Gandhi Sante: ಹೆಗ್ಗೋಡಿನಲ್ಲಿ ಸೆ. 26, 27ರಂದು ಗಾಂಧಿ ಸಂತೆ; ರಂಗಕರ್ಮಿ ಪ್ರಸನ್ನ ವಿಶಿಷ್ಟ ಕಲ್ಪನೆಯಲ್ಲಿ ಕೈಮಗ್ಗ ಪ್ರವಾಸೋದ್ಯಮ
ಖ್ಯಾತ ರಂಗಕರ್ಮಿ ಪ್ರಸನ್ನ ಅವರ ಸಾರಥ್ಯದ 'ಚರಕʼ ನೇಕಾರರ ಸಂಘದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ ಸೆ.26, 27ರಂದು ಗಾಂಧಿ ಸಂತೆ ಆಯೋಜಿಸಲಾಗಿದೆ. ಗ್ರಾಹಕರು, ವ್ಯಾಪಾರಿಗಳು ಹೆಗ್ಗೋಡು ಗ್ರಾಮಕ್ಕೇ ಹೋಗಿ ಪರಿಶುದ್ಧ ಕೈಮಗ್ಗದ ಉತ್ಪನ್ನ ಪರೀಕ್ಷಿಸಿ ಖರೀದಿಸುವ ವೇದಿಕೆಯನ್ನು ಕಲ್ಪಿಸಲಾಗಿದೆ.
ಗಾಂಧಿ ಸಂತೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ರಂಗಕರ್ಮಿ ಪ್ರಸನ್ನ ಅವರು ಮಾಹಿತಿ ನೀಡಿದರು. -
ಹೆಗ್ಗೋಡು (ಶಿವಮೊಗ್ಗ): ನಾಲ್ಕು ದಶಕಗಳ ಇತಿಹಾಸ ಹೊಂದಿರುವ, ಖ್ಯಾತ ರಂಗಕರ್ಮಿ ಪ್ರಸನ್ನ (Prasanna Heggodu) ಅವರ ಸಾರಥ್ಯದ ಹೆಗ್ಗೋಡಿನ 'ಚರಕʼ ನೇಕಾರರ ಸಂಘ ಸೆ.26, 27ರಂದು ಗಾಂಧಿ ಸಂತೆ (Gandhi sante) ಆಯೋಜಿಸಿದೆ. ಮಲೆನಾಡಿನ ಈ ಪುಟ್ಟ ಗ್ರಾಮವನ್ನೇ ಬ್ಯುಸಿನೆಸ್ ಟು ಬ್ಯುಸಿನೆಸ್ (b2b) ಮಾದರಿಯ ಮಾರುಕಟ್ಟೆ ಕೇಂದ್ರವನ್ನಾಗಿ ರೂಪಿಸಲು ಮುಂದಾಗಿದೆ. ಅಂದರೆ ದೇಶ - ವಿದೇಶಗಳ ವ್ಯಾಪಾರಿಗಳು ಈ ಗ್ರಾಮಕ್ಕೇ ಬಂದು ಪರಿಶುದ್ಧ ಕೈಮಗ್ಗದ ಉತ್ಪನ್ನ ಪರೀಕ್ಷಿಸಿ ಖರೀದಿಸುವ ವೇದಿಕೆ ಕಲ್ಪಿಸಿದೆ. ಈ ಮೂಲಕ ಕೈಮಗ್ಗ ಪ್ರವಾಸೋದ್ಯಮಕ್ಕೆ 'ಚರಕʼ ನೇಕಾರರ ಸಂಘ ಹಾದಿ ಮಾಡಿಕೊಡುತ್ತಿದೆ.
ಹೆಗ್ಗೋಡಿನ 'ಚರಕʼ ನೇಕಾರರ ಸಂಘ ದೇಶದಲ್ಲಿಯೇ ಅತ್ಯಂತ ದೊಡ್ಡ ನೈಸರ್ಗಿಕ ಬಣ್ಣದ ಹತ್ತಿ ನೇಯ್ಗೆ ಉತ್ಪನ್ನಗಳ ತಯಾರಿಕೆ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಈ ಸಂಸ್ಥೆಯು ಈ ಬಾರಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ದೇಶದ ಅತ್ಯುತ್ತಮ ಕೈಮಗ್ಗ ಬ್ರ್ಯಾಂಡ್ ಪ್ರಶಸ್ತಿಗೂ ಪಾತ್ರವಾಗಿದೆ. ಗಾಂಧಿ ಸಂತೆಯಲ್ಲಿ b2b ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಸುಖಕರ ವಸತಿ ಸೌಕರ್ಯದ ಜತೆಗೆ, ಮಲೆನಾಡಿನ ನಿಸರ್ಗ ರಮಣೀಯ ವಾತಾವರಣದಲ್ಲಿ ವಿಶಿಷ್ಟ ರಚಿಕರ ಆಹಾರ ಸವಿಯುವ ಅವಕಾಶವನ್ನೂ ಇಲ್ಲಿ ಕಲ್ಪಿಸಲಾಗುತ್ತಿದೆ.
ಬೆರಳೆಣಿಕೆಯಷ್ಟು ಮಹಿಳೆಯರು ಕೇವಲ ಎರಡು ಚರಕಗಳನ್ನು ಇಟ್ಟುಕೊಂಡು ಆರಂಭಿಸಿದ ಈ ಸಂಸ್ಥೆಯಲ್ಲಿ ಈಗ ನೂರಾರು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ನೂಲಿಗೆ ಬಣ್ಣಹಾಕುವುದು, ಬ್ಲಾಕ್ ಪ್ರಿಂಟಿಂಗ್, ಸ್ಕ್ರೀನ್ ಪ್ರಿಂಟಿಂಗ್, ಹೊಲಿಗೆ, ಕಸೂತಿ, ಮಗ್ಗ ತಯಾರಿಕೆ, ತರಬೇತಿ, ವಿನ್ಯಾಸ ಇತ್ಯಾದಿ ತಂತ್ರಜ್ಞಾನ ಚರಕದಲ್ಲಿದೆ. ಪುರುಷರ, ಮಹಿಳೆಯರ ಉಡುಪುಗಳು, ಕೌದಿ ಮೊದಲಾದ 160 ಉತ್ಪನ್ನಗಳನ್ನು ಚರಕ ತಯಾರಿಸುತ್ತಿದೆ. ದೇಸಿ ಬ್ರ್ಯಾಂಡ್‌ನ ವಸ್ತ್ರ ಉತ್ಪನ್ನ ಮೂಲಕ ವಾರ್ಷಿಕ ಸುಮಾರು 10 ಕೋಟಿ ರೂ. ವಹಿವಾಟು ನಡೆಯುತ್ತಿದೆ.

"ನಮ್ಮ ನೈಸರ್ಗಿಕ ವಸ್ತ್ರ ಉತ್ಪನ್ನಗಳನ್ನು ಖರೀದಿದಾರರಿಗೆ ಪ್ರತ್ಯಕ್ಷವಾಗಿ ತೋರಿಸುವುದೇ ಗಾಂಧಿ ಸಂತೆಯ ಉದ್ದೇಶ. ಖರೀದಿದಾರರಿಗೆ ನಾವು ಆತಿಥ್ಯ ನೀಡುತ್ತೇವೆ. ಈ ಸಂದರ ಪ್ರಕೃತಿಯ ನಡುವೆ ಅವರನ್ನು ನಿಲ್ಲಿಸುತ್ತೇವೆ. ವಿಶಿಷ್ಟ ಊಟೋಪಚಾರದ ಜತೆಗೆ ಸ್ಥಳೀಯ ಸಂಸ್ಕೃತಿ ಪರಿಚಯಿಸುತ್ತೇವೆ. ಚರಕ ಸಂಸ್ಥೆಯ ಉತ್ಪಾದನೆ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ತೋರಿಸುತ್ತೇವೆ. ನಮ್ಮ ಉತ್ಪನ್ನಗಳು ಪರಿಶುದ್ಧ ಮತ್ತು ಗುಣಮಟ್ಟದ್ದು ಎನ್ನುವುದು ಖಚಿತವಾದ ಬಳಿಕವೇ ಅವರು ಬಟ್ಟೆ ಖರೀದಿಸಬಹುದುʼʼ ಎಂದು ಗಾಂಧಿ ಸಂತೆಯ ಪರಿಕಲ್ಪನೆಯನ್ನು ಪ್ರಸನ್ನ ಅವರು ವಿವರಿಸಿದರು.
"ನಗರ ಜನರ ಕೈತೋಟಗಳಿಗೆ ಬೇಕಾಗುವ ಗೊಬ್ಬರವನ್ನು ದೇಸಿ ಮಳಿಗೆ ಮೂಲಕ ನಾವು ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸ್ಥಳೀಯರು ಉತ್ಪಾದಿಸುವ ಎಲ್ಲ ಬಗೆಯ ನೈಸರ್ಗಿಕ ಉತ್ಪಾದನೆಗಳನ್ನೂ ಮಾರುಕಟ್ಟೆಗಿಳಿಸುವ ಯೋಜನೆ ಇದೆʼʼ ಎಂದು ಪ್ರಸನ್ನ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚರಕ ಸಂಸ್ಥೆಯ ಸಿಇಒ ಟೆರೆನ್ಸ್ ಪೀಟರ್, ಚರಕದ ಅಧ್ಯಕ್ಷೆ ಮಹಾಲಕ್ಷ್ಮಿ, ಪದ್ಮಶ್ರೀ ಮತ್ತಿತರರು ಹಾಜರಿದ್ದರು.