Hanumantha Devara Karnika: 'ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ'; ಹನುಮಂತ ದೇವರ ಕಾರ್ಣಿಕದ ಅರ್ಥವೇನು?
Hanumantha Devara Karnika: ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ ಹನುಮಂತ ದೇವರನ್ನು ಮೈಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿದಿದ್ದಾರೆ. "ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ, ಎಚ್ಚರ" ಎಂಬುದು ಈ ಬಾರಿಯ ಕಾರ್ಣಿಕವಾಣಿಯಾಗಿದೆ.


ಶಿವಮೊಗ್ಗ: ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕೋತ್ಸವ (Hanumantha Devara Karnika) ನಡೆಯುತ್ತದೆ. ಅದೇ ರೀತಿ ಈ ಬಾರಿ ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿದಿದ್ದು, "ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ, ಎಚ್ಚರ" ಎಂಬ ಭವಿಷ್ಯವಾಣಿ ಹೇಳಿದ್ದಾರೆ.
"ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ, ಎಚ್ಚರ" ಎಂಬುದು ಈ ಬಾರಿಯ ಮೈದೊಳಲು ಗ್ರಾಮದ ಹನುಮಂತ ದೇವರ ಕಾರ್ಣಿಕ. ಹನುಮಂತ ದೇವರ ಕಾರ್ಣಿಕವನ್ನು ಆಧರಿಸಿ ಈ ಭಾಗದ ರೈತಾಪಿ ಜನರು ಇಡೀ ವರ್ಷದ ಮಳೆ, ಬೆಳೆ ಸೇರಿ ಕೃಷಿ ಚಟುವಟಿಕೆಗಳು, ರಾಜಕೀಯ ವಿದ್ಯಮಾನಗಳು, ಪ್ರಕೃತಿ ವೈಪರೀತ್ಯ ಸೇರಿದಂತೆ ರೈತಾಪಿ ಬದುಕಿನ ಭವಿಷ್ಯದ ಆಗುಹೋಗುಗಳನ್ನು ಲೆಕ್ಕಾಚಾರ ಹಾಕುತ್ತಾರೆ.
"ಕೊನೆಯಲ್ಲಿ ಎಚ್ಚರ ಎಂದಿರುವುದರಿಂದ ಈ ಬಾರಿ ರೈತಾಪಿಗಳಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ ಎನ್ನಬಹುದು. ದೇಶದೆಲ್ಲೆಡೆ ಅತಿವೃಷ್ಟಿಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಬಹುದು. ಶಿವನ ತುರುಬಿನಲ್ಲಿರುವ ಗಂಗೆಗೆ ಭೂ ಲೋಕದ ಗಿಳಿ ಹಾರುವುದೆಂದರೆ, ಈ ಬಾರಿ ಮುಂಗಾರಿಗಿಂತ ಹಿಂಗಾರು ಮಳೆ ತುಸು ಜೋರಾಗಿರಲಿದೆ. ರಾಜ್ಯ ರಾಜಕೀಯ ವಿದ್ಯಮಾನದಲ್ಲಿ ತಲ್ಲಣ ಉಂಟಾಗುವುದು ನಿಶ್ಚಿತ, ಕುರ್ಚಿ ಕಿತ್ತಾಟಗಳು ಜೋರಾಗಲಿವೆ" ಎಂದು ಜನರು ಪರಸ್ಪರ ವಿಶ್ಲೇಷಣೆ ಮಾಡಿಕೊಳ್ಳುತ್ತಿದ್ದಾರೆ.
ಹನುಮಂತನ ಕಾರ್ಣಿಕ ಕೇಳಲು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಾರೆ. ಈ ಗ್ರಾಮದಿಂದ ಮದುವೆ ಮಾಡಿಕೊಂಡು ಹೋದ ಹೆಣ್ಣುಮಕ್ಕಳೆಲ್ಲ ಬರುತ್ತಾರೆ. ಊರಿನ ದೇವಾಲಯದಿಂದ ಹೋದ ದೇವತೆಗಳು ಗಂಗೆ ಪೂಜೆ ನಡೆಸಿಕೊಂಡು ಸಮೀಪದ ಪಿಳ್ಳೆಮಟ್ಟಿ ಗ್ರಾಮಸ್ಥರೆಲ್ಲಾ ಸೇರಿ ದೇವರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಕಾರ್ಣಿಕ ಹೇಳುವವರು ಎತ್ತರದ ಕಂಬ ಏರಿ ಕಾರ್ಣಿಕ ನುಡಿಯುತ್ತಾರೆ.
ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ, ಭೂಲೋಕದ ಮುತ್ತು ಗಗನಕೇರೀತ್ರಲೇ: ಕಾರ್ಣಿಕ ನುಡಿದ ಕಮ್ಮಾರಗಟ್ಟೆ ಪೂಜಾರಿ

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಆಂಜನೇಯ ಸ್ವಾಮಿ ಹಾಗೂ ಕಮ್ಮಾರಗಟ್ಟೆ ಗಿರಿಯಮ್ಮನ ಪುಣ್ಯಕ್ಷೇತ್ರದ ಪೂಜಾರಿ ಗುಂಡ್ಯಪ್ಪ ಈ ಬಾರಿಯ ಕಾರ್ಣಿಕ (Kammaragatte Karnika) ನುಡಿದಿದ್ದಾರೆ. ಕಮ್ಮಾರಗಟ್ಟೆಯ ಹೊಳೆಯಾತ್ರೆಯಲ್ಲಿ ಗಣಮಗ ಸಂಪ್ರದಾಯದಂತೆ ಕಾರ್ಣಿಕ ನುಡಿಯಲಾಯಿತು. ವಿವಿಧ ಗ್ರಾಮಗಳ ಸುಮಾರು ಹತ್ತು ದೇವರುಗಳು ಹೊಳೆಯಾತ್ರೆಯಲ್ಲಿ ಭಾಗಿಯಾಗಿದ್ದವು.
"ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ, ಭೂಲೋಕದ ಮುತ್ತು ಗಗನಕೇರೀತ್ರಲೇ" ಎಂಬ ಕಾರ್ಣಿಕ ವಾಣಿಯನ್ನು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಬಹುದು, ಏನು ಬೇಕಾದರೂ ಆಗಬಹುದು ಎಂಬರ್ಥದಲ್ಲಿ ಭಕ್ತರು ವಿಶ್ಲೇಷಿಸುತ್ತಿದ್ದಾರೆ. ಜತೆಗೆ, ಬೆಳೆ ಹಾಗೂ ದಿನಸಿ ಬೆಲೆ ಹೆಚ್ಚಾಗಲಿದೆ ಎಂಬ ಸೂಚನೆ ಇದು ಎನ್ನಲಾಗಿದೆ. ‘ಭೂಲೋಕದ ಮುತ್ತು ಗಗನಕೇರೀತ್ರಲೇ’ ಎಂಬುದನ್ನು, ಏನೇ ಆದರೂ ದೇವರಿದ್ದಾನೆ ಭಯಪಡಬೇಡಿ ಎಂದು ಅಭಯ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ | Roopa Gururaj Column: ದಾನ ಮಾಡಿದ ಅಕ್ಕಿಯ ಕಾಳು ಬಂಗಾರವಾದಾಗ