ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊಸ ಆಶಯದೊಂದಿಗೆ ಕತಾರ್‌ ‘ಕನ್ನಡ ಪಾಠಶಾಲೆ’ ಪುನರಾರಂಭ

ವಿದೇಶದಲ್ಲಿ ನೆಲೆಸಿರುವ ಕನ್ನಡ ಭಾಷಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ ವತಿಯಿಂದ ‘ಕನ್ನಡ ಪಾಠಶಾಲೆ’ಯನ್ನು ಹೊಸ ಆಶಯದೊಂದಿಗೆ ಪುನರಾರಂಭಿಸಲಾಗಿದೆ. ಇತ್ತೀಚೆಗೆ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಯಿತು.

ಕತಾರ್‌ ‘ಕನ್ನಡ ಪಾಠಶಾಲೆ’ ಪುನರಾರಂಭ

ಸಂಗ್ರಹ ಚಿತ್ರ -

ದೋಹಾ: ಕರ್ನಾಟಕ ಸಂಘ ಕತಾರ್ (Qatar Karnataka Sangha) ವತಿಯಿಂದ ಹೊಸ ಆಶಯದೊಂದಿಗೆ ಕತಾರ್‌ ‘ಕನ್ನಡ ಪಾಠಶಾಲೆ’ (Kannada Patha shale) ಪುನರಾರಂಭ ಮಾಡಲಾಗಿದೆ. ಇತ್ತೀಚೆಗೆ ಸಂಘದ ವತಿಯಿಂದ ಆಯೋಜಿಸಲಾದ ಶಿಕ್ಷಕರ ದಿನಾಚರಣೆಯ (teachers day) ಸಂದರ್ಭದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಯಿತು. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಪರಿಚಯವನ್ನು ಪರಿಚಯಿಸುವ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ‘ಕನ್ನಡ ಪಾಠಶಾಲೆ’ಯನ್ನು ಪುನರಾರಂಭಿಸಲಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಪಾಠಶಾಲೆಯ ಶಿಕ್ಷಕರು ಹಾಗೂ ಪೋಷಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ನಡೆಸಿಕೊಟ್ಟರು. ಮಕ್ಕಳ ವಯಸ್ಸು ಮತ್ತು ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಬೋಧಿಸುವ ವಿಧಾನಗಳು, ಪಠ್ಯಕ್ರಮವನ್ನು ವ್ಯವಸ್ಥಿತವಾಗಿ ಅಳವಡಿಸಿಕೊಳ್ಳುವ ಕ್ರಮಗಳು ಹಾಗೂ ಮಕ್ಕಳಲ್ಲಿ ಕನ್ನಡ ಕಲಿಕೆಯ ಆಸಕ್ತಿ ಹೆಚ್ಚಿಸುವ ಬೋಧನಾ ತಂತ್ರಗಳ ಕುರಿತು ಅವರು ಮಾರ್ಗದರ್ಶನ ನೀಡಿದರು.

ಕರ್ನಾಟಕ ಸಂಘ ಕತಾರ್‌ನಿಂದ ಉಪ ರಾಯಭಾರ ಮುಖ್ಯಸ್ಥ ಸಂದೀಪ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ಕನ್ನಡ ಪಾಠಶಾಲೆಯನ್ನು ಪುನರಾರಂಭಿಸುವ ಈ ಮಹತ್ವದ ಕಾರ್ಯವನ್ನು ಸಾಕಾರಗೊಳಿಸಲು ಕರ್ನಾಟಕ ಸಂಘ ಕತಾರ್‌ನ ನಿರ್ವಹಣಾ ಸಮಿತಿಯ ಸದಸ್ಯರು ವಿಶೇಷ ಆಸಕ್ತಿ, ಸಮಯ ಮತ್ತು ಶ್ರಮವನ್ನು ವಹಿಸಿ, ನಿರಂತರವಾಗಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಮೇಲಿನ ಅವರ ಕಾಳಜಿ ಹಾಗೂ ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಅವರ ಬದ್ಧತೆಗೆ ಈ ಸಂದರ್ಭದಲ್ಲಿ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

qatarq1

ಕನ್ನಡ ಪಾಠಶಾಲೆಯ ನಿಯಮಿತ ತರಗತಿಗಳಿಗೆ ಅಧಿಕೃತವಾಗಿ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಶಶಿಧರ್ ಹೆಚ್. ಬಿ. ಅವರು ಸ್ವಾಗತ ಭಾಷಣ ಮಾಡಿದರು. ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ, ಮಾಜಿ ಅಧ್ಯಕ್ಷ ಎಚ್. ಕೆ. ಮಧು, ಉಪಾಧ್ಯಕ್ಷ ಅನಿಲ್ ಭಾಸಗಿ, ನಿರ್ವಹಣಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

qatarq2

ಕನ್ನಡ ಶಾಲೆಯ ಬಗ್ಗೆ ಮಕ್ಕಳಲ್ಲಿ ಉತ್ಸಾಹ ಮೂಡಿಸುವುದರ ಜೊತೆಗೆ ಎಲ್ಲ ಮಕ್ಕಳು ಸಮಾನರು ಎಂಬ ಭಾವನೆಯನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ ವತಿಯಿಂದ ಕನ್ನಡ ಪಾಠಶಾಲೆಯ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಟಿ-ಶರ್ಟ್‌ಗಳು ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

ವಿವಾಹವಾಗಿ 17 ದಿನದಲ್ಲೇ ಅಮೆರಿಕದಲ್ಲಿ ನಿಗೂಢವಾಗಿ ಮೃತಪಟ್ಟ ಭಾರತೀಯ ವ್ಯಕ್ತಿ: ಪತ್ನಿ ನಾಪತ್ತೆ, ಹೆಚ್ಚಿದ ಅನುಮಾನ

ಕನ್ನಡ ಪಾಠಶಾಲೆಯ ತರಗತಿಗಳು ಪ್ರತೀ ಶುಕ್ರವಾರ ಬೆಳಗ್ಗೆ 9.30ಕ್ಕೆ ನಡೆಯಲಿದ್ದು ಮಕ್ಕಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಮೂರು ಹಂತಗಳಲ್ಲಿ ತರಗತಿಗಳನ್ನು ಆಯೋಜಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.