ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astemida Isira: ಸೆಪ್ಟೆಂಬರ್ 7ಕ್ಕೆ ಬೆಂಗಳೂರಿನಲ್ಲಿ'ಅಸ್ಟೆಮಿದ ಐಸಿರ'- ರಾಜಧಾನಿಯ ತುಳುವರ ಈ ಹಬ್ಬದಲ್ಲಿ ಏನೇನಿರಲಿದೆ?

Astemida Isira 2025: ತುಳುವರ ಅತಿದೊಡ್ಡ ಹಬ್ಬ‘ಅಸ್ಟೆಮಿದ ಐಸಿರ’ ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ತುಳುನಾಡ ಜವನೆರ್ ಬೆಂಗಳೂರು (ರಿ) ಆಯೋಜನೆ ಮಾಡುತ್ತಿರುವ ಎಂಟನೇ ವರ್ಷದ ‘ಅಸ್ಟೆಮಿದ ಐಸಿರ’ ಕಾರ್ಯಕ್ರಮ ಇದೇ ಬರುವ ಸೆಪ್ಟೆಂಬರ್ 7ನೇ ತಾರೀಕಿನಂದು ವಿಜಯನಗರದ ಬಂಟರ ಭವನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಸೆಪ್ಟೆಂಬರ್ 7ಕ್ಕೆ ಬೆಂಗಳೂರಿನಲ್ಲಿ 'ಅಸ್ಟೆಮಿದ ಐಸಿರ'

ಅಸ್ಟೆಮಿದ ಐಸಿರ -

Profile Pushpa Kumari Sep 4, 2025 12:00 PM

ಬೆಂಗಳೂರು: ಪ್ರತೀ ವರ್ಷ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ತುಳುವರ ಅತಿದೊಡ್ಡ ಹಬ್ಬ ‘ಅಸ್ಟೆಮಿದ ಐಸಿರ’ (Astemida Isira) ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ತುಳುನಾಡ ಜವನೆರ್ ಬೆಂಗಳೂರು (ರಿ) ಆಯೋಜನೆ ಮಾಡುತ್ತಿರುವ ಎಂಟನೇ ವರ್ಷದ ‘ಅಸ್ಟೆಮಿದ ಐಸಿರ’ ಕಾರ್ಯಕ್ರಮ ಇದೇ ಬರುವ ಸೆಪ್ಟೆಂಬರ್ 7ನೇ ತಾರೀಕಿನಂದು ವಿಜಯನಗರದ ಬಂಟರ ಭವನ ದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಷ್ಠಿತ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳು, ಆಹಾರ ಮೇಳ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ.

ಸನ್ಮಾನ ಕಾರ್ಯಕ್ರಮ:

ಭಾರತದ ಪ್ರತಿಭಾನ್ವಿತ ಕಲಾ ನಿರ್ದೇಶಕ, ಕಳೆದ 13 ವರ್ಷಗಳಿಂದ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಟ್ಯಾಬ್ಲೋದ ನಿರ್ಮಾಣ ಹೊಣೆ ಹೊತ್ತಿರುವ ಶಶಿಧರ ಅಡಪ ಅವರಿಗೆ ಸನ್ಮಾನ ನಡೆಯಲಿದೆ.ಕಂಬಳ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ನೂರಾರು ಮೆಡಲ್‌ ಗಳನ್ನು ಗೆದ್ದು ಅಪಾರ ಅಭಿಮಾನಿಗಳನ್ನು ಹೊಂದಿರುವ ಕಂಬಳದ ಕೋಣ ‘ಚಾಂಪಿಯನ್ ಕುಟ್ಟಿ’ಗೆ ಸನ್ಮಾನ ನಡೆಯಲಿದೆ.

ಅದೇ ರೀತಿ ಕಂಬಳದ ಕೋಣಗಳಿಗೆಂದೇ ಸ್ವಿಮ್ಮಿಂಗ್ ಫೂಲ್ ಮಾಡಿ ಕಂಬಳ ಕೂಟದಲ್ಲಿ ವಿಶಿಷ್ಟ ಹೆಸರು ಮಾಡಿರುವ ನಂದಳಿಕೆ ಶ್ರೀಕಾಂತ್ ಭಟ್‌ಗೆ ಸನ್ಮಾನ ನಡೆಯಲಿದೆ.ವಿಶೇಷವಾಗಿ 170 ಗಂಟೆ ಗಳ ಕಾಲ ಸತತವಾಗಿ ಭರತನಾಟ್ಯ ಪ್ರದರ್ಶನ ಮಾಡಿ ಭರತನಾಟ್ಯದಲ್ಲಿ ವಿಶ್ವ ದಾಖಲೆಗೈದು ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಮಂಗಳೂರಿನ ಪ್ರತಿಭೆ ರೆಮೊನಾ ಪಿರೇರಾ ಅವರಿಗೆ ಗೌರವಾಭಿನಂದನೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಏನೇನಿದೆ?

ಮಂಗಳೂರಿನ ಪ್ರತಿಷ್ಠಿತ ಹುಲಿತಂಡಗಳಲ್ಲಿ ಒಂದಾದ ಪೊಳಲಿ ಟೈಗರ್ಸ್ ತಂಡದಿಂದ ಹುಲಿ ವೇಷ, ಪ್ರಣವಂ ಚೆಂಡೆ ತಂಡದಿಂದ ಚೆಂಡೆ ವಾದನ,ಡ್ಯಾನ್ಸ್ ಬೀಟ್ ಸುಳ್ಯ ತಂಡದ 75 ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿ,ಕರಾವಳಿಯ ಪ್ರತಿಷ್ಠಿತ ಯಕ್ಷಗಾನ ಕಲಾವಿದ ರಿಂದ ‘ಕಾರ್ನಿಕದ ಶಿವಮಂತ್ರ’ ಯಕ್ಷಗಾನ ಪ್ರದರ್ಶನ, ಪ್ರಸಿದ್ಧ ‘ಜೋಡು ಜೀಟಿಗೆ’ ಸಿನಿ ಮಾದರಿಯ ತುಳು ನಾಟಕ, ಕರಾವಳಿಯ ಪ್ರಸಿದ್ಧ ಡಿಜೆ ರತನ್ ಅವರಿಂದ ತುಳು ಡಿಜೆ ನೈಟ್ಸ್ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ವಿಶೇಷವಾಗಿ ಈ ಭಾರಿಯ ಅಷ್ಟೆಮಿದ ಐಸಿರದಲ್ಲಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಇರುವ ಅಡೆತಡೆಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ ಮೋಹನ್ ಆಳ್ವ, ತುಳು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮತ್ತು ಕದ್ರಿ ನವನೀತ್ ಶೆಟ್ಟಿ ನಡೆಸಿಕೊಡಲಿದ್ದಾರೆ.

ಆಟೋಟ ಸ್ಪರ್ಧೆ ಏನೇನು?

ಮುದ್ದು ಕೃಷ್ಣೆ, ಅಷ್ಟೆಮಿದ ಏಸ, ಪೆಲತ್ತರಿ ಪೆಜ್ಜುನ, ಗೇನೊಗೊಂಜಿ ಸವಾಲ್, ಕಪ್ಪೆ ಬಲಿಪು, ಕರ ದರ್ಪುನ, ಉದ್ದ ಕಂಬ, ಡೊಂಕ, ಗೋಣಿ ಚೀಲಡ್ ಪಾರುನಿ, ಕಂಬುಲದ ಓಟ, ತಾರಯಿದ ಕಟ್ಟ, ಜಾರು ಕಂಬ, ಬಜಿಲ್ ತಿನ್ಪುನಿ, ಹಗ್ಗ ಜಗ್ಗಾಟ ಹೀಗೆ 30ಕ್ಕೂ ಹೆಚ್ಚು ಬಗೆಯ ಆಟೋಟ ಸ್ಪರ್ಧೆಗಳು ಮಕ್ಕಳು, ಮಹಿಳೆಯರು ಮತ್ತು ಪುರುಷರ ವಿಭಾಗದಲ್ಲಿ ನಡೆಯಲಿದೆ.

ಇನ್ನು ವಿವಿಧ ಆಟೋಟ ಸ್ಪರ್ಧೆಗಳ ಉದ್ಘಾಟನೆಯನ್ನು ಅಕ್ಷತಾ ಪೂಜಾರಿ ಮಾಳ (ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ವೈಟ್ ಲಿಪ್ಟರ್), ಸುಖೇಶ್ ಹೆಗ್ಡೆ (ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಕಬ್ಬಡ್ಡಿ ಪಟು), ರೋಹಿತ್ ಮಾರ್ಲ (ರಾಷ್ಟ್ರೀಯ ಕಬ್ಬಡ್ಡಿ ಆಟಗಾರ, ಬ್ಯಾಂಕ್ ಆಪ್ ಬರೋಡ), SI ಅಭಿಷೇಕ್ ಶೆಟ್ಟಿ (ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌) ಇವರುಗಳು ಚಾಲನೆ ನೀಡಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಇದನ್ನೂ ಓದಿ:NTRNeel Movie: ಶೀಘ್ರದಲ್ಲೇ ವಿದೇಶಕ್ಕೆ ಹಾರಲಿದ್ದಾರೆ ಪ್ರಶಾಂತ್‌ ನೀಲ್‌; ಮತ್ತಷ್ಟು ಹಿರಿದಾಗುತ್ತಿದೆ ಜೂ. ಎನ್‌ಟಿಆರ್‌ ಚಿತ್ರ

ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ವಿಧಾನಸಭಾ ಸ್ಪೀಕರ್ ಯುಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಚಲನಚಿತ್ರ ನಟರಾದ ವಿಜಯ ರಾಘವೇಂದ್ರ, ಸಂಗೀತ ನಿರ್ದೇಶಕ ಗುರುಕಿರಣ್, ನಟ ಶಿವಧ್ವಜ್, ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಸೇರಿದಂತೆ ಕರಾವಳಿ ಭಾಗದ ಸಂಸದರು, ಶಾಸಕರುಗಳು, ಸೆಲೆಬ್ರಿಟಿಗಳು ಸೇರಿದಂತೆ ಇತರ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಅಸ್ಟೆಮಿದ ಐಸಿರ ಕಾರ್ಯಕ್ರಮ ಬೆಳಗ್ಗೆ 8ರಿಂದ ರಾತ್ರಿ 11 ಗಂಟೆ ತನಕ ನಡೆಯಲಿದ್ದು, ಸುಮಾರು 30 ಸಾವಿರ ಜನರು ಸೇರುವ ಸಾಧ್ಯತೆ ಇದೆ ಎಂದು ತುಳುನಾಡ ಜವನೆರ್ (ರಿ) ಬೆಂಗಳೂರು ಅಧ್ಯಕ್ಷ ಹರಿಪ್ರಸಾದ್ ಬೇಂಗದಡಿ ತಿಳಿಸಿದ್ದಾರೆ.

ಕರಾವಳಿ ಭಾಗದ ಜನರನ್ನು ಒಂದೇ ಸೂರಿನಡಿ ಸೇರಿಸಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಪ್ರಚುರಪಡಿಸುವ ಸಲುವಾಗಿ ಸೆಪ್ಟೆಂಬರ್ 7ರಂದು ಅದ್ಧೂರಿಯಾಗಿ ಅಸ್ಟೆಮಿದ ಐಸಿರ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.