Mysore News: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ: ಪ್ರೊ ಶರಣಪ್ಪ ವಿ ಹಲಸೆ
Mysore News: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ: ಪ್ರೊ ಶರಣಪ್ಪ ವಿ ಹಲಸೆ
Ashok Nayak
January 10, 2025
ಮೈಸೂರು: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ತಂದೆ ತಾಯಿಗಳು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಶರಣಪ್ಪ ವಿ ಹಲಸೆ ಅವರು ತಿಳಿಸಿದರು.
ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ನ್ಯೂಟ್ರಿಶಿಯನ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಚಾಪ್ಟರ್ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಕ್ಕಳ ಸಂರಕ್ಷಣೆ ಮತ್ತು ಮಕ್ಕಳ ವಿವಿಧ ಕಾನೂನುಗಳ ಅನುಷ್ಠಾನ ಹಾಗೂ ವಿವಿಧ ಹಂತದ ಮಕ್ಕಳ ರಕ್ಷಣಾ ಸಮಿತಿಗಳ ರಚನೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಪಾತ್ರ, ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನೆಯೇ ಮೊದಲ ಪಾಠಶಾಲೆ. ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ತಂದೆ ತಾಯಿಗಳ ಪಾತ್ರ ಮೊದಲು. ನಂತರ ಶಿಕ್ಷಕರದ್ದು. ಇವರಿಬ್ಬರೂ ಮಾಡದೆ ಇದ್ದಾಗ ಅಧಿಕಾರಿಗಳ ಪಾತ್ರ ಬರುತ್ತದೆ ಎಂದರು.
ಎಲ್ಲಾ ಅಧಿಕಾರಿಗಳು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುತ್ತಾರೆ. ಮಕ್ಕಳನ್ನು ಸಂರಕ್ಷಣೆ ಮಾಡಿ ಅವರ ಹಕ್ಕುಗಳನ್ನು ರಕ್ಷಿಸಿ ಸಮಾಜವನ್ನು ಗಟ್ಟಿಯಾಗಿ ಕಟ್ಟಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿಗಳಾದ ಪಿ. ಶಿವರಾಜು ಅವರು ಮಾತನಾಡಿ ಮಕ್ಕಳು ಎದುರಿಸುವ ಸವಾಲುಗಳನ್ನು ನಾವು ಅರಿತುಕೊಳ್ಳಬೇಕು. ಕಾನೂನು ಈ ದೇಶದ ದೇವರು ಎಂದು ಹೇಳಬಹುದು. ಕಾನೂನಿನ ಅಡಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕು. ಎಲ್ಲಾ ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ಕಾಣಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳಾದ ಬಿ ಜಿ ದಿನೇಶ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರವನ್ನು ಹೊರತು ಪಡಿಸಿದರೆ ಮೈಸೂರು ನಗರದಲ್ಲಿ ಹೆಚ್ಚು ಪೋಕ್ಸೋ ಪ್ರಕರಣಗಳು ಕಂಡುಬರುತ್ತಿವೆ. ಎಷ್ಟೋ ಪ್ರಕರಣಗಳು ದಾಖಲಾಗುವು ದಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾನೂನು ಇದ್ದರೂ ಸಹ ಬಾಲ್ಯ ವಿವಾಹಗಳು ನಡೆಯುತ್ತಿವೆ. ಬಾಲ್ಯ ವಿವಾಹವು ನಡೆಯುತ್ತಿದೆ ಎಂದು ನ್ಯಾಯಾಧೀಶರ ಗಮನಕ್ಕೆ ಬಂದರೆ ಅಂಥಹ ಬಾಲ್ಯ ವಿವಾಹವನ್ನು ತಡೆಗಟ್ಟಲು ಆದೇಶವನ್ನು ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಬಾಲ್ಯ ವಿವಾಹ ತಡೆಗಟ್ಟಲು ಇರುವ ಸದಸ್ಯ ಅಧಿಕಾರಿಗಳು ಬಾಲ್ಯ ವಿವಾಹ ಆಗುತ್ತಿರು ವುದು ಗಮನಕ್ಕೆ ಬಂದರೂ ಸುಮ್ಮನಿದ್ದರೆ ಅಂಥಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂದು ಮಾಹಿತಿ ನೀಡಿದರು.
ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ವನ್ನು ನೀಡಬೇಕು. ಬಾಲ್ಯ ವಿವಾಹ ಆದರೆ ಮಕ್ಕಳ ಹಕ್ಕುಗಳು ಮೊಟಕು ಆಗುತ್ತವೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಆಗುವುದರಿಂದ ವಿಕಲಚೇತನ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚು. ತಾಯಿಯ ಆರೋಗ್ಯ ಕೆಡುತ್ತದೆ ಎಂದು ಮಾಹಿತಿ ನೀಡಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರಾದ ಮಂಜು ಮೇಡಂ ಅವರು ಮಾತನಾಡಿ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ, ಮಕ್ಕಳು ಮಾದಕ ವಸ್ತುಗಳ ವ್ಯಸನಿಗಳು ಆಗುತ್ತಿರುವುದು ಹಾಗೂ ಮಕ್ಕಳು ಕೆಟ್ಟ ಚಟಗಳಿಗೆ ಒಳಗಾಗುತ್ತಿರುವುದನ್ನು ತಡೆಗಟ್ಟಬೇಕು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರವೀಣ್ ಕೆ ವಿ ಅವರು ಮಾತನಾಡಿ ಮಕ್ಕಳು ನೇರವಾಗಿ ಸ್ಪಂದಿಸುವುದು ಶಿಕ್ಷಕರ ಜೊತೆ. ಮಕ್ಕಳು ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಶಿಕ್ಷಕರ ಜೊತೆ ಕಳೆಯುತ್ತಾರೆ. ಶಿಕ್ಷಕರು ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಗಳನ್ನು ಕಲಿಸಬೇಕು. ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಬಾಲ್ಯ ವಿವಾಹವು ಸಮಾಜಕ್ಕೆ ಒಂದು ಪಿಡುಗು ಆಗಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ಗಳು ನಡೆಯುತ್ತಿವೆ. ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯಲು 2012 ರಲ್ಲಿ ಪುಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದು ಮಕ್ಕಳಿಗೆ ರಕ್ಷಣೆ ನೀಡುವ ಪ್ರಬಲ ಕಾಯ್ದೆಯಾಗಿದೆ. ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಬೇಕು. 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಇದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಜೀವನದ ಕೌಶಲ್ಯಗಳ ಶಿಕ್ಷಣವನ್ನು ನೀಡಬೇಕು ಎಂದರು
ಕಾರ್ಯಕ್ರಮದಲ್ಲಿ, ವಿವಿಧ ಸಂಘ ಸಂಸ್ಥೆಗಳು ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.