ಕಾಡು ಹಂದಿ ಬೇಟೆಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ರೈತನಿಗೆ ಗಂಭೀರ ಗಾಯ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ವೀರನಾಗೇನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಗಾಯಾಳು ರೈತನನ್ನು ಆಂಬ್ಯುಲೆನ್ಸ್ ಮೂಲಕ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಕೊಡಿಸಲಾಗಿದೆ. ಪ್ರಾಣಿಗಳ ಬೇಟೆಗೆ ಕೆಲ ಕಿಡಿಗೇಡಿಗಳು ಅಕ್ರಮವಾಗಿ ಸಿಡಿಮದ್ದುಗಳನ್ನು ಇಡುತ್ತಿರುವುದು ರೈತರ ಜೀವಕ್ಕೆ ಮಾರಕವಾಗಿದೆ ಎಂದು ಗ್ರಾಮಸ್ಥರು ಆತಂಕ ಹೊರಹಾಕಿದ್ದಾರೆ.
ಗಾಯಾಳು ರೈತ ಗೋಪಾಲಪ್ಪ. -
ಮಧುಗಿರಿ: ಕಾಡು ಹಂದಿ ಬೇಟೆಗೆ ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವುದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ವೀರನಾಗೇನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ರೈತ ಗೋಪಾಲಪ್ಪ (66) ಗಾಯಾಳು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಘಡ ನಡೆದಿದೆ.
ಸಿಡಿಮದ್ದು ಸ್ಫೋಟದಿಂದ ಗಂಭೀರ ಗಾಯಗಳಾಗಿವೆ. ಸ್ಫೋಟದ ಶಬ್ದಕ್ಕೆ ಆತಂಕಗೊಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾ, ಸಿಡಿಮದ್ದು ಸ್ಫೋಟವಾಗಿರುವುದು ಗೊತ್ತಾಗಿದೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಗೋಪಾಲಪ್ಪ ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಕೊಡಿಸಲಾಗಿದೆ.
ಜಮೀನಿನಲ್ಲಿ ಕಾಡು ಹಂದಿ ಹಾಗೂ ಇತರೆ ಪ್ರಾಣಿಗಳ ಬೇಟೆಗೆ ಕೆಲ ಕಿಡಿಗೇಡಿಗಳು ಅಕ್ರಮವಾಗಿ ಸಿಡಿಮದ್ದುಗಳನ್ನು ಇಡುತ್ತಿರುವುದು ರೈತರ ಜೀವಕ್ಕೆ ಮಾರಕವಾಗಿದೆ. ಇಂತಹ ಅನಾಹುತಗಳು ಮರುಕಳಿಸಿದರೆ ನಮ್ಮ ಕುಟುಂಬಗಳ ಭವಿಷ್ಯವೇನು ಎಂದು ಗಾಯಗೊಂಡ ರೈತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bengaluru News: ಬೆಂಗಳೂರಿನಲ್ಲಿ ಬಾಂಗ್ಲಾದೇಶಕ್ಕೆ ಜೈಕಾರ ಹಾಕಿದ ಮಹಿಳೆ ಬಂಧನ
ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಗಾಯಗೊಂಡ ರೈತ ಗೋಪಾಲಪ್ಪ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಾಲೂಕು ಕರವೇ ಅಧ್ಯಕ್ಷ ಎ. ಶಿವಕುಮಾರ್ ಅವರು ಗಾಯಾಳುವನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ದೊರಕಿಸಲು ಸಹಕಾರ ನೀಡಿದ್ದಾರೆ. ಅರಣ್ಯ ಇಲಾಖೆಯಿಂದ ತಕ್ಷಣ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಾಸನದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ
ಹಾಸನ: ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮುಗುಲಿ ಗ್ರಾಮದಲ್ಲಿ ನಡೆದಿದೆ. ಶೋಭಾ (40) ಮೃತ ಮಹಿಳೆ. ಮಂಗಳವಾರ ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಶೋಭಾ ಅವರನ್ನು ಬೆನ್ನಟ್ಟಿ ತುಳಿದು ಸಾಯಿಸಿದೆ. ಸ್ಥಳಕ್ಕೆ ಡಿಎಫ್‌ಒ ಸೌರಭ್ ಕುಮಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆನೆಯು ಇತ್ತೀಚೆಗೆ ಕೊಡಗಿನಿಂದ ಹಾಸನದತ್ತ ಬಂದಿತ್ತು ಎನ್ನಲಾಗುತ್ತಿದೆ. ಮೃತ ಶೋಭಾ ಅವರು ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು, ಅವರ ತಾಯಿ ರಾಜಮ್ಮ ಕೂಡ ಜತೆಯಲ್ಲಿ ಹೋಗಿದ್ದರು. ಇಬ್ಬರೂ ನಡೆದುಕೊಂಡು ಹೋಗುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ. ರಾಜಮ್ಮ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಆನೆಯು ಶೋಭಾ ಅವರನ್ನು ಕಾಲು ಕೆಳಗೆ ಹಾಕಿ ತುಳಿದಿದ್ದರಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಇನ್ನು ಕಾಡಾನೆಗಳ ಹಾವಳಿ ಹೆಚ್ಚಳವಾಗಿರುವ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಮೃತದೇಹ ಎತ್ತಲೂ ಬಿಡದೆ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಗ್ರಾಮಸ್ಥರು ಧರಣಿ ಮಾಡುತ್ತಿದ್ದಾರೆ. ಮೃತ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಅಂತ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.