GST Council: ನೂತನ ಜಿಎಸ್‌ಟಿ: ಮಧ್ಯಮ ವರ್ಗಕ್ಕೆ ಗುಡ್, ರಾಜ್ಯದ ಆದಾಯಕ್ಕೆ ಬ್ಯಾಡ್! 70 ಸಾವಿರ ಕೋಟಿ ನಷ್ಟ ಅಂದಾಜು
Krishna Byre Gowda: ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, 2024 ಮತ್ತು 25ನೇ ಸಾಲಿಗೆ 70 ಸಾವಿರ ಕೋಟಿ ಒಂದು ವರ್ಷಕ್ಕೆ ಖೋತಾ ಆಗಲಿದೆ ಎಂದು ಹೇಳಿದ್ದಾರೆ. ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುವ ಆತಂಕವನ್ನು ಕೃಷ್ಣ ಬೈರೇಗೌಡ ವ್ಯಕ್ತಪಡಿಸಿದ್ದಾರೆ.

-

ಬೆಂಗಳೂರು: ಈ ಬಾರಿ ನವರಾತ್ರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು, ಔಷಧಿ ಆಟೊಮೊಬೈಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರ ಭಾರಿ ಇಳಿಕೆ ಮಾಡಿ ಜಿಎಸ್‌ಟಿ ಕೌನ್ಸಿಲ್ (GST Council) ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಜಿಎಸ್‌ಟಿ ತೀರ್ಮಾನಗಳಿಂದ ರಾಜ್ಯಕ್ಕೆ ವಾರ್ಷಿಕ 70,000 ಕೋಟಿ ಖೋತಾ ಆಗಲಿದೆ. ರಾಜ್ಯಕ್ಕೆ ಆರ್ಥಿಕ ಹೊರೆ ಆಗಬಹುದು ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ತೀರ್ಮಾನಗಳಿಂದ 2016-17 ಮತ್ತು 2024-25ರ ನಡುವೆ ಕರ್ನಾಟಕಕ್ಕೆ ಆಗಿರುವ ಆದಾಯದ ಖೋತಾ ಪ್ರಮಾಣ 70 ಸಾವಿರ ಕೋಟಿ. ಇದು ರಾಜ್ಯದ ಪರಿಸ್ಥಿತಿ ಆಗಿದ್ದು, ಬೇರೆ ಬೇರೆ ರಾಜ್ಯಗಳದ್ದು ಬೇರೆ ಬೇರೆ ರೀತಿ ಇರಬಹುದು. 2024 ಮತ್ತು 25ನೇ ಸಾಲಿಗೆ 70 ಸಾವಿರ ಕೋಟಿ ಒಂದು ವರ್ಷಕ್ಕೆ ಖೋತಾ ಆಗಲಿದೆ ಎಂದು ದರ ಸರಳೀಕರಣದಿಂದ ಆಗುವ ಪರಿಣಾಮದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುವ ಆತಂಕವನ್ನು ಕೃಷ್ಣ ಬೈರೇಗೌಡ ವ್ಯಕ್ತಪಡಿಸಿದರು.
ಏನೆಲ್ಲ ಬದಲಾವಣೆ?
ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಲಾಗಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್‌ಗಳನ್ನು ರದ್ದು ಮಾಡಲಾಗಿದೆ. ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಮತ್ತೊಂದೆಡೆ, ಕೆಲವು ವಸ್ತುಗಳಿಗೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಯಾವೆಲ್ಲ ವಸ್ತುಗಳಿಗೆ ತೆರಿಗೆ ಇಲ್ಲ?
ಯುಎಚ್ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ ಇವುಗಳು ಈವರೆಗೆ ಶೇ 5 ರ ಜಿಎಸ್‌ಟಿ ಸ್ಲ್ಯಾಬ್ ಅಡಿ ಬರುತ್ತಿದ್ದವು. ಈ ವಸ್ತುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆಹಾರ ವಸ್ತುಗಳು ಮಾತ್ರವಲ್ಲದೆ, ಮಕ್ಕಳ ಕಲಿಕಾಸಾಮಗ್ರಿಗಳ ಮೇಲಿನ ಜಿಎಸ್‌ಟಿಯನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಮ್ಯಾಪ್ಸ್, ಚಾರ್ಟ್ಸ್ ಮತ್ತು ಗ್ಲೋಬ್ಸ್, ಪೆನ್ಸಿಲ್ಸ್, ಶಾರ್ಪರ್ನರ್ಸ್, ಎರೇಸರ್, ಕ್ರಯನ್ಸ್, ಮತ್ತು ಪ್ಯಾಸ್ಟೆಲ್‌ಗಳು, ಎಕ್ಸರ್‌ಸೈಸ್ ಬುಕ್ಸ್ ಮತ್ತು ನೋಟ್ ಪುಸ್ತಕಗಳು ಇವುಗಳ ಮೇಲೆ ಮೊದಲು ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದನ್ನು ಸಂಪೂರ್ಣ ತೆರವು ಮಾಡಲಾಗಿದ್ದು, ಇನ್ಮುಂದೆ ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ.
ವೈಯಕ್ತಿಕ, ಆರೋಗ್ಯ ವಿಮೆಗೂ ಇಲ್ಲ ತೆರಿಗೆ
ವೈಯಕ್ತಿಕ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ ಶೇ 18ರ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ವೈಯಕ್ತಿಕ ಜೀವವಿಮೆ ಮತ್ತು ಆರೋಗ್ಯ ವಿಮೆಗೆ ಕೇಂದ್ರಸರ್ಕಾರ ಬಹುದೊಡ್ಡ ರಿಯಾಯಿತಿ ನೀಡಿದೆ.
ಯಾವೆಲ್ಲ ವಸ್ತುಗಳ ತೆರಿಗೆ ಇಳಿಕೆ?
12% ಅಥವಾ 18%ನಿಂದ 5%ಗೆ ಇಳಿದಿರುವ ವಸ್ತುಗಳು: ಕೇಶ ತೈಲ, ಟಾಯ್ಲೆಟ್ ಸೋಪ್, ಸೋಪ್ ಬಾರ್‌ಗಳು, ಶಾಂಪೂ, ಶೇವಿಂಗ್ ಕ್ರೀಮ್, ಟೂತ್‌ಬ್ರಶ್, ಟೂತ್‌ಪೇಸ್ಟ್, ಸೈಕಲ್, ಟೇಬಲ್ ವೇರ್, ಕಿಚನ್ ವೇರ್ ಮತ್ತು ಇತರೆ ಮನೆಯ ಉಪಕರಣಗಳು, ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು, ನಾಮ್‌ಕೀನ್‌ಗಳು, ಪಾತ್ರೆಗಳು, ಫೀಡಿಂಗ್ ಬಾಟಲಿಗಳು, ಶಿಶುಗಳಿಗೆ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು, ಹೊಲಿಗೆ ಯಂತ್ರಗಳು.
28%ನಿಂದ 18%ಗೆ ಇಳಿದಿರುವ ವಸ್ತುಗಳು: ಹವಾನಿಯಂತ್ರಣ ಯಂತ್ರಗಳು (ಎಸಿ), 32 ಇಂಚುಗಳಿಗಿಂತ ದೊಡ್ಡದಾದ ಟಿವಿಗಳು (ಎಲ್ಲಾ ಟಿವಿಗಳು ಈಗ 18% ಜಿಎಸ್‌ಟಿ ವ್ಯಾಪ್ತಿಗೆ), ಡಿಶ್‌ವಾಷಿಂಗ್ ಯಂತ್ರಗಳು, ಸಣ್ಣ ಕಾರುಗಳು, 350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್ಗಳು, ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು, ಎಲ್ಲಾ ಆಟೋ ಭಾಗಗಳು, ತ್ರಿಚಕ್ರ ವಾಹನಗಳು. ಸಿಮೆಂಟ್.
ಐಷಾರಾಮಿ ವಸ್ತುಗಳಿಗೆ ತೆರಿಗೆ ಏರಿಕೆ
ಈವರೆಗೆ ಶೇಕಡಾ 28ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದ ಐಷಾರಾಮಿ ವಸ್ತುಗಳಿಗೆ ಇನ್ಮುಂದೆ ಶೇ 40 ರ ಜಿಎಸ್‌ಟಿ ಪಾವತಿಸಬೇಕಾಗಲಿದೆ. ಸಿಗರೇಟ್, ಸಿಗಾರ್, ಪಾನ್ ಮಸಾಲ, ಜರ್ದಾ, ಬೀಡಿ, ತಂಬಾಕು, ಜಗಿಯುವ ವಸ್ತುಗಳು ಇನ್ಮುಂದೆ 40 ಪರ್ಸೆಂಟ್ ಜಿಎಸ್‌ಟಿ ಅಡಿಯಲ್ಲಿ ಬರುತ್ತವೆ. ಅಧಿಕ ಸಕ್ಕರೆ ಅಂಶ ಇರುವ ಪಾನೀಯಗಳು, ಸೋಡಾ, ಕೂಲ್ ಡ್ರಿಂಕ್ಸ್, ಹಣ್ಣಿನ ಕಾರ್ಬೊನೇಟೆಡ್ ಪಾನಿಯಗಳು, ಕೆಫೀನ್ ಹೊಂದಿರುವ ಪಾನಿಯಗಳ ಮೇಲೆ ಶೇ 40ರಷ್ಟು ತೆರಿಗೆ ಬೀಳಲಿದೆ. ಪ್ಲೈಟ್, ಹೆಲಿಕಾಪ್ಟರ್, ಐಷಾರಾಮಿ ಕಾರುಗಳು, 1500 ಸಿಸಿಗಿಂತ ಹೆಚ್ಚು, 4,000 ಮಿ.ಮೀ ಉದ್ದವಿರುವ ಕಾರುಗಳು, 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್ಗಳ ದರಗಳು ಇನ್ನಷ್ಟು ದುಬಾರಿಯಾಗಲಿವೆ. ಖಾಸಗಿ ವಿಮಾನ, ಹೆಲಿಕಾಪ್ಟರ್ ಬಳಕೆ, ಮನರಂಜನೆಗೆ ದೋಣಿ, ಇತರ ಹಡಗುಗಳ ಬಳಕೆ, ಹೆಚ್ಚು ಸಾಮರ್ಥ್ಯದ ರಿವಾಲ್ವರ್, ಪಿಸ್ತೂಲ್ಗಳ ಮೇಲೆ ಶೇ 40 ರ ಸ್ಲ್ಯಾಬ್ ಇರಲಿದೆ.
ಇದನ್ನೂ ಓದಿ: GST Reforms: ತಂಬಾಕು, ಸಿಗರೇಟ್ ಸೇದೋರಿಗೆ ಶಾಕ್; ಶೇಕಡಾ 40ರಷ್ಟು ಜಿಎಸ್‌ಟಿ ಹೇರಿದ ಸರ್ಕಾರ