ರೈತರಿಗೆ ಉಚಿತವಾಗಿ ಗುಣಮಟ್ಟದ ಮೇವು ಬೀಜದ ಕಿಟ್ ವಿತರಣೆ: ಶಾಸಕ ಕೆ.ಎನ್. ರಾಜಣ್ಣ
Madhugiri News: ಬರ ಪರಿಹಾರ ಯೋಜನೆಯ ಭಾಗವಾಗಿ ರೈತರಿಗೆ ಉಚಿತವಾಗಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಮೇವು ಬೀಜಗಳ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
-
ಮಧುಗಿರಿ, ಆ.12: ಬರ ಪರಿಹಾರ ಯೋಜನೆಯ ಭಾಗವಾಗಿ ರೈತರಿಗೆ ಉಚಿತವಾಗಿ ಗುಣಮಟ್ಟದ ಮೇವು ಬೀಜದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು. ಪಟ್ಟಣದ (Madhugiri News) ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮೇವಿನ ಬೀಜ ಮಿನಿ ಕಿಟ್ಸ್ ಹಾಗೂ ಇತರೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧುಗಿರಿ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿರುವುದರಿಂದ, ರೈತರು ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯೂ ಒಂದಾಗಿದೆ. ಜಾನುವಾರುಗಳ ಹಸಿವು ನೀಗಿಸಲು ಮತ್ತು ಅವುಗಳ ಆರೋಗ್ಯ ಸಂರಕ್ಷಣೆಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು ತಮ್ಮ ಬಳಿ ಲಭ್ಯವಿರುವ ಕನಿಷ್ಠ ನೀರಾವರಿ ಸೌಲಭ್ಯವನ್ನು ಬಳಸಿಕೊಂಡು ಸ್ವತಃ ಮೇವು ಬೆಳೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
ಮೇವಿನ ಅಭಾವದಿಂದ ಜಾನುವಾರುಗಳು ಪೌಷ್ಟಿಕಾಂಶದ ಕೊರತೆಗೆ ಒಳಗಾಗುವುದನ್ನು ಮತ್ತು ಅಸಹಜ ಸಾವುಗಳನ್ನು ತಡೆಯಬಹುದು. ಹೊರಗಿನಿಂದ ಹೆಚ್ಚಿನ ಬೆಲೆ ಕೊಟ್ಟು ಮೇವು ಖರೀದಿಸುವ ಅನಿವಾರ್ಯತೆ ತಪ್ಪಿ, ರೈತರಿಗೆ ಆರ್ಥಿಕ ನೆರವಾಗುತ್ತದೆ. ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿಯಿಂದ ರೈತರನ್ನು ಮುಕ್ತಿಗೊಳಿಸುತ್ತದೆ ಎಂಬ ತಿಳಿಸಿದರು.
ನರ್ಸರಿಗೆ ಭೇಟಿ: ದೊಡ್ಡೇರಿ ಹೋಬಳಿಯ ಇಂದಿರಾ ಗ್ರಾಮದ ತೋಟಗಾರಿಕೆ ನರ್ಸರಿ ಫಾರ್ಮ್‌ಗೆ ಭೇಟಿ ನೀಡಿ ಕುಂದು ಕೊರತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.
ಕಾಲೇಜು ನಿರ್ಮಾಣ ಕಾಮಗಾರಿ ವೀಕ್ಷಣೆ
ದೊಡ್ಡೇರಿ ಹೋಬಳಿ ವ್ಯಾಪ್ತಿಯ ರಂಗಾಪುರ ಗೊಲ್ಲರಹಟ್ಟಿ ಹತ್ತಿರ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪ್ರತಿಷ್ಠಿತ ಜಿ.ಟಿ.ಟಿ.ಸಿ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಮುಖಂಡರುಗಳ ಜತೆ ವೀಕ್ಷಣೆ ಮಾಡಿ ಗುಣಮಟ್ಟದಿಂದ ಕಾಮಗಾರಿ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವರು ಹಾಗೂ ಶಾಸಕ ಕೆ.ಎನ್. ರಾಜಣ್ಣ, ನಮ್ಮ ಕ್ಷೇತ್ರದ ಯುವಜನರ ಭವಿಷ್ಯಕ್ಕೆ ಹೊಸ ಭರವಸೆಯ ಕೇಂದ್ರವಾಗಲಿದೆ. ಆಧುನಿಕ ತಾಂತ್ರಿಕ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ಉದ್ಯೋಗಪರ ತರಬೇತಿಯನ್ನು ನೀಡುವ ಉದ್ದೇಶ ಹೊಂದಿರುವ ಜಿ.ಟಿ.ಟಿ.ಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಊರಿನಲ್ಲೇ ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ಪಡೆಯುವ ಅವಕಾಶ ಕಲ್ಪಿಸಲಿದೆ.
ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ, ನವೀನ ಚಿಂತನೆ ಮತ್ತು ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವ ಮೂಲಕ, ಮಧುಗಿರಿ ಕ್ಷೇತ್ರವನ್ನು ಶೈಕ್ಷಣಿಕ ಹಾಗೂ ಕೌಶಲ್ಯಾಭಿವೃದ್ಧಿಯ ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮಹತ್ವದ ಹೆಜ್ಜೆ ಇದಾಗಿದೆ ಎಂದು ತಿಳಿಸಿದರು.
ಒಂದು ತಿಂಗಳಲ್ಲಿ ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ.ಎಸ್.ಎ, ಪಶು ಜಿಲ್ಲಾ ಉಪನಿರ್ದೇಶಕ ಶಿವಪ್ರಸಾದ್, ಸಹಾಯಕ ನಿರ್ದೇಶಕ ಜಗದೀಶ್, ತಾಪಂ ಇಒ ಬಿ.ಕೆ. ಉತ್ತಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಮುಖಂಡರಾದ ತುಂಗೋಟಿ ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.