ. ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ ವಿಮಾನ ನಿಲ್ದಾಣದ ಎಲ್ಲ ಬಳಕೆದಾರರ ಪ್ರಯಾಣ ಅನುಭವದ ಅಭಿಪ್ರಾಯ ಆಧರಿಸಿ ಈ ಮಾನ್ಯತೆ ನೀಡಲಾಗಿದೆ.