ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರ ʼಪಾಕ್‌ನಲ್ಲಿ ನಮ್ಮ ಧುರಂಧರರುʼ ಪುಸ್ತಕ ಲೋಕಾರ್ಪಣೆ
ಮೈಸೂರು ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸಪ್ನ ಪುಸ್ತಕ ಮಳಿಗೆಯಲ್ಲಿ ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರ ‘ಪಾಕ್‌ನಲ್ಲಿ ನಮ್ಮ ಧುರಂಧರರು’ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ನಿಜ ಜೀವನದಲ್ಲಿ ಗೂಢಚಾರರಾಗಿ ಕೆಲಸ ಮಾಡುವವರ ನೈಜ ಜೀವನದ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದೇನೆ ಎಂದು ಡಾ.ಡಿ.ವಿ.ಗುರುಪ್ರಸಾದ್ ತಿಳಿಸಿದ್ದಾರೆ.
-
ಮೈಸೂರು: ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ (D. V. Guruprasad) ಅವರು ಬರೆದಿರುವ, ಸಪ್ನ ಪ್ರಕಾಶನದಿಂದ ಹೊರತಂದಿರುವ ‘ಪಾಕ್‌ನಲ್ಲಿ ನಮ್ಮ ಧುರಂಧರರು’ ಪುಸ್ತಕವನ್ನು ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸಪ್ನ ಪುಸ್ತಕ ಮಳಿಗೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, ನಮ್ಮ ದೇಶದ ನಿಜವಾದ ಧುರಂಧರರ ನೈಜ ಘಟನೆಗಳನ್ನು ಗುರುಪ್ರಸಾದ್ ಸರ್ ಅಕ್ಷರದ ಮೂಲಕ ಅದ್ಭುತವಾಗಿ ಅನಾವರಣಗೊಳಿಸಿದ್ದಾರೆ ಎಂದು ತಿಳಿಸಿದರು.
ಇತ್ತೀಚೆಗೆ ಬಿಡುಗಡೆಯಾದ ಧುರಂಧರ್ ಸಿನಿಮಾದ ಭಾಗ 1 ಹಾಗೂ ಭಾಗ 2 ಗುಂಗಿನಿಂದ ಜನರು ಇನ್ನೂ ಹೊರಬಂದಿಲ್ಲ. ಅದೇ ಸಮಯದಲ್ಲಿ ಗುರುಪ್ರಸಾದ್ ಸರ್ ಅವರು ಪಾಕ್‌ನಲ್ಲಿ ನಮ್ಮ ಧುರಂಧರರು ಪುಸ್ತಕವನ್ನು ಹೊರತಂದಿರುವುದು ವಿಶೇಷ. ಪುಸ್ತಕದಲ್ಲಿ ಅನೇಕ ನೈಜ ಕುತೂಹಲಕಾರಿ ಸಂಗತಿಗಳನ್ನು ದಾಖಲಿಸಿದ್ದಾರೆ. ಎಲ್ಲರೂ ಈ ಪುಸ್ತಕವನ್ನು ಕೊಂಡು ಓದಲೇಬೇಕು ಎಂದು ಅಭಿಪ್ರಾಯಪಟ್ಟರು.
ನಾನು ಡಾ.ಡಿ.ವಿ.ಗುರುಪ್ರಸಾದ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವಾಗ ಉತ್ತಮವಾದ ಪ್ರಕರಣಗಳ ತನಿಖೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದರು. ಅವರ ಶಿಷ್ಯಂದಿರು ಹಾಗೂ ಕೆಳ ದರ್ಜೆಯ ಅಧಿಕಾರಿಗಳನ್ನು ಸದಾ ಪ್ರೀತಿ-ಗೌರವದಿಂದ ಕಾಣುತಿದ್ದದ್ದು ಅವರ ದೊಡ್ಡಗುಣ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಪುಸ್ತಕದ ಲೇಖಕರಾದ ಡಾ.ಡಿ.ವಿ.ಗುರುಪ್ರಸಾದ್ ಅವರು ಮಾತನಾಡಿ, ಧುರಂಧರ್ ಸಿನಿಮಾ ಸತ್ಯಕ್ಕೆ ಹತ್ತಿರವಾದ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಆದರೆ ಕೆಲವು ಸಂಗತಿಗಳನ್ನು ಹೊರತುಪಡಿಸಿದರೆ ಉಳಿದದ್ದೆಲ್ಲಾ ಸಿನಿಮಾದಲ್ಲೇ ಹೇಳುವ ಹಾಗೆ ಕಾಲ್ಪನಿಕ ಸಂಗತಿಗಳನ್ನು ಸೇರಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಗೂಢಚಾರರಾಗಿ ಕೆಲಸ ಮಾಡುವವರ ನೈಜ ಜೀವನದ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು.
ಧುರಂದರ್ ಸಿನಿಮಾ ನೋಡಿದವರು ಬೇಹುಗಾರಿಕೆ ಕೆಲಸ ತುಂಬ ಕುತೂಹಲ ಹಾಗೂ ಥ್ರಿಲ್ಲಿಂಗ್ ಕೆಲಸ ಎಂದು ಭಾವಿಸಿರುತ್ತಾರೆ. ಆದರೆ ಬೇಹುಗಾರಿಕೆ ಕೆಲಸ ತುಂಬಾ ಕಠಿಣವಾದ ಕೆಲಸ. ಈ ಕೆಲಸದಲ್ಲಿ ಯಶಸ್ಸು ಸಿಗುವುದು ತುಂಬಾ ಕಡಿಮೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಮರಣ ಖಚಿತ ಎಂದು ತಿಳಿಸಿದರು.
ಇಷ್ಟೆಲ್ಲಾ ಶ್ರಮವಹಿಸಿ ತಮ್ಮ ಜೀವ ಹಾಗೂ ಜೀವನವನ್ನು ಪಣಕ್ಕೆ ಇಟ್ಟು ಬೇರೆ ದೇಶದಿಂದ ಮಾಹಿತಿಗಳನ್ನು ತರುತ್ತಾರೆ. ಆದರೆ ಕೆಲಸ ಮಾಡಿದ ಬಳಿಕ ಅವರಿಗೆ ಯಾವ ರೀತಿಯ ಪುರಸ್ಕಾರಗಳು ಸಿಗುವುದಿಲ್ಲ. ನಿವೃತ್ತರಾಗಿ ದೇಶಕ್ಕೆ ಹಿದಿರುಗಿದ ಬಳಿಕ ಇವರ ತ್ಯಾಗ ಬಲಿದಾನವನ್ನು ಯಾರು ಸ್ಮರಣೆ ಮಾಡುವುದಿಲ್ಲ. ಯಾವುದೇ ಪುರಸ್ಕಾರವಾಗಲಿ ನಿವೃತ್ತಿ ವೇತನವಾಗಲಿ ಏನು ಸಿಗುವುದಿಲ್ಲ ಎಂದು ತಿಳಿಸಿದರು.
ನಿವೃತ್ತ ಗೂಢಚಾರರೆಲ್ಲಾ ಸೇರಿ ನಮಗೆ ನಿವೃತ್ತಿ ವೇತನ ನೀಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆದರೆ ಅದನ್ನು ಮಾಡಲಾಗುವುದಿಲ್ಲ. ಹಾಗೆ ಮಾಡಿದರೆ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮಾಡಿದಂತಾಗುತ್ತದೆ. ಕಾನೂನಿನ ಪ್ರಕಾರ ಗೂಢಚರ್ಯೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ಕೆಲಸ ನೇಪಥ್ಯದಲ್ಲೇ ನಡೆಯುತ್ತದೆ. ಈ ಎಲ್ಲಾ ವಿಚಾರಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ. ಬೇಹುಗಾರಿಕೆ ಮಾಡುವವರ ಜೀವನ ಸುಲಭಸಾಧ್ಯವಲ್ಲ. ಅವರ ಜೀವನದ ಕೆಲವು ಘಟನೆಗಳನ್ನು ಬರೆಯುವಾಗ ನನ್ನ ಕಣ್ಣಲ್ಲೇ ನೀರು ತುಂಬಿ ಬಂದಿತ್ತು ಎಂದರು.
ಚಾಮರಾಜನಗರ ಜಿಲ್ಲೆಯ ಲೋಕಾಯುಕ್ತ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ನಿವೃತ್ತ ಡಿಆರ್‌ಡಿಒ ಪಿಆರ್‌ಓ ಎಸ್.ಜಯಪ್ರಕಾಶ್ ರಾವ್, ಹಿರಿಯ ಪತ್ರಕರ್ತರಾದ ಕೂಡ್ಲಿ ಗುರುರಾಜ್, ವಿಶ್ವವಾಣಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾದ ಎಂ.ಎನ್.ಮೋಹನ್ ಕುಮಾರ್, ಲೇಖಕಿ ಹಾಗೂ ಹವ್ಯಾಸಿ ಪತ್ರಕರ್ತರಾದ ರೇಣುಕಾ ಮಂಜುನಾಥ್, ಸಪ್ನ ಪುಸ್ತಕ ಮಳಿಗೆಯ ಮೈಸೂರು ಶಾಖೆಯ ಮುಖ್ಯಸ್ಥರಾದ ಜಿಗರ್ ಶಾ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.