ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಟ್ಟಿಯಾಗುತ್ತಿದೆ ಹೋರಾಟದ ಧ್ವನಿ: ಹೊಸನಗರ ವಿದ್ಯುತ್ ಕತ್ತಲೆ ಕಳೆಯುವುದು ಯಾವಾಗ?

ನಿತ್ಯ ಕತ್ತಲಾಗುವ ತಾಲೂಕಿನ ವಿದ್ಯುತ್ ಗೋಳು ತಪ್ಪಿಸುವ ಹಿನ್ನೆಲೆಯಲ್ಲಿ ಹಲವು ವರ್ಷದ ಬೇಡಿಕೆ ಮತ್ತು ಈ ಹಿಂದೆ ಇಲ್ಲಿನ ಕೆಲವರ ಆಗ್ರಹದ ಪ್ರತಿಫಲವಾಗಿ 110 ಕೆವಿ ಟವರ್ ವಿದ್ಯುತ್ ಮಾರ್ಗದ ಯೋಜನೆಯ ಅಂದಾಜು ಪಟ್ಟಿ ಈ ಹಿಂದೆಯೇ ಸಿದ್ಧಪಡಿಸಲಾಗಿತ್ತು. ಆದರೆ ಉದ್ದೇಶಿತ 110 ಕೆವಿ ವಿದ್ಯುತ್ ಮಾರ್ಗದ ಪ್ರಸ್ತಾಪವನ್ನು ಆಗ ವೃತ್ತಮಟ್ಟದ ಮತ್ತು ವಲಯ ಮಟ್ಟದ ಸಂಯೋಜಕ ಸಮಿತಿ ಯ ಸಭೆಯಲ್ಲಿ ಕೈ ಬಿಟ್ಟೂ ಆಗಿತ್ತು

ಹೊಸನಗರ ವಿದ್ಯುತ್ ಕತ್ತಲೆ ಕಳೆಯುವುದು ಯಾವಾಗ?ಗೊಒ

-

Profile
Ashok Nayak Sep 15, 2026 12:04 AM

ರಮೇಶ್ ಹೆಗಡೆ ಗುಂಡೂಮನೆ

ಕಳೆದ ಏಳು ದಶಕಗಳಿಂದಲೂ ವಿದ್ಯುತ್ ಸಮಸ್ಯೆಯಿಂದ ನಲುಗಿ ಹೋಗಿರುವ ಸಾಗರ ಕ್ಷೇತ್ರಕ್ಕೂ ಸೇರಿದ ಹೊಸನಗರ ತಾಲೂಕಿನ ಜನತೆ ಕಡೆಗೂ ಈಗ ಇದೇ ಮೊದಲ ಬಾರಿ ವಿದ್ಯುತ್ ಅವ್ಯವಸ್ಥೆಯ ವಿರುದ್ದ ದೊಡ್ಡದಾಗಿ ಧ್ವನಿ ಎತ್ತುತ್ತಿದ್ದಾರೆ.

ಹೌದು ಶರಾವತಿ, ವರಾಹಿ, ಸಾವೇಹಕ್ಲು, ಚಕ್ರಾ ಹೀಗೆ ರಾಜ್ಯದ ಪ್ರಮುಖ ವಿದ್ಯುತ್ ಯೋಜನೆಗೆ ಮನೆ ಮಠ ಕಳೆದುಕೊಂಡು ಕೊಡುಗೆ ನೀಡಿದ ಸಂತ್ರಸ್ತ ಮಲೆನಾಡ ನಡುಮನೆ ಖ್ಯಾತಿಯ ಹೊಸನಗರ ತಾಲೂಕಿಗೆ ಅಲ್ಲಿಂದ ಇಲ್ಲಿಯವರೆಗೂ ವಿದ್ಯುತ್ ಬವಣೆ ತಪ್ಪಿದ್ದೇ ಇಲ್ಲ ಇದು ಹೀಗೆ ಮುಂದೂ ಇರಲಿದೆ ಎನ್ನುವ ರೀತಿಯಲ್ಲಿ ಆಳಿದ ಮತ್ತು ಆಳುತ್ತಿರುವ ಸರಕಾರಗಳು ಮತ್ತು ಜನಪ್ರತಿನಿಧಿಗಳು ಭಾವಿಸಿರುವ ಪರಿಣಾಮ ಹಾಗೂ ಕ್ಷೇತ್ರವೂ ಇಲ್ಲದೆ ಹೋರಾಟದ ಧ್ವನಿಯೂ ಮಾಯವಾಗಿರುವಾಗ ಕತ್ತಲೆ ನಗರ ಎಂದು ಹೆಸರಿಸಿಕೊಳ್ಳುವಷ್ಟು ವಿದ್ಯುತ್ ಸಮಸ್ಯೆಯ ತೀವ್ರತೆ ಈ ಭಾಗಕ್ಕಿದೆ.

ಇದನ್ನೂ ಓದಿ: Shimoga News: ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್‌ ಮಿನುಗುತಾರೆ

ನಿತ್ಯ ಕತ್ತಲಾಗುವ ತಾಲೂಕಿನ ವಿದ್ಯುತ್ ಗೋಳು ತಪ್ಪಿಸುವ ಹಿನ್ನೆಲೆಯಲ್ಲಿ ಹಲವು ವರ್ಷದ ಬೇಡಿಕೆ ಮತ್ತು ಈ ಹಿಂದೆ ಇಲ್ಲಿನ ಕೆಲವರ ಆಗ್ರಹದ ಪ್ರತಿಫಲವಾಗಿ 110 ಕೆವಿ ಟವರ್ ವಿದ್ಯುತ್ ಮಾರ್ಗದ ಯೋಜನೆಯ ಅಂದಾಜು ಪಟ್ಟಿ ಈ ಹಿಂದೆಯೇ ಸಿದ್ಧಪಡಿಸಲಾಗಿತ್ತು. ಆದರೆ ಉದ್ದೇಶಿತ 110 ಕೆವಿ ವಿದ್ಯುತ್ ಮಾರ್ಗದ ಪ್ರಸ್ತಾಪವನ್ನು ಆಗ ವೃತ್ತಮಟ್ಟದ ಮತ್ತು ವಲಯ ಮಟ್ಟದ ಸಂಯೋಜಕ ಸಮಿತಿಯ ಸಭೆಯಲ್ಲಿ ಕೈ ಬಿಟ್ಟೂ ಆಗಿತ್ತು. ಇದಕ್ಕೆ ಆಗ ಶಿವಮೊಗ್ಗ ಅಧೀಕ್ಷಕ ಎಂಜಿನಿಯರ್ ಪಾಲನೆ ಮತ್ತು ನಿರ್ವಹಣೆ ವೃತ್ತ ಮೆಸ್ಕಾಂ ಇವರ ಪತ್ರ ಕೊಟ್ಟ ಕಾರಣ ಏನೆಂದರೆ ಹೊಸ ವಿದ್ಯುತ್ ಕೇಂದ್ರಕ್ಕೆ 42 ಕಿ ಮಿ 110 ಕೆ.ವಿ. ಮಾರ್ಗವನ್ನು ಎಳೆಯಲು ದಟ್ಟ ಅರಣ್ಯ ಪ್ರದೇಶಗಳು ಬರುವುದರಿಂದ ಅರಣ್ಯ ಪ್ರದೇಶದಲ್ಲಿ ಮಾರ್ಗ ರಚನೆ ಕಷ್ಟವೂ ಆಗಿರುವುದರಿಂದ ಪ್ರಸ್ತಾಪ ಕೈಬಿಡುವುದು ಅನಿವಾರ್ಯ ಎಂದಿದ್ದರು. ಆದರೆ ನಂತರವೂ ಅನೇಕ ಆಯಾಮದಲ್ಲಿ 110 ಕೆವಿ ಮಾರ್ಗದ ಕುರಿತು ಯೋಚನೆ ಮಾಡಲಾಗಿದ್ದು, ಸಾಧ್ಯತೆ ಬಗ್ಗೆ ಆಶಾ ಭಾವನೆ ಮೂಡಿತ್ತು.

ಆದರೆ ಇಂದಿಗೂ ಇಚ್ಚಾಶಕ್ತಿಯ ಕೊರತೆಯ ಕಾರಣ ನೆನಗುದಿಯಲ್ಲಿಯೇ ಇದೆ. ಈ ಎಲ್ಲ ಸಮಸ್ಯೆ ಯನ್ನು ಬಗೆಹರಿಸುವ ಪ್ರಯತ್ನಗಳು ಕಂಡು ಬಾರದಿರುವ ಹಿನ್ನೆಲೆಯಲ್ಲಿ ಇಲ್ಲಿಯ ವರ್ತಕ ಸಂಘದ ನೇತೃತ್ವದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವ ಕುರಿತು ಹೊಸನಗರದಲ್ಲಿ ಮೆಸ್ಕಾಂ ಜಿಲ್ಲಾ ವರಿಷ್ಟ, ಎಸ್‌ಇ ಜಯದೇವಪ್ಪ ಅವರನ್ನು ಆಗ್ರಹಿಸಿರುವುದಲ್ಲದೆ ಮುಂದೆ ಇದೇ ರೀತಿಯ ಅಸಮರ್ಪಕ ವಿದ್ಯುತ್ ವ್ಯವಸ್ಥೆಯೇ ಇದ್ದರೆ ಸಾಮೂಹಿಕವಾಗಿ ವಿದ್ಯುತ್ ಬಿಲ್ ಪಾವತಿ ತಡೆ ಹಿಡಿದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನವನ್ನೂ ಸೆಳೆದಿದ್ದಾರೆ. ಮತ್ತು ಸಮಸ್ಯೆ ಬಗೆಹರಿಯ ದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟಕ್ಕೆ ಸಿದ್ದಗೊಳ್ಳುತ್ತಿದ್ದಾರೆ. ಪ್ರಸ್ತುತ ಆಸಕ್ತಿ ಗಮನಿಸಿದಾಗ ಹೊಸನಗರದಲ್ಲಿ ಸಮರ್ಪಕ ವಿದ್ಯುತ್ ಗಾಗಿ ಗಟ್ಟಿ ಧ್ವನಿ ಮೊಳಗುವ ದಿನ ದೂರವಿಲ್ಲ.

33 ಕೆವಿ ಮಾರ್ಗದ ಗೋಳು ಕೇಳುವವರು ಯಾರು?

1976-77ರ ಸುಮಾರಿಗೆ ಸಾಗರ ಉಪ ವಿತರಣಾ ಕೇಂದ್ರದಿಂದ ಹೊಸನಗರಕ್ಕೆ ಬಂದಿರುವ 33 ಕೆವಿ ಮಾರ್ಗ ಶರಾವತಿ ಹಿನ್ನೀರು ಪ್ರದೇಶ ಮತ್ತು ಆಕೇಶಿಯವೂ ಸೇರಿದಂತೆ ಅರಣ್ಯ ಭಾಗದಲ್ಲಿ ಸುಮಾರು 36.5 ಕಿ.ಮಿ. ದೂರ ಹಾದು ಬಂದಿದೆ. ಕೇವಲ 9 ಮೀಟರ್ ನಷ್ಟು ಮಾತ್ರ ಎತ್ತರವಿರುವ ಈ ಮಾರ್ಗ ಮಳೆಗಾಲ ಬಂದಾಕ್ಷಣ ಬಿದಿರು, ಮರದ ಕೊಂಬೆಗಳು ಬಿದ್ದು ಸಂಪರ್ಕ ಕಡಿದು ಹೋಗುತ್ತದೆ. ಹಿನ್ನೀರ ಪ್ರದೇಶ ಮತ್ತು ಅರಣ್ಯದಲ್ಲಿ ತುರ್ತು ಕಾಮಗಾರಿ ಸಾಧ್ಯವಾಗದಿರುವ ಕಾರಣ ಇಡೀ ತಾಲೂಕು ಮಳೆಗಾಲದ ಬಹುತೇಕ ದಿನ ಕತ್ತಲೆಯಲ್ಲಿ ಕಳೆಯುವಂತಾಗುತ್ತದೆ.

ಇದು ಒಂದು ವರ್ಷದ ಕತೆಯಲ್ಲ ಪ್ರತಿ ವರ್ಷವೂ ಇದೇ ವ್ಯಥೆ. ಇದನ್ನು ಪರಿಹರಿಸುವ ಪರ್ಯಾಯ ವ್ಯವಸ್ಥೆ ಎಂದರೆ ಸುಮಾರು 13 ಮೀಟರ್‌ಗೂ ಹೆಚ್ಚು ಎತ್ತರವಿರುವ ಕಬ್ಬಿಣದ ಟವರ್‌ನೊಳ ಗೊಂಡ 110 ಕೆವಿ ಮಾರ್ಗ. ಈಗಾಗಲೆ ತೀರ್ಥಹಳ್ಳಿ, ಸಾಗರಗಳಲ್ಲಿ ಈ ರೀತಿಯ ಮಾರ್ಗವಿದೆ ಅಲ್ಲದೆ ಅಲ್ಲಿ ಬೇರೆ ಬೇರೆ ಕಡೆ 110 ಕಿವಿ ಕೇಂದ್ರ ವಿಸ್ತರಿಸಿದೆ. ಆದರೆ ಹೊಸನಗರ ತಾಲೂಕಿಗೆ ಮಾತ್ರ ಅಂದಿನಿಂದಲೂ ಯಾವುದಾದರೂ ಸಬೂಬು ಹೇಳಿ ಯೋಜನೆಗಳು ತಪ್ಪಿಸಲಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ.