ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur News: ಪ್ರೇಯಸಿಯ ಜತೆ ಗಲಾಟೆ; ಕಾರಿನಲ್ಲೇ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ!

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಅವಘಡ ನಡೆದಿದೆ. ಯುವಕ ಮತ್ತು ಯುವತಿ ಕಾರಿನಲ್ಲಿ ಬೆಂಗಳೂರಿನಿಂದ ಅಂಕೋಲಗೆ ತೆರಳುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಯುವಕ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರಿನಲ್ಲೇ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ!

ಶಿರಾ ಬಳಿ ಕಾರು ಸುಟ್ಟು ಕರಕಲಾಗಿರುವುದು. -

Prabhakara R
Prabhakara R Jun 27, 2026 4:02 PM

ತುಮಕೂರು: ಚಲಿಸುತ್ತಿದ್ದ ಕಾರಿನಲ್ಲೇ ಯುವತಿಯೊಂದಿಗೆ ಜಗಳವಾಡಿದ ಯುವಕನೊಬ್ಬ, ಆಕೆಗೆ ಚಾಕುವಿನಿಂದ ಇರಿದು, ಬಳಿಕ ತಾನು ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಸಜೀವ ದಹನವಾಗಿರುವ ಘಟನೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಾಗೇಂದ್ರ (30) ಮೃತಪಟ್ಟಿದ್ದು, ರಮ್ಯಾ (23) ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಹಿನ್ನೆಲೆ:

ಬೆಂಗಳೂರಿನ ಜಯನಗರದ 1ನೇ ಬ್ಲಾಕ್‌ನಲ್ಲಿ ವಾಸವಾಗಿದ್ದ ರಮ್ಯಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, 6 ವರ್ಷಗಳಿಂದ ನಾಗೇಂದ್ರ ಹಾಗೂ ರಮ್ಯಾ ಪ್ರೀತಿಸುತ್ತಿದ್ದರು. ಕಳೆದ ಹಲವು ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದಾಗಿ ರಮ್ಯಾ ನಾಗೇಂದ್ರನ ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ಶನಿವಾರ ಬೆಳಗ್ಗೆ ರಮ್ಯಾಳ ರೂಂ ಬಳಿ ಬಂದಿದ್ದ ನಾಗೇಂದ್ರ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬೆಂಗಳೂರಿನಿಂದ ಅಂಕೋಲಾಕ್ಕೆ ಖಾಸಗಿ ಟ್ಯಾಕ್ಸಿಯೊಂದರಲ್ಲಿ ತೆರಳುತ್ತಿದ್ದನು.

ಜೋಗಿಹಳ್ಳಿ ಬಳಿ ಬರುತ್ತಿದ್ದಂತೆ ಇಬ್ಬರ ನಡುವೆ ವೈಯಕ್ತಿಕ ವಿಚಾರವಾಗಿ ವಾಗ್ವಾದ ಶುರುವಾಗಿದ್ದು, ಮಾತಿನ ಚಕಮಕಿ ತಾರಕಕ್ಕೇರಿದಾಗ, ನಾಗೇಂದ್ರ ರಮ್ಯಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದ ಗಾಬರಿಗೊಂಡ ರಮ್ಯಾ ತಕ್ಷಣವೇ ಚಲಿಸುವ ಕಾರಿನಿಂದ ಕೆಳಗಿಳಿದು ಜಿಗಿದಿದ್ದಾಳೆ. ತಕ್ಷಣ ಕ್ಯಾಬ್ ಚಾಲಕ ಪ್ರವೀಣ್ ಕುಮಾರ್ ನಾಯಕ ಕಾರನ್ನು ನಿಲ್ಲಿಸಿ ಆಕೆಯನ್ನು ರಕ್ಷಿಸಲು ಹೋಗಿದ್ದಾನೆ.

ಕಾರಿನೊಳಗೆ ಏಕಾಂಗಿಯಾದ ನಾಗೇಂದ್ರ ತಕ್ಷಣವೇ ಡೋರ್ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ತಾನು ಮೊದಲೇ ತಂದಿದ್ದ ಪೆಟ್ರೋಲ್ ಬಾಂಬ್ ಅನ್ನು ಕಾರಿನೊಳಗೆ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

image

ನಾಗೇಂದ್ರ ಯಾರು, ಆತನಿಗೂ ರಮ್ಯಾ ನಡುವೆ ಇದ್ದ ಸಂಬಂಧವೇನು, ಈ ಭೀಕರ ಕೃತ್ಯಕ್ಕೆ ಕಾರಣವೇನು ಎಂಬ ಹಲವು ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಆತನಿಗೆ ಪೆಟ್ರೋಲ್ ಬಾಂಬ್ ಎಲ್ಲಿ ದೊರೆಯಿತು. ಆಂಕೋಲಾಗೆ ಏಕೆ ಹೋಗುತ್ತಿದ್ದರು ಎಂಬುದರ ಬಗ್ಗೆ ತನಿಖೆಯಿಂದ ತಿಳಿಯಬೇಕಿದೆ. ಕ್ಯಾಬ್ ಚಾಲಕನಿಂದಲೂ ಸಹ ಮಾಹಿತಿ ಪಡೆಯಲಾಗುತ್ತಿದೆ.

| ಕೆ.ವಿ.ಅಶೋಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.