ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ravi Sajangadde Column: ದಬ್ಬಾಳಿಕೆಯ ಬೆಂಕಿಯಲ್ಲಿ ಮುದುಡುತ್ತಿರುವ ಗಡಿನಾಡು !

70 ವರ್ಷಗಳ ಹಿಂದೆ ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ವ್ಯಕ್ತವಾದ ‘ಕಾಸರ ಗೋಡು ಭಾಗವು ಕರ್ನಾಟಕದಲ್ಲಿ ಉಳಿಯಬೇಕು’ ಎಂಬ ಆಗ್ರಹವು ಕಡತದಲ್ಲಷ್ಟೇ ಉಳಿದು ಬಿಟ್ಟಿತು. ಕೇರಳ ಸರಕಾರದ ಇತ್ತೀಚಿನ ವಿಧೇಯಕದಲ್ಲಿ, ‘ಕನ್ನಡ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ, ಒಂದರಿಂದ ಹತ್ತನೆಯ ತರಗತಿಯ ವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕು’ ಎಂದು ಉಲ್ಲೇಖಿಸ ಲಾಗಿದೆ.

ದಬ್ಬಾಳಿಕೆಯ ಬೆಂಕಿಯಲ್ಲಿ ಮುದುಡುತ್ತಿರುವ ಗಡಿನಾಡು !

-

Ashok Nayak
Ashok Nayak Jan 14, 2026 8:18 AM

ಕಹಿ ವಾಸ್ತವ

ರವೀ ಸಜಂಗದ್ದೆ

ಬದುಕಿನಲ್ಲಿ ಅಸ್ತಿತ್ವದ ಹುಡುಕಾಟ ಮಾತ್ರವಲ್ಲದೆ ನಿರಂತರ ಹೋರಾಟವೂ ಇದೆ. ಅದರಲ್ಲೂ ನೀವು ಕಾಸರಗೋಡಿನ ಗಡಿನಾಡ ಕನ್ನಡಿಗರಾಗಿದ್ದರೆ, ಈ ಹುಡುಕಾಟ-ಹೋರಾಟಗಳ ಜತೆಗೆ, ದಶಕಗಳಿಂದ ಆಗುತ್ತಿರುವ ದಬ್ಬಾಳಿಕೆ, ಮಲತಾಯಿ ಧೋರಣೆ ಗಳನ್ನೂ ತಾಳಿಕೊಂಡು ಬಾಳಬೇಕಾದ ಅನಿವಾರ್ಯತೆಯಿದೆ.

ಕನ್ನಡದ ಕುರಿತಾದ ದನಿ, ಅಳಲುಗಳು ಕಡತಗಳಿಗೆ, ಹೋರಾಟದ ಭಾಷಣಗಳಿಗೆ ಸೀಮಿತ ವಾಗಿಬಿಟ್ಟು, ‘ದಿನಾ ಸಾಯೋರಿಗೆ ಅಳೋರ‍್ಯಾರು?’ ಅನ್ನುವ ಹಾಗಾಗಿದೆ ಕಾಸರಗೋಡಿನ ಕನ್ನಡಿಗರ ಅಯೋಮಯ ಪರಿಸ್ಥಿತಿ.

‘ಕೇರಳ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಯುವುದು ಕಡ್ಡಾಯ’ ಎಂಬ ಅಲ್ಲಿನ ಸರಕಾರದ ಇತ್ತೀಚಿನ ವಿಧೇಯಕವು, ಗಡಿನಾಡಿನ ಕನ್ನಡಿಗರಿಗೆ ಒದಗಿರುವ ಹೊಸ ಪ್ರಹಾರ. ತನ್ಮೂಲಕ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ನಿರ್ಣಾಯಕ ಹಂತವಾಗಿ ಈ ವಿಧೇಯಕದ ಮಂಡನೆಯಾದಂತೆ ಭಾಸವಾಗುತ್ತದೆ.

70 ವರ್ಷಗಳ ಹಿಂದೆ ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ವ್ಯಕ್ತವಾದ ‘ಕಾಸರ ಗೋಡು ಭಾಗವು ಕರ್ನಾಟಕದಲ್ಲಿ ಉಳಿಯಬೇಕು’ ಎಂಬ ಆಗ್ರಹವು ಕಡತದಲ್ಲಷ್ಟೇ ಉಳಿದುಬಿಟ್ಟಿತು. ಕೇರಳ ಸರಕಾರದ ಇತ್ತೀಚಿನ ವಿಧೇಯಕದಲ್ಲಿ, ‘ಕನ್ನಡ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ, ಒಂದರಿಂದ ಹತ್ತನೆಯ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕು’ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Ravi Sajangadde Column: ಜಗದ ತೈಲಭಂಡಾರ ತನ್ನದೆನ್ನುವ ಟ್ರಂಪ್‌ ದುರಹಂಕಾರ !

ಕನ್ನಡದವರೇ ಹೆಚ್ಚಾಗಿ ಇರುವ ಕಾಸರಗೋಡಿನಲ್ಲಿ ವಿದ್ಯಾರ್ಥಿಗಳು ಮಲಯಾಳಂ ಭಾಷೆಯನ್ನು ಕಲಿಯಬೇಕು ಎಂದು ಆಗ್ರಹಿಸುವ ಈ ವಿಧೇಯಕವು ಮಕ್ಕಳ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಲ್ಲವೇ? ಭಾಷಾ ಅಲ್ಪಸಂಖ್ಯಾತರ ಭಾಷೆ, ಜೀವನ ವಿಧಾನ ಮತ್ತು ಸಂಸ್ಕೃತಿಯನ್ನು ಬೆಂಬಲಿಸುವ ಮತ್ತು ರಕ್ಷಿಸುವ ಉದ್ದೇಶದಿಂದ ಸಂವಿಧಾನದ 350-ಎ ವಿಧಿಯಲ್ಲಿ ಈ ಬಗೆಗಿನ ವಿವರಗಳನ್ನು ಹೀಗೆ ಸ್ಪಷ್ಟವಾಗಿ ಹೇಳಲಾಗಿದೆ: ‘ಭಾರತದ ಯಾವುದೇ ರಾಜ್ಯವು ತನ್ನ ಅಧಿಕೃತ ರಾಜ್ಯಭಾಷೆಯನ್ನು ಮಾತ್ರ ಪ್ರಥಮ ಭಾಷೆಯನ್ನಾಗಿ ಮಾಡಲು/ಕಲಿಸುವಂತೆ ನಿರ್ಣಯ ಮಾಡಲಾಗದು’.

ಹಾಗೇನಾದರೂ ಯಾವುದೇ ಸರಕಾರ ನಿರ್ಣಯ ಮಾಡಿದರೆ, ಅದು ಮಕ್ಕಳ ಕಲಿಕಾ ಹಕ್ಕು ಮತ್ತು ಭಾಷಾ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಕೇರಳ ಸರಕಾರವು ಈ ವಿಚಾರದಲ್ಲಿ ಇಂಥ ಸ್ಪಷ್ಟ ಉಲ್ಲಂಘನೆ ಮಾಡಿರುವುದು ಕಂಡುಬರುತ್ತಿದೆ.

ಕೇರಳ ಸರಕಾರವು ಕಾಸರಗೋಡಿನಲ್ಲಿ ಕನ್ನಡದ ಮೇಲೆ ಹೀಗೆ ನಿರಂತರ ದಾಳಿಯನ್ನು ಮಾಡಿಕೊಂಡೇ ಬಂದಿದೆ. ದಶಕಗಳ ಹಿಂದಿನವರೆಗೂ ಕಾಸರಗೋಡಿನ ಸರಕಾರಿ ಕಚೇರಿ ಗಳಲ್ಲಿ ಅರ್ಜಿಗಳನ್ನು ಕನ್ನಡದಲ್ಲೇ ಬರೆಯಬಹುದಿತ್ತು ಮತ್ತು ಭರ್ತಿ ಮಾಡಬೇಕಾದ ನಮೂನೆಗಳಲ್ಲಿನ ವಿವರಗಳು ಕನ್ನಡದಲ್ಲೂ ಇರುತ್ತಿದ್ದವು.

ಆಗೆಲ್ಲಾ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಸ್ಥಳೀಯ ಸಿಬ್ಬಂದಿಗಳು ಇರುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿ, ಕನ್ನಡದ ಗಂಧ-ಗಾಳಿ ಗೊತ್ತಿಲ್ಲದ ಮಲಯಾಳಿ ನೌಕರರನ್ನು ನೇಮಿಸ ಲಾಗಿದ್ದು, ‘ಮಲಯಾಳಂ ಅಥವಾ ಇಂಗ್ಲಿಷ್‌ನಲ್ಲಿ ಅರ್ಜಿಯನ್ನು ಕೊಡಿ’ ಎಂದು ಅವರು ತಾಕೀತುಮಾಡುತ್ತಾರೆ.

‘ಕಾಸರಗೋಡು ಭಾಗದಲ್ಲಿ ಪ್ರಕಟವಾಗುವ ಎಲ್ಲಾ ಸರಕಾರಿ ಆದೇಶಗಳು, ಅರ್ಜಿ ನಮೂನೆ ಗಳು ಕನ್ನಡದಲ್ಲೂ ಇರಬೇಕು’ ಎಂದು ಸಾಕಷ್ಟು ಬಾರಿ ಆದೇಶವಾಗಿದೆ. ‘ಸರಕಾರಿ ಕಚೇರಿ ಗಳ ನಾಮಫಲಕ, ರಸ್ತೆಬದಿಯ ಮಾರ್ಗಸೂಚಿ/ಸ್ಥಳಸೂಚಿ ಫಲಕಗಳಲ್ಲಿ ಕನ್ನಡದಲ್ಲೂ ಹೆಸರು/ವಿವರಗಳು ಇರಬೇಕು’ ಎನ್ನುವ ನಿಯಮವಿದೆ. ‘ಕನ್ನಡ ಮಾಧ್ಯಮ ಶಾಲೆಗಳಲ್ಲಿ, ಕನ್ನಡ ಗೊತ್ತಿರುವವರೇ ಶಿಕ್ಷಕರಾಗಿ ನೇಮಕವಾಗಬೇಕು’ ಅಂತಲೂ ಕಡತಗಳಲ್ಲಿದೆ. ಆದರೆ ಇವ್ಯಾವುದೂ ಪಾಲನೆಯಾಗುತ್ತಿಲ್ಲ ಎಂಬುದೇ ದುರಂತ!

ಒಟ್ಟಿನಲ್ಲಿ, ಕನ್ನಡದ ಪರವಾಗಿ ಅಲ್ಲಿ ಯಾವುದೂ-ಏನೂ ನಡೆಯುತ್ತಿಲ್ಲ...ಕರ್ನಾಟಕ ಸರಕಾರವು ಕೇರಳದ ಈ ನಡೆಯನ್ನು ಹೇಳಿಕೆಗಳಲ್ಲಿ ಖಂಡಿಸಿದೆ, ಈ ವಿವಾದಿತ ವಿಧೇಯ ಕಕ್ಕೆ ಅಂಕಿತ ಹಾಕದಂತೆ ಕೇರಳದ ರಾಜ್ಯಪಾಲರಿಗೆ ಲಿಖಿತ ಮನವಿ ಸಲ್ಲಿಸಿದೆ. ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು, ಈ ವಿವಾದಿತ ವಿಧೇಯಕವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಸದ್ಯಕ್ಕೆ ಈ ವಿವಾದ ರಾಜಕೀಯ ಸ್ವರೂಪವನ್ನು ಪಡೆದುಕೊಂಡು, ಕರ್ನಾಟಕ ಮತ್ತು ಕೇರಳದ ರಾಜಕಾರಣಿಗಳು ಹೇಳಿಕೆ-ಪ್ರತಿ ಹೇಳಿಕೆ ಕೊಡುವುದರಲ್ಲಿ ತಲ್ಲೀನರಾಗಿದ್ದಾರೆ. ಕರ್ನಾಟಕದ ರಾಜಕೀಯ ಪಕ್ಷಗಳು ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜಕೀಯವನ್ನು ಬದಿಗಿರಿಸಿ, ನಾಡಿನ ಒಳಿತಿಗಾಗಿ ಒಂದಾಗಿ ಹೋರಾಡಿದ, ಪ್ರತಿಭಟನೆ ನಡೆಸಿದ ಉದಾಹರಣೆ ಯಿಲ್ಲದಿರುವುದು ನಮ್ಮ ದುರ್ವಿಧಿ.

ಈ ವಿವಾದಿತ ವಿಧೇಯಕವನ್ನು ಹಿಂಪಡೆಯುವ ಅಥವಾ ಕನ್ನಡ ಭಾಷೆಗೆ ಪೂರಕವಾಗಿ ಅದರಲ್ಲಿ ಬದಲಾವಣೆ ತರುವ ಕುರಿತು ಕೇರಳ ಸರಕಾರದಿಂದ ಈವರೆಗೆ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕರ್ನಾಟಕ ಸರಕಾರದ ನಿಯೋಗವು ರಾಷ್ಟ್ರಪತಿಗಳಲ್ಲಿಗೆ ತೆರಳಿ ಈ ವಿಧೇಯಕಕ್ಕೆ ತಡೆ ತರುವಂತೆ ಕೋರುವ ತೀರ್ಮಾನವಾಗಿದೆ.

ಆದರೆ, ಕುರ್ಚಿ ಕಾಳಗದಲ್ಲಿ ವ್ಯಸ್ತವಾಗಿರುವ ರಾಜ್ಯ ಸರಕಾರ ಈ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಗಂಭೀರ ಪ್ರಯತ್ನ ನಡೆಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಈ ವಿಚಾರಕ್ಕೆ ವಿವಾದದ ಸ್ವರೂಪ ದಕ್ಕಿದ ಹಿನ್ನೆಲೆಯಲ್ಲಿ ಕೇರಳದ ಮುಖ್ಯಮಂತ್ರಿ ಸ್ಪಷ್ಟನೆ ಕೊಟ್ಟು, “ಕೇರಳದಲ್ಲಿರುವ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಸ್ಪಷ್ಟ ಷರತ್ತನ್ನು ವಿಧೇಯಕವು ಒಳಗೊಂಡಿದೆ.

ನಾವು ಯಾವುದೇ ಭಾಷೆಯನ್ನು ಯಾರ ಮೇಲೂ ಹೇರುತ್ತಿಲ್ಲ; ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣ ರಕ್ಷಿಸಲಾಗಿದೆ" ಅಂತ ಒಂದಷ್ಟು ತೇಪೆ ಹಚ್ಚಲು ಯತ್ನಿಸಿದ್ದಾರೆ. ಇಂಥ ಅನೇಕ ವಿಧೇಯಕ, ನಿರ್ಣಯ, ವರದಿಗಳು ಈ ಹಿಂದೆಯೂ ಮಂಡನೆಯಾಗಿದ್ದರೂ, ಅವೆಲ್ಲವೂ ಕಡತಗಳಲ್ಲಷ್ಟೇ ಉಳಿದ ಕಹಿ ಉದಾಹರಣೆಗಳಿರುವಾಗ, ಈ ಸಮಜಾಯಿಷಿಯು ಕಡತ ದಲ್ಲಿನ ದಾಖಲೆಯಾಗಷ್ಟೇ ಉಳಿಯಲಿದೆ ಮತ್ತು ಮುಂಬರುವ ದಿನಗಳಲ್ಲಿ ಕಾಸರಗೋಡಿ ನಲ್ಲಿ ಕನ್ನಡವು ಕ್ರಮೇಣ ನಶಿಸಲಿದೆ.

ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಸರಗೋಡು ಪ್ರದೇಶದಲ್ಲಿ ಮಲಯಾಳಂ ಭಾಷೆ ಯನ್ನು ಮತ್ತಷ್ಟು ಆಳವಾಗಿ ಬೇರೂರಿಸುವ ಯತ್ನದ ನಿರ್ಣಾಯಕ ಘಟ್ಟವಿದು ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಮತ್ತು ಮಲಯಾಳಂ ಅನ್ನು ಸಮಾನವಾಗಿ ಮಾತನಾಡುವ ಜನರಿದ್ದ ಚಂದ್ರಗಿರಿ ನದಿಯಾಚೆಗಿನ ಹೊಸದುರ್ಗ ದವರೆಗಿನ ಪ್ರದೇಶ ದಲ್ಲಿ ಮಲಯಾಳಂ ಈಗಾಗಲೇ ಕನ್ನಡವನ್ನು ಮೀರಿ ಬೆಳೆದಿದೆ.

ಇನ್ನಿರುವುದು ನದಿಯ ಉತ್ತರ ಭಾಗ, ಅಲ್ಲಿಯೂ ಕನ್ನಡ ಮತ್ತು ಕನ್ನಡಿಗರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ನಡುವೆ ಕೆಲವು ‘ಕನ್ನಡ ಹೋರಾಟಗಾರರ’ ನಿಲುವುಗಳೂ ಕೊಂಚ ವಿಚಿತ್ರವೂ ಕಳವಳಕಾರಿಯೂ ಆಗಿವೆ. ಅವರು, ಕೇರಳದ ಈ ತೀರ್ಮಾನವನ್ನು ವಿರೋಧಿಸುವ ಬದಲಾಗಿ, ನಮ್ಮಲ್ಲೂ ಇಂಥದೇ ವಿಧೇಯಕವನ್ನು ಮಂಡಿಸುವ ನಿರ್ಣಯ ವನ್ನು ಕರ್ನಾಟಕ ಸರಕಾರವು ಕೈಗೊಳ್ಳಬೇಕು ಎಂದಿರುವುದು ಗಡಿನಾಡು ಕನ್ನಡಿಗರಿಗೆ ನುಂಗಲಾರದ ತುತ್ತಾಗಿದೆ.

ಕರ್ನಾಟಕದ ರಾಜಕೀಯ ಪಕ್ಷಗಳು/ಈವರೆಗಿನ ಸರಕಾರಗಳು ಕಾಸರಗೋಡಿನ ಕನ್ನಡಿಗರ ಹಿತರಕ್ಷಣೆಗೆ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದರೆ ಗಡಿನಾಡ ಕನ್ನಡಿಗರಿಗೆ ಇಂಥ ಇಕ್ಕಟ್ಟಿನ ಪರಿಸ್ಥಿತಿ ಬರುತ್ತಿರಲಿಲ್ಲ. ಜತೆಗೆ, ಶಾಸಕ/ಸಂಸದರಂಥ ಚುನಾಯಿತ ಜನಪ್ರತಿನಿಧಿಗಳೂ ಅಸಡ್ಡೆ ತೋರಿದರೆ, ಇಲ್ಲಿನ ಕನ್ನಡಿಗರು ಏನನ್ನು ತಾನೇ ನಿರೀಕ್ಷಿಸಲಾದೀತು? ಇದಲ್ಲದೆ ಗಡಿನಾಡಿನಲ್ಲಿ ಐಕ್ಯರಂಗವು ಕನ್ನಡ ಭಾಷೆಯನ್ನೂ, ಎಡರಂಗವು ತುಳುಭಾಷೆಯನ್ನೂ ತಂತಮ್ಮ ರಾಜಕೀಯ ದಾಳವಾಗಿ ಉಪಯೋಗಿಸಿಕೊಂಡು ಬಂದಿರುವುದು ಅಲ್ಲಿನ ಈಗಿನ ಈ ಪರಿಸ್ಥಿತಿಗೆ ಮತ್ತೊಂದು ಕಾರಣವಾಗಿದೆ.

ಪ್ರತಿಯೊಂದು ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಗೌರವಿಸುವುದು ನಮ್ಮ ದೇಶದ ಏಕತೆ ಮತ್ತು ಶ್ರೇಷ್ಠತೆಯ ಪ್ರತೀಕ. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಿಸುವ ಕೇರಳದ ಈ ವಿಧೇಯಕವು ರಾಷ್ಟ್ರಪತಿಗಳಿಂದ ತಿರಸ್ಕೃತಗೊಂಡು ಒಂದು ಮಾದರಿ ವ್ಯವಸ್ಥೆ ಸೃಷ್ಟಿಯಾಗಲಿ.

ಕಾಸರಗೋಡಿನ ಕನ್ನಡಿಗರನ್ನು ಒಂದಲ್ಲಾ ಒಂದು ರೀತಿಯಲ್ಲಿ ಕೆರಳಿಸುತ್ತಿರುವ ಕೇರಳ ಸರಕಾರದ ಪ್ರಯತ್ನ ವಿಫಲವಾಗಲಿ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಆಶೋತ್ತರಗಳಿಗೆ ಪೂರಕವಾದ ವಿಧೇಯಕ/ವರದಿ ಹೊರಬಂದು ಅನುಷ್ಠಾನಗೊಳ್ಳು ವಂತಾಗಲಿ, ಸೌಹಾರ್ದದ ವಾತಾವರಣ ಹೊಮ್ಮುವಂತಾಗಲಿ. ಹಾಗಾದೀತೇ? ಸದ್ಯಕ್ಕಂತೂ ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ..!’ ಎಂಬ ಕಯ್ಯಾರರ ದಶಕಗಳ ಹಿಂದಿನ ಘೋಷಣೆ ಮತ್ತೆ ಮತ್ತೆ ನೆನಪಾಗುತ್ತಿದೆ. ವಿಪರ್ಯಾಸವೆಂದರೆ, ಅಂದಿನಿಂದಲೂ ಯಾರೂ ‘ಕಾಸರಗೋಡು ಕನ್ನಡಿಗರ’ ನೆರವಿಗೆ ಪ್ರಾಮಾಣಿಕವಾಗಿ ಬರಲೇ ಇಲ್ಲ. ಛೇ!

(ಲೇಖಕರು ಗಡಿನಾಡ ಕನ್ನಡಿಗರು)