ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಗರೇಟ್ ಖರೀದಿಸಲು 500 ರೂ. ಖೋಟಾ ನೋಟು ಕೊಟ್ಟು ಸಿಕ್ಕಿಬಿದ್ದ MBA ಪದವೀಧರ; ರಾಜ್ಯದಲ್ಲಿ ಬೃಹತ್ ಖೋಟಾ ನೋಟು ದಂಧೆ ಬೆಳಕಿಗೆ!

Fake currency racket: ಅಂಗಡಿಯೊಂದರಲ್ಲಿ ಚಲಾವಣೆಯಾದ ಕೇವಲ ಒಂದು ನಕಲಿ ನೋಟಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಸದ್ಯ ಪ್ರಕರಣಕ್ಕೆ ಸಂಬಂಧಿಸಿ ದಂಧೆಯ ಕಿಂಗ್‌ಪಿನ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 500 ರೂ. ಮುಖಬೆಲೆಯ 60ಕ್ಕೂ ಹೆಚ್ಚು ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದಲ್ಲಿ ಖೋಟಾ ನೋಟು ದಂಧೆ ಬೆಳಕಿಗೆ; 6 ಮಂದಿ ಅರೆಸ್ಟ್‌

-

Prabhakara R
Prabhakara R Jul 10, 2026 4:55 PM

ತುಮಕೂರು: ಕೇವಲ ಒಂದೇ ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವು ಬೆನ್ನತ್ತಿದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಠಾಣೆ ಪೊಲೀಸರು, ಅಂತಾರಾಜ್ಯ ಮಟ್ಟದ ಬೃಹತ್ ಖೋಟಾ ನೋಟು ದಂಧೆಯನ್ನು (Fake currency racket) ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಗಡಿಯೊಂದರಲ್ಲಿ ಚಲಾವಣೆಯಾದ ಕೇವಲ ಒಂದು ನಕಲಿ ನೋಟಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಸದ್ಯ ಪ್ರಕರಣಕ್ಕೆ ಸಂಬಂಧಿಸಿ ದಂಧೆಯ ಕಿಂಗ್‌ಪಿನ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 500 ರೂ. ಮುಖಬೆಲೆಯ 60ಕ್ಕೂ ಹೆಚ್ಚು ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಂಧೆಯ ಮುಖ್ಯ ಸೂತ್ರಧಾರ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಎಂಬಿಎ ಪದವೀಧರ ರುದ್ರೇಶ್, ಮೈಸೂರಿನ ರವಿ, ಮಧ್ಯವರ್ತಿಗಳಾದ ಆಂಧ್ರಪ್ರದೇಶದ ಅನಂತಪುರದ ಕುಬೇರಪ್ಪ, ಹನುಮಂತಪ್ಪ ಹಾಗೂ ನೋಟು ಚಲಾವಣೆ ಮಾಡುತ್ತಿದ್ದ ತಿಲಕ ಕುಮಾರ್ ಮತ್ತು ವೆಂಕಟೇಶ ಬಂಧಿತ ಆರೋಪಿಗಳಾಗಿದ್ದಾರೆ.

​ಅಂಗಡಿಯಲ್ಲಿ ಸಿಗರೇಟ್ ಖರೀದಿಸಲು ಹೋಗಿ ಸಿಕ್ಕಿಬಿದ್ದರು!

​ಜು.2 ರಂದು ಹುಳಿಯಾರಿನ ಅಂಗಡಿಯೊಂದಕ್ಕೆ ಬಂದಿದ್ದ ಇಬ್ಬರು ಆರೋಪಿಗಳು 500 ರೂಪಾಯಿ ನೋಟು ನೀಡಿ ಸಿಗರೇಟ್ ಪ್ಯಾಕ್ ಖರೀದಿಸಿದ್ದರು. ಗ್ರಾಹಕರ ಕಾರು ಹೊರಟು ಹೋದ ಬಳಿಕ ಅಂಗಡಿ ಮಾಲೀಕನಿಗೆ ಆ ನೋಟಿನ ಮೇಲೆ ಅನುಮಾನ ಬಂದು ಪರಿಶೀಲಿಸಿದಾಗ ಅದು ನಕಲಿ ನೋಟು ಎಂದು ಗೊತ್ತಾಗಿದೆ. ತಕ್ಷಣ ಜಾಗೃತರಾದ ಅಂಗಡಿ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

​ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡವನ್ನು ರಚಿಸಿ, ತನಿಖೆ ಚುರುಕುಗೊಳಿಸಿದರು. ಒಂದು ನೋಟಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ದಂಧೆಯ ಬೃಹತ್ ಜಾಲವೇ ಕಣ್ಣೆದುರು ಬಿಚ್ಚಿಕೊಂಡಿದೆ. ಬೆಂಗಳೂರು, ಮೈಸೂರು ಹಾಗೂ ನೆರೆ ರಾಜ್ಯಗಳಲ್ಲೂ ಕಾರ್ಯಾಚರಣೆ ನಡೆಸಿ ಆರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕೋಟಾ ನೋಟು ಮುದ್ರಣ

​ಕಿಂಗ್‌ಪಿನ್ ರುದ್ರೇಶ್ ಬೆಂಗಳೂರಿನಲ್ಲಿ ಕುಳಿತು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ. ರವಿ ಎಂಬಾತ ಈ ನಕಲಿ ನೋಟುಗಳನ್ನು ಮೈಸೂರು ಭಾಗದಲ್ಲಿ ಮಾರಾಟ ಮಾಡುವ ಜವಾಬ್ದಾರಿ ಹೊತ್ತಿದ್ದ. ಇನ್ನು ಅನಂತಪುರ ಮೂಲದ ​ಕುಬೇರಪ್ಪ ಮತ್ತು ಹನುಮಂತಪ್ಪ ಈ ಜಾಲದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ಮತ್ತು ತಿಲಕ್ ಎಂಬುವವರು ಈ ನಕಲಿ ನೋಟುಗಳನ್ನು ಖರೀದಿಸಿ ಸಾರ್ವಜನಿಕವಾಗಿ ಚಲಾವಣೆ ಮಾಡುತ್ತಿದ್ದರು.

​ಸದ್ಯ ಆರೋಪಿಗಳಿಂದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ದಂಧೆಯಲ್ಲಿ ಇನ್ನು ಯಾರೆಲ್ಲಾ ಭಾಗಿಯಾಗಿದ್ದಾರೆ ಮತ್ತು ಎಷ್ಟು ಪ್ರಮಾಣದ ನಕಲಿ ನೋಟುಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ ಎಂಬ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ನಕಲಿ ನೋಟು ದಂಧೆಯಲ್ಲಿ ಈ ಹಿಂದೆಯೂ ಸಿಕ್ಕಿಬಿದ್ದಿದ್ದ

ಈ ಹಿಂದೆ 2024ರ ಜನವರಿಯಲ್ಲಿ ದಾವಣಗೆರೆ ಪೊಲೀಸರು ರುದ್ರೇಶ್ ಸೇರಿ 6 ಜನ ಆರೋಪಿಗಳನ್ನು ಬಂಧಿಸಿದ್ದರು. ಆಗ ಆರೋಪಿಗಳಿಂದ 200 ರೂ. ಹಾಗೂ 500 ರೂ. ಮುಖಬೆಲೆಯ ಒಟ್ಟು 7.70 ಲಕ್ಷ ಮೊತ್ತದ ನಕಲಿ ನೋಟು ಹಾಗೂ 43 ಸಾವಿರ ರೂ. ಅಸಲಿ ನೋಟುಗಳನ್ನು ವಶಕ್ಕೆ ಪಡೆದಿದ್ದರು. ಆದರೆ, ಜೈಲಿನಿಂದ ಬಿಡುಗಡೆಯಾದ ನಂತರವೂ ರುದ್ರೇಶ್ ಮತ್ತೆ ನಕಲಿ ನೋಟು ದಂಧೆ ಆರಂಭಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೊಂದು ಲವ್‌ ಜಿಹಾದ್‌? ಹಿಂದೂ ಯುವತಿಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ ನವಾಜ್‌

ಆರೋಪಿ ರುದ್ರೇಶ್, ತಾಂತ್ರಿಕ ಕೌಶಲಗಳನ್ನು ರೂಢಿಸಿಕೊಂಡಿದ್ದ. ನೋಟುಗಳನ್ನು ಸ್ಕ್ಯಾನ್ ಮಾಡಿ ಮುಖಬೆಲೆ ಬರೆಯುವ ಕೌಶಲ ಹೊಂದಿದ್ದ. ಕೊರೊನಾ ಸಮಯದಲ್ಲಿ ವ್ಯವಹಾರದಲ್ಲಿ ನಷ್ಟವಾಗಿ ಎಲ್ಲೂ ಕೆಲಸ ಸಿಗದೇ ಇದ್ದಾಗ ಈ ದಂಧೆಗಿಳಿದಿದ್ದ. ಸಂತೆ, ಜಾತ್ರೆ, ಜನಸಂದಣಿ ಇರುವ ಅಂಗಡಿಗಳ ಜನನಿಬಿಡ ಪ್ರದೇಶಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ, ರಾತ್ರಿ ವೇಳೆ ಹೆಚ್ಚು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ. ಇದೀಗ ಮತ್ತೊಮ್ಮೆ ನಕಲಿ ನೋಟು ದಂಧೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.