ಸಾಗರದಲ್ಲಿ ಘೋರ ಘಟನೆ; ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
Shivamogga News: ಶಿವಮೊಗ್ಗ ಜಿಲ್ಲೆಯ ಸಾಗರದ ಆಲಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಭಾನುವಾರ ಇಬ್ಬರು ಬಾಲಕರು ಕೆರೆಗೆ ಈಜಲು ತೆರಳಿದ್ದಾಗ, ಆಳ ಅರಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಶಿವಮೊಗ್ಗ: ಜಿಲ್ಲೆಯ ಸಾಗರದ ಆಲಳ್ಳಿ ಗ್ರಾಮದ ಹೊಸಕೆರೆಗೆ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಬಾಲಕರನ್ನು ಮುಳುಕೇರಿ ಗ್ರಾಮದ ಷಣ್ಮುಖ ಎಂಬುವವರ ಪುತ್ರ ಲೇಖನ್ (13) ಹಾಗೂ ಆಲಳ್ಳಿ ಗ್ರಾಮದ ಗಣೇಶ್ ಎಂಬುವವರ ಪುತ್ರ ಪುನೀತ್ (11) ಎಂದು ಗುರುತಿಸಲಾಗಿದೆ.
ಇಬ್ಬರೂ ಒಂದೇ ಕುಟುಂಬದ ಬಾಲಕರಾಗಿದ್ದಾರೆ. ಭಾನುವಾರ ಇಬ್ಬರೂ ಹೊಸಕೆರೆಗೆ ಈಜಲು ತೆರಳಿದ್ದು, ಆಳ ಅರಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತ ಬಾಲಕರು ಬೇಸಿಗೆ ರಜೆಗಾಗಿ ತಾತನ ಮನೆಗೆ ಆಗಮಿಸಿದ್ದರು. ಇಂದು ಮಧ್ಯಾಹ್ನ ಕೆರೆಗೆ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಬೇಸಿಗೆ ರಜೆಗೂ ಮುನ್ನಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೆರೆ, ನದಿಗೆ ಈಜಲು ತೆರಳದಂತೆ ಎಚ್ಚರಿಸಿದ್ದರು. ಆದರೂ ಈ ದುರಂತ ನಡೆದಿದ್ದನ್ನು ಕಂಡ ವಿದ್ಯಾರ್ಥಿಯ ಶಿಕ್ಷಕಿಯೂ ಆಸ್ಪತ್ರೆಗೆ ಆಗಮಿಸಿ ಕಣ್ಣೀರಿಟ್ಟಿದ್ದು ಕಂಡು ಬಂತು. ಜೊತೆಗೆ ಬೇಸಿಗೆ ರಜೆಯಲ್ಲಿ ಯಾವುದೇ ಪೋಷಕರು ಮಕ್ಕಳನ್ನು ಕೆರೆ, ನದಿ ಬಳಿಗೆ ಈಜಲು ಬಿಡದಂತೆ ಎಚ್ಚರ ವಹಿಸಲು ಕಂಬನಿ ಮಿಡಿಯುತ್ತಲೇ ಮನವಿ ಮಾಡಿದರು.
ದುರ್ಘಟನೆಯ ಬಳಿಕ ಬಾಲಕರ ಮೃತದೇಹಗಳನ್ನು ಹೊರತೆಗೆದು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಆವರಣಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.