Fraud Case: ದುಪ್ಪಟ್ಟು ಲಾಭದ ಆಸೆ ತೋರಿಸಿ 12.50 ಕೋಟಿ ಪಂಗನಾಮ; ಆಕಾಶ್ ಜ್ಯುವೆಲ್ಲರಿ ಮಾಲೀಕನ ವಿರುದ್ಧ ಕೇಸ್
Fraud Case: ತುಮಕೂರಿನ ಆಕಾಶ್ ಕೋ ಆಪರೇಟಿವ್ ಸೊಸೈಟಿ ಹಾಗೂ ಆಕಾಶ್ ಜ್ಯುವೆಲ್ಲರಿ ಮಾಲೀಕ ಮತ್ತು ಕುಟುಂಬ, ಷೇರುದಾರರಿಗೆ ವಂಚಿಸಿ ಪರಾರಿಯಾಗಿದೆ. ಸಂಬಂಧಿಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತುಮಕೂರು: ಕಡಿಮೆ ಬೆಲೆಗೆ ಚಿನ್ನ ಖರೀದಿಸಿ ಬೆಲೆ ಹೆಚ್ಚಾದ ಸಂದರ್ಭದಲ್ಲಿ ಮಾರಾಟ ಮಾಡಿ ದುಪ್ಪಟ್ಟು ಲಾಭ ನೀಡುವುದಾಗಿ ಜನರಿಗೆ ಆಸೆ ತೋರಿಸಿ 12.50 ಕೋಟಿ ಅಧಿಕ ಹಣವನ್ನು ಜನರಿಗೆ ಮೋಸ ಮಾಡಿರುವ ಪ್ರಕರಣ ನಡೆದಿದ್ದು ನಗರದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಗರದ ಆಕಾಶ್ ಕೋ ಆಪರೇಟಿವ್ ಸೊಸೈಟಿ ಹಾಗೂ ಆಕಾಶ್ ಜ್ಯುವೆಲ್ಲರಿ ಮಾಲೀಕ ಶಿವಾನಂದ ಮೂರ್ತಿ ಮತ್ತು ಕುಟುಂಬದವರು ಷೇರುದಾರರಿಗೆ ವಂಚಿಸಿ ಪರಾರಿಯಾಗಿದ್ದಾರೆ.
ಈವರೆಗೂ 50ಕ್ಕೂ ಅಧಿಕ ಮಂದಿ ತುಮಕೂರು ನಗರ ಠಾಣೆಗೆ ದೂರು ನೀಡಿದ್ದಾರೆ. ದುಪ್ಪಟ್ಟು ಲಾಭ ಕೊಡುವುದಾಗಿ ಜನರನ್ನು ನಂಬಿಸಿ 12.50 ಕೋಟಿ ರೂ.ಗೂ ಹೆಚ್ಚು ವಂಚಿಸಿದ್ದು, ವಂಚನೆ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಷೇರುದಾರ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಸಿದ್ದಲಿಂಗಪ್ಪ ನೀಡಿದ ದೂರಿನ ಮೇರೆಗೆ ಶಿವಾನಂದ ಮೂರ್ತಿ, ಪತ್ನಿ ಅನ್ನಪೂರ್ಣ, ಪುತ್ರ ಆಕಾಶ್, ನಾದಿನಿ ಉಮಾದೇವಿ, ಆಕೆಯ ಪತಿ ನಟರಾಜು ವಿರುದ್ಧ ಕೇಸು ದಾಖಲಾಗಿದೆ. ಹಣ ಹೂಡಿಕೆ ಅಥವಾ ಠೇವಣಿ ಇರಿಸಿದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾದಾಗ ಖರೀದಿಸಿ ದರ ಹೆಚ್ಚಾದಾಗ ಮಾರಾಟ ಮಾಡಿ ಅಧಿಕ ಲಾಭ ನೀಡುವುದಾಗಿ ನಂಬಿಸಿದ್ದರು. ಇದನ್ನು ನಂಬಿ ಅನೇಕರು ಹಣ ಹೂಡಿಕೆ ಮಾಡಿದ್ದರು.ನೂರಾರು ಜನರಿಗೆ ಮೋಸ ಮಾಡಿ ಜ್ಯುವೆಲ್ಲರಿ ಶಾಪ್ ಮಾಲೀಕ ಪರಾರಿಯಾಗಿದ್ದು, ನ್ಯಾಯ ಕೊಡಿಸುವಂತೆ ನೊಂದ ಗ್ರಾಹಕರು ಮನವಿ ಮಾಡಿದ್ದಾರೆ.
ನಗರದ ಕುವೆಂಪು ನಗರದ ನಿವಾಸಿ ಶಿವಾನಂದಮೂರ್ತಿ ಹೆಂಡತಿ ಪೂರ್ಣಿಮಾ, ಮಗ ಆಕಾಶ್‌ನೊಂದಿಗೆ ಪರಾರಿಯಾಗಿದ್ದಾನೆ. ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ಮಗ ಆಕಾಶ್ ವೈದ್ಯನಾಗಿದ್ದಾನೆ. ಕೇವಲ ದುಪ್ಪಟ್ಟು ಬಡ್ಡಿ ಅಲ್ಲದೆ ಚೀಟಿ ವ್ಯವಹಾರವನ್ನೂ ನಡೆಸುತ್ತಿದ್ದ ಶಿವಾನಂದಮೂರ್ತಿ, ಇತ್ತೀಚೆಗೆ ಆಕಾಶ ಸೌಹಾರ್ದ ಕೋ ಆಪರೇಟಿವ್ ಸೋಸೈಟಿ ಪ್ರಾರಂಭಿಸಿದ್ದನು. ನೂರಾರು ಜನರಿಂದ ಕೋಟ್ಯಂತರ ರೂ. ಸಂಗ್ರಹವಾಗಿತ್ತು. ಸೊಸೈಟಿಯ ಎಲ್ಲ ಹಣವನ್ನು ಎತ್ತಿಕೊಂಡು ಶಿವಾನಂದ ಮೂರ್ತಿ ಕುಟುಂಬ ಸಮೇತ ಪರಾರಿಯಾಗಿದ್ದಾನೆ.
ಈ ಸುದ್ದಿಯನ್ನೂ ಓದಿ | Economic Survey 2025: ಶೇ. 6.8ರವರೆಗೆ ಜಿಡಿಪಿ ಹೆಚ್ಚಳ ನಿರೀಕ್ಷೆ; ಆರ್ಥಿಕ ಸಮೀಕ್ಷೆಯಲ್ಲಿ ಏನೇನಿದೆ?
ಹಣ ನೀಡದಂತೆ ನಿರ್ದೇಶಕ ಮನವಿ
ಈ ಬಗ್ಗೆ ಸೋಸೈಟಿ ಆಡಳಿತ ಮಂಡಳಿ ದೂರು ನೀಡಿದ್ದು, ತುಮಕೂರು ನಗರ ಠಾಣೆಯಲ್ಲಿ ಶಿವಾನಂದಮೂರ್ತಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಶಿವಾನಂದಮೂರ್ತಿಗೆ ಯಾರು ಹಣ ನೀಡದಂತೆ ನಿರ್ದೇಶಕ ದೊಡ್ಡ ಬಸವಪ್ಪ ಮನವಿ ಮಾಡಿದ್ದಾರೆ.