ತೀರ್ಥಹಳ್ಳಿ ಮಹಿಷಿಯ ತುಂಗಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆ!
Tunga River Tragedy: ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಶಿವಮೊಗ್ಗ ನಗರಕ್ಕೆ ಬಂದಿದ್ದ ಯುವಕರು, ಪ್ರವಾಸಿ ಸ್ಥಳ ಹುಡುಕಿಕೊಂಡು 2 ಟಿಟಿ ವಾಹನಗಳಲ್ಲಿ ಮಹಿಷಿಯ ಅಶ್ವತ್ಥನಾರಾಯಣ ದೇವಸ್ಥಾನದ ಬಳಿ ಬಂದಿದ್ದರು. ಸಂಜೆ ವೇಳೆ ನದಿಯ ಬಳಿ ಆಟವಾಡುತ್ತಿದ್ದಾಗ ಮೊದಲು ಒಬ್ಬಾತ ನೀರಿಗೆ ಇಳಿದಿದ್ದಾನೆ. ಆತನನ್ನು ರಕ್ಷಿಸಲು ಹೋದ ಉಳಿದ ಮೂವರು ಕೂಡ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ.
-
ತೀರ್ಥಹಳ್ಳಿ: ತುಂಗಾ ನದಿಯಲ್ಲಿ (Tunga River) ಈಜಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ದುರ್ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ (Thirthahalli) ತಾಲೂಕಿನ ಹೆದ್ದೂರು ಸಮೀಪದ ಮಹಿಷಿ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಬೆಂಗಳೂರಿನ ಕತ್ರಿಗುಪ್ಪೆ ಮೂಲದ ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ಎಂದು ಗುರುತಿಸಲಾಗಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಶಿವಮೊಗ್ಗ ನಗರಕ್ಕೆ ಬಂದಿದ್ದ ಇವರು, ಬಳಿಕ ಗೂಗಲ್‌ನಲ್ಲಿ ಪ್ರವಾಸಿ ಸ್ಥಳ ಹುಡುಕಿಕೊಂಡು 2 ಟಿಟಿ ವಾಹನಗಳಲ್ಲಿ ಮಹಿಷಿಯ ಅಶ್ವತ್ಥನಾರಾಯಣ ದೇವಸ್ಥಾನದ ಬಳಿ ಬಂದಿದ್ದರು ಎನ್ನಲಾಗಿದೆ. ಸಂಜೆ ವೇಳೆ ದೇವಸ್ಥಾನದ ಹಿಂಭಾಗದ ನದಿಯ ಬಳಿ ಆಟವಾಡುತ್ತಿದ್ದಾಗ ಮೊದಲು ಒಬ್ಬಾತ ನೀರಿಗೆ ಇಳಿದಿದ್ದಾನೆ. ಆತ ನೀರಿನಲ್ಲಿ ಮುಳುಗುವುದನ್ನು ಕಂಡು ಹಿಡಿದು ಮೇಲೆತ್ತಲು ಹೋದ ಉಳಿದ ಮೂವರು ಕೂಡ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ.
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆಯಾದ ನಾಲ್ವರಿಗಾಗಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.