ಬೆಂಗಳೂರು ಭೀಕರ ಹತ್ಯಾಕಾಂಡ; ಮೈಸೂರಿನಲ್ಲಿ 2 ಮೃತದೇಹ ಪತ್ತೆ: ನರಹಂತಕನ ಮತ್ತಷ್ಟು ಕ್ರೌರ್ಯ ಬೆಳಕಿಗೆ
Bengaluru Mass Murder: ಬೆಂಗಳೂರಿನಲ್ಲಿ ನಡೆದ 7 ಮಂದಿಯ ಸರಣಿ ಹತ್ಯೆಯ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ರಾಜಾಜಿನಗರದ ಕ್ಯಾಬ್ ಡ್ರೈವರ್ ಇಂದುಶೇಖರ್ ಪತ್ನಿ ಮತ್ತು ಆಕೆಯ ಕುಟುಂಬದ 6 ಮಂದಿ ಸೇರಿ 7 ಜನರನ್ನು ಹತ್ಯೆಗೈದು ಮೃತದೇಹವನ್ನು ವಿವಿಧ ಕಡೆ ಎಸೆದಿದ್ದು, ಮೈಸೂರಿನಲ್ಲಿ ಇದೀಗ 2 ಮೃತದೇಹ ಪತ್ತೆಯಾಗಿದೆ.
ಮೈಸೂರಿನಲ್ಲಿ ಪೊಲೀಸರಿಂದ ಪರಿಶೀಲನೆ ನಡೆಯಿತು -
ಮೈಸೂರು, ನ. 8: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ, ಬೆಂಗಳೂರಿನಲ್ಲಿ ನಡೆದ 7 ಮಂದಿಯ ಸರಣಿ ಹತ್ಯೆಯ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ (Bengaluru Mass Murder). ರಾಜಾಜಿನಗರದ ಕ್ಯಾಬ್ ಡ್ರೈವರ್ ಇಂದುಶೇಖರ್ ಪತ್ನಿ ಮತ್ತು ಆಕೆಯ ಕುಟುಂಬದ 6 ಮಂದಿ ಸೇರಿ 7 ಜನರನ್ನು ಹತ್ಯೆಗೈದು ಮೃತದೇಹವನ್ನು ವಿವಿಧ ಕಡೆ ಎಸೆದಿದ್ದು, ಮೈಸೂರಿನಲ್ಲಿ ಇದೀಗ 2 ಮೃತದೇಹ ಪತ್ತೆಯಾಗಿದೆ. ಪುರುಷ ಮತ್ತು ಮಹಿಳೆಯ ಮೃತದೇಹ ಇದಾಗಿದ್ದು, ಹತ್ಯೆಯ ಇನ್ನಷ್ಟು ವಿವರ ಲಭ್ಯವಾಗುವ ಸಾಧ್ಯತೆ ಇದೆ.
ಚಾಮುಂಡಿ ಬೆಟ್ಟದಲ್ಲಿ 500 ಮೀಟರ್ ಅಂತರದಲ್ಲಿ ಎರಡು ಮೃತದೇಹ ಕಂಡು ಬಂದಿದೆ. ಅರೋಪಿ ಇಂದುಶೇಖರ್ನನ್ನು ಕರೆತಂದು ಪೊಲೀಸರು ಮಹಜರು ನಡೆಸಿದ್ದಾರೆ. ಇದು ಇಂದುಶೇಖರ್ ಪತ್ನಿ ಸುನೀತಾ ಅವರ ಅಣ್ಣ ಮತ್ತು ಅತ್ತಿಗೆ ಶಿವಕುಮಾರ್ ಮತ್ತು ದಿವ್ಯಾ ಅವರ ಮೃತದೇಹ ಎಂದು ಶಂಕಿಸಲಾಗಿದೆ.
ದಿವ್ಯಾ ಮತ್ತು ಶಿವಕುಮಾರ್ ಅವರ ಮೃತದೇಹವನ್ನು ಚಾಮುಂಡಿ ಬೆಟ್ಟದಲ್ಲಿ ಎಸೆದಿದ್ದಾಗಿ ಇಂದುಶೇಖರ್ ತಿಳಿಸಿದ್ದರಿಂದ ಇಲ್ಲಿ ಪರಿಶೀಲನೆ ನಡೆಸಲಾಗಿತ್ತು. ದಿವ್ಯಾ ಅವರ ಚಿಕ್ಕಮ್ಮ ಮಾತನಾಡಿ, ʼʼಆಸ್ತಿಗಾಗಿ ಈ ಕೊಲೆಗಳನ್ನು ಮಾಡಿದ್ದಾನೆ. ಅವನು ಈ ರೀತಿ ಮಾಡ್ತಾನೆ ಎಂದು ನಾವು ತಿಳಿದಿರಲಿಲ್ಲ. ಆತ ಏನಾದ್ರು ಹೇಳಲಿ ಆಸ್ತಿಗಾಗಿಯೇ ಕೊಲೆ ಮಾಡಿರೋದು. ಅವರ ಅತ್ತೆ ಜತೆ ಜಗಳ ಮಾಡ್ತಿದ್ದನಂತೆ. ಅವನನ್ನು ನಮ್ಮ ವಶಕ್ಕೆ ಕೊಡಿ. ಅವನಿಗೆ ನಾವು ತಕ್ಕ ಪಾಠ ಕಲಿಸುತ್ತೇವೆʼʼ ಎಂದು ತಿಳಿಸಿದ್ದಾರೆ.
ಬೆಚ್ಚಿ ಬೀಳಿಸಿದ ಕ್ರೈಂ
ಸದ್ಯ ಈ ಪ್ರಕರಣ ಭಾರಿ ಕುತೂಹಲ ಕೆರಳಿಸಿದ್ದು, ಇಂದುಶೇಖರ್ನ ಕೃತ್ಯ ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿದೆ. ಈ ಭೀಕರ ಹತ್ಯಾಕಾಂಡದಿಂದ ಅದೃಷ್ಟವಶಾತ್ ಪಾರಾಗಿರುವ 11 ವರ್ಷದ ಬಾಲಕ ಇಂದುಶೇಖರ್ನ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಪತ್ನಿಯ ಕುಟುಂಬಸ್ಥರನ್ನು ರಾಜಾಜಿನಗರದ ಕಟ್ಟಡವೊಂದರ ರೂಮ್ನಲ್ಲಿ ರುಬ್ಬುಕಲ್ಲಿನಿಂದ ಜಜ್ಜು ಕೊಲೆ ಮಾಡುತ್ತಿದ್ದ ಇಂದುಶೇಖರ್ ಬಳಿಕ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಎಸೆಯುತ್ತಿದ್ದ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ಕಾರಿನಲ್ಲಿ ಹೆಣ ಸಾಗಿಸುತ್ತಿದ್ದ ಇಂದುಶೇಖರ್ ಅದನ್ನು ಎಸೆಯಲು ಸೂಕ್ತ ಜಾಗ ಹುಡುಕಾಡುತ್ತಿದ್ದ. ಕಾರ್ ಚಲಾಯಿಸುತ್ತಲೇ ರಸ್ತೆ ಬದಿಯ ಕತ್ತಲೆಯ, ನಿರ್ಜನ ಪ್ರದೇಶಗಳನ್ನು ಹುಡುಕುತ್ತಿದ್ದ. ಸುತ್ತಮುತ್ತ ಯಾರೂ ಇಲ್ಲ ಎನ್ನುವುದನ್ನು ಖಚಿತಪಡಿಸಿ ಬಳಿಕ ಹೆಣಗಳನ್ನು ತುಂಬಿಸಿದ ಚೀಲಗಳನ್ನು ಪೊದೆಯ ಮಧ್ಯೆ ಎಸೆದು ಬರುತ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.
ಬೆಂಗಳೂರು ಹತ್ಯಾಕಾಂಡ; ಮಗಳ ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಬಳಸಿಕೊಂಡಿದ್ದ ತಂದೆ!
ಸೇಲಂ ಕಾಡಿನಲ್ಲಿ 2 ಮೃತದೇಹ ಪತ್ತೆ
ತಮಿಳುನಾಡಿನ ಸೇಲಂ ಜಿಲ್ಲೆಯ ಘಾಟ್ ಪ್ರದೇಶದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ 2 ಮೃತದೇಹ ಪತ್ತೆಯಾಗಿದ್ದು, ಇದು ಇಂದುಶೇಖರ್ನ ಪತ್ನಿ ಸುನೀತಾ ಮತ್ತು ರೂಪವತಿ ಅವರದ್ದು ಎಂದು ಗುರುತಿಸಲಾಗಿದೆ. ಇದಕ್ಕೂ ಮೊದಲು ಚಿಕ್ಕಬಳ್ಳಾಪುರ ನಂದಿಬೆಟ್ಟದ ಆಸುಪಾಸಿನಲ್ಲಿ 7 ವರ್ಷದ ಬಾಲಕ ಪುನೀತ್ನ ಶವ ಪತ್ತೆಯಾಗಿತ್ತು.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.