ನ.20ರಿಂದ ಮೂರು ದಿನ ಬೆಂಗಳೂರಿನಲ್ಲಿ ಚರಕದ ಕೈಮಗ್ಗ–ಕರಕುಶಲ ಉತ್ಪನ್ನಗಳ ಪ್ರದರ್ಶನ
Bengaluru News: ಬೆಂಗಳೂರಿನ ಚಿತ್ರಕಲಾ ಪರಿಷತ್‌ನ 7ನೇ ಗ್ಯಾಲರಿಯಲ್ಲಿ ನವೆಂಬರ್ 20ರಿಂದ 22ರವರೆಗೆ ಅಪ್ಪಟ ನೈಸರ್ಗಿಕ ಹತ್ತಿಯಿಂದ ತಯಾರಿಸಿದ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಸಾಗರ ತಾಲೂಕಿನ ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದಿಂದ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳ ಮಾರಾಟ ಮೇಳ ಆಯೋಜಿಸಲಾಗಿದೆ.
ಸಂಗ್ರಹ ಚಿತ್ರ. -
ಸಾಗರ, ನ.17: ತಾಲೂಕಿನ ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದಿಂದ ಅಪ್ಪಟ ನೈಸರ್ಗಿಕ ಹತ್ತಿಯಿಂದ ತಯಾರಿಸಿದ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನವೆಂಬರ್ 20ರಿಂದ 22ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನ 7ನೇ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.
ಈ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಪ್ರದರ್ಶನ ನಡೆಯಲಿದೆ. ನವೆಂಬರ್ 20ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಚರಕದ ನಿರ್ದೇಶಕಿ ಮಧುರಾ ಎಸ್.ವಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರದರ್ಶನದಲ್ಲಿ ಕರಕುಶಲ ಹಾಗೂ ನೈಸರ್ಗಿಕ ಸಹಜ ಪದಾರ್ಥಗಳನ್ನು ಉತ್ಪಾದಿಸುವ ನೇಚರ್ ಅಲೆ, ವಾವಾ ಇಂಡಿಯಾ, ಟೆರ್ರಬಾನ್, ಟಿಂಬಕ್ಟು ಕಲೆಕ್ಟಿವ್, ಸಹನಾ ರೀಡ್, ಜಿಯೋಸ್ಮಿನ್ ಹಾಗೂ ಮರಳಿ ಮಣ್ಣಿಗೆ ಸಂಸ್ಥೆಗಳು ಭಾಗವಹಿಸಲಿವೆ. ಹೆಚ್ಚಿನ ಮಾಹಿತಿಗೆ: ಮೊ. 63638 85215/ 86600 93079 ಸಂಪರ್ಕಿಸಬಹುದು.