ವೃದ್ಧಾಪ್ಯ, ಮಾರಣಾಂತಿಕ ಕಾಯಿಲೆಗಳಿಂದ ಬಳಲುವವರ ಬಗ್ಗೆ ತುರ್ತಾಗಿ ಗಮನಕೊಡಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
Sadguru Sri Madhusudan Sai: ಅಮೆರಿಕದಲ್ಲಿ ವೃದ್ಧಾಪ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುವವರ ಚಿಕಿತ್ಸೆಗಾಗಿ ತಿಂಗಳಿಗೆ ಐದು ಸಾವಿರ ಡಾಲರ್ ಸಹಾಯಧನ ಕೊಡುವ ಯೋಜನೆಯಿದೆ. ಜಪಾನ್ ಮತ್ತು ಯೂರೋಪ್‌ನ ಹಲವು ದೇಶಗಳಲ್ಲಿ ಇಂಥದ್ದೇ ಯೋಜನೆಗಳಿವೆ. ನಮ್ಮ ಸರ್ಕಾರಗಳೂ ಈ ಕುರಿತು ಯೋಚಿಸಬೇಕಾದ ಸಂದರ್ಭ ಎದುರಾಗಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.
ಮೈಸೂರಿನ ದಿವ್ಯಸಂಜೆ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ. -
ಮೈಸೂರು, ಸೆ.05: ವೃದ್ಧಾಪ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವಿದೇಶದ ಮಾದರಿ ಭಾರತದಲ್ಲೂ ಸಮಾಜ ಸುರಕ್ಷಾ ಸೇವೆಗಳು ಇನ್ನಷ್ಟು ಉತ್ತಮಗೊಳ್ಳಬೇಕಾಗಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ವಿಷಾದಿಸಿದರು. ನಗರದಲ್ಲಿ ಶನಿವಾರ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಸಭಿಕರ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.
ಒಂದು ಕುಟುಂಬದಲ್ಲಿ ಕೆಲಸ ಮಾಡುವ ಏಕೈಕ ವ್ಯಕ್ತಿಗೆ ಮಾರಣಾಂತಿಕ ಕಾಯಿಲೆ ಬಂದಾಗ ಇಡೀ ಕುಟುಂಬದ ವ್ಯವಸ್ಥೆ ಕುಸಿದು ಬೀಳುತ್ತದೆ. ತಾಯಿಯೊಬ್ಬಳು ಏನೂ ಮಾಡಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ಸಂದರ್ಭದಲ್ಲಿ ಸಮಾಜವಾಗಿ ಎಲ್ಲರೂ ಅಂಥ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಕರೆ ನೀಡಿದರು.
ನಮ್ಮ ದೇಶದಲ್ಲಿ ಇಂಥವರಿಗೆ ಹಣಕಾಸು ಭದ್ರತೆ ಒದಗಿಸುವ ಯೋಜನೆಗಳೇ ಇಲ್ಲ. ಅಮೆರಿಕದಲ್ಲಿ ವೃದ್ಧಾಪ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುವವರ ಚಿಕಿತ್ಸೆಗಾಗಿ ತಿಂಗಳಿಗೆ ಐದು ಸಾವಿರ ಡಾಲರ್ ಸಹಾಯಧನ ಕೊಡುವ ಯೋಜನೆಯಿದೆ. ಜಪಾನ್ ಮತ್ತು ಯೂರೋಪ್‌ನ ಹಲವು ದೇಶಗಳಲ್ಲಿ ಇಂಥದ್ದೇ ಯೋಜನೆಗಳಿವೆ. ನಮ್ಮ ಸರ್ಕಾರಗಳೂ ಈ ಕುರಿತು ಯೋಚಿಸಬೇಕಾದ ಸಂದರ್ಭ ಎದುರಾಗಿದೆ ಎಂದು ವಿಶ್ಲೇಷಿಸಿದರು.
ಜೆನ್‌ಜಿ ತಲೆಮಾರಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು, 'ಈಗಿನ ತಲೆಮಾರು ವಿಕಸನವಾಗುತ್ತಿದೆ. ಪ್ರಶ್ನೆ ಕೇಳುವವರು ಮಾತ್ರವೇ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ. ಸಮಸ್ಯೆ ಇರುವುದು ಹಿರಿಯರಲ್ಲಿ. ಈಗ ಹಿರಿಯರು ತಮ್ಮ ಜ್ಞಾನ ಹೆಚ್ಚಿಸಿಕೊಂಡು ಮಕ್ಕಳಿಗೆ ಉತ್ತರ ಹೇಳಬೇಕು' ಎಂದು ಸಲಹೆ ಮಾಡಿದರು.
ನೇಪಾಳ ದುರಂತದ ಕುರಿತು ಪ್ರಸ್ತಾಪಿಸಿದ ಸದ್ಗುರು, ಪರಿಸರವು ನಮ್ಮನ್ನು ಅಂದರೆ ಮನುಷ್ಯರನ್ನು ಪ್ರತಿಫಲಿಸುತ್ತದೆ. ನಮ್ಮ ಭೂಮಿಯೂ ಸಹ ನಿರಂತರವಾಗಿ ವಿಕಸನವಾಗುತ್ತಿದೆ. ಭೂಮಿಯೊಳಗೂ ಏನೇನೋ ನಡೆಯುತ್ತಲೇ ಇರುತ್ತದೆ. ಅದೂ ಸಹ ಇಂಥ ದುರಂತಗಳಿಗೆ ಕಾರಣವಾಗಬಹುದು. ಆದರೆ ಸಂಪನ್ಮೂಲಗಳ ವಿಪರೀತ ಬಳಕೆ. ಮರಗಳನ್ನು ಕಡಿಯುವುದು, ಎಲ್ಲವನ್ನೂ ರಾಸಾಯನಿಕಗೊಳಿಸುವುದು ಹಲವು ಅನರ್ಥಗಳಿಗೆ ಕಾರಣವಾಗುತ್ತವೆ. ಮನುಷ್ಯನ ಕ್ರಿಯೆಗೆ ಪರಿಸರ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.
ನನಸಾಗುತ್ತಿರುವ ಕನಸು ಮುದ್ದೇನಹಳ್ಳಿ
ಪ್ರಾಸ್ತಾವಿಕವಾಗಿ ಮಾತನಾಡಿದ ಗೋಪಿಕಾ ಪರ್ಫ್ಯೂಮರಿ ವರ್ಕ್ಸ್ ನಿರ್ದೇಶಕ ಎಸ್.ಎಲ್. ರಾಮಚಂದ್ರ, ಮುದ್ದೇನಹಳ್ಳಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಎಲ್ಲರೂ ನೋಡಬೇಕು. ಇಡೀ ಜಗತ್ತು ಒಂದು ಕುಟುಂಬ ಆಗಲು ಸಾಧ್ಯ ಎನ್ನುವುದು ಈಗ ನನಸಾಗುತ್ತಿರುವ ಕನಸು ಎಂದು ಪ್ರತಿಪಾದಿಸಿದರು.
ತನ್ನ ಬದುಕಿನ ಹಾದಿ ಹಂಚಿಕೊಂಡ ಮೈಸೂರಿನ ಶ್ರೀ ಸತ್ಯಸಾಯಿ ಅನಂತನಿಕೇತನಂ ವಿದ್ಯಾರ್ಥಿ ಕುಶಾಲ್, ನಾನು ಇಲ್ಲಿಗೆ ಸೇರುವ ಮೊದಲು ತುಂಬಾ ಕಷ್ಟಪಟ್ಟಿದ್ದೆ. ಆದರೆ ಒಮ್ಮೆ ಗುರುಕುಲಕ್ಕೆ ಬಂದ ನಂತರ ಎಲ್ಲರೂ ನನ್ನ ಸೋದರರಾದರು. ನಾನು ಮೊದಮೊದಲು ಒಂಟಿತನ ಅನುಭವಿಸುತ್ತಿದ್ದೆ. ಮನೆಗೆ ಹೋಗಬೇಕು ಅನ್ನಿಸುತ್ತಿತ್ತು. ಆಗ ಒಬ್ಬ ವಾರ್ಡನ್ ಅಣ್ಣ ನನ್ನ ಮನಸ್ಸು ಅರ್ಥ ಮಾಡಿಕೊಂಡು ಪ್ರೋತ್ಸಾಹದ ಮಾತುಗಳನ್ನು ಆಡಿದರು. ನಂತರ ನನಗೆ ಇದೇ ಮನೆಯಾಯಿತು. ಸಂಸ್ಥೆಯು ನನಗೆ ಎಲ್ಲರನ್ನೂ ಗೌರವಿಸುವುದು ಮತ್ತು ಪ್ರೇಮಿಸುವುದನ್ನು ಕಲಿಸಿದೆ. ನಾನು ದೊಡ್ಡವನಾದ ಮೇಲೆ ವೈದ್ಯನಾಗುವೆ. ಗುರುಗಳ ಆಸ್ಪತ್ರೆಯಲ್ಲಿ ಸೇವೆ ಮಾಡುವೆ ಎಂದು ಹೇಳಿದರು.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವೇದಪಾರಾಯಣದ ಮೂಲಕ ಕಾರ್ಯಕ್ರಮ ಆರಂಭವಾಯಿತು. ರಾಘವೇಂದ್ರ ಜನ್ನು ನಿರೂಪಿಸಿದರು. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮಾರ್ಗದರ್ಶಕ, ಮೈಸೂರು ವಿವಿ ನಿವೃತ್ತ ಕುಲಪತಿ ಶಶಿಧರ್ ಪ್ರಸಾದ್, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ ಲೋಕನಾಥ್, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಜ್ಞಾನಪ್ರಕಾಶ್, ನಾವೆಲ್ ಟಿಶ್ಯೂಸ್ ಸಂಸ್ಥೆಯ ನಿರ್ದೇಶಕ ಎ ಬಿ ದೊಡ್ಡಮನಿ, ಅರವಿಂದ ಪರ್ಫ್ಯೂಮರಿ ಸಂಸ್ಥೆಯ ರಿಷಿ, ಮಂಗಳೂರು ಗಣೇಶ್ ಬೀಡಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಜಗನ್ನಾಥ ಶೆಣೈ, ಉದ್ಯಮಿ ಮನೋಜ್ ಶೆಣೈ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾಕ್ಟರ್ ಗಿರಿಧರ್, ಭಾರತೀಯ ಭಾಷಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಬಸವರಾಜ ಉಪಸ್ಥಿತರಿದ್ದರು.
ಬದಲಾಗಬೇಕಿರುವುದು ಮಕ್ಕಳಲ್ಲ, ಪೋಷಕರು, ಶಿಕ್ಷಕರು: ಸದ್ಗುರು ಶ್ರೀ ಮಧುಸೂದನ ಸಾಯಿ
'ಶ್ರೀ ಸತ್ಯಸಾಯಿ ಅನಂತನಿಕೇತನಂ' ಪರಿಚಯ
ಮೈಸೂರು ನಗರದಲ್ಲಿ 2019 ರಿಂದ ಕಾರ್ಯನಿರ್ವಹಿಸುತ್ತಿರುವ 'ಶ್ರೀ ಸತ್ಯಸಾಯಿ ಅನಂತನಿಕೇತನಂ ಗುರುಕುಲ'ವು ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ನೀರೆರೆಯುವ ಅದರ್ಶ ತಾಣ. ಈ ವಸತಿಸಹಿತ ವಿದ್ಯಾಸಂಸ್ಥೆಯು ಮಕ್ಕಳನ್ನು ಸಮಾಜಮುಖಿ ವ್ಯಕ್ತಿಗಳನ್ನಾಗಿ ರೂಪಿಸುತ್ತಿದೆ. ಈವರೆಗೆ 300 ಕ್ಕೂ ಹೆಚ್ಚು ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 40 ಮಕ್ಕಳು ದಾಖಲಾಗಿದ್ದಾರೆ. ಈ ಪೈಕಿ ಶೇ. 62 ರಷ್ಟು ಮಕ್ಕಳು ಗ್ರಾಮೀಣ ಹಿನ್ನೆಲೆಯವರು, ಶೇ. 86 ರಷ್ಟು ಮಕ್ಕಳು ಬಿಪಿಎಲ್ ಕುಟುಂಬಗಳ ಹಿನ್ನೆಲೆಯಿಂದ ಬಂದವರು ಮತ್ತು ಶೇ. 70 ರಷ್ಟು ಮಕ್ಕಳು ಅವರ ಕುಟುಂಬದ ಮೊದಲ ಕಲಿಕಾರ್ಥಿಗಳು ಎನ್ನುವುದು ವಿಶೇಷ. ಇದರ ಜತೆಗೆ ಮೈಸೂರು ಜಿಲ್ಲೆಯ 2,400 ಸರ್ಕಾರಿ ಶಾಲೆ 2 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿದಿನ ಮುಂಜಾನೆ ಸಾಯಿಶ್ಯೂರ್ ಪೌಷ್ಟಿಕ ಆಹಾರ ತಲುಪುತ್ತಿದೆ.