ಜಾತೀಯತೆ ನಿರ್ಮೂಲನೆಯಾದಾಗ ಮಾತ್ರ ಕನಕದಾಸರ ಆಶಯ ಸಾಕಾರ: ವೆಂಕಟರಮಣಪ್ಪ
Madhugiri News: ಕನಕದಾಸರು ಸಾರಿದ ಮೌಲ್ಯಗಳು ಅವರ ಕೀರ್ತನೆಗಳು ಹಾಗೂ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿತವಾಗಿವೆ. ಜಾತೀಯತೆ ಸಮಾಜದಲ್ಲಿನ ಕಂದಾಚಾರ, ಅನಕ್ಷರತೆ, ಅಸಮಾನತೆ ಮತ್ತು ಬಡತನದಂತಹ ಸಾಮಾಜಿಕ ಪಿಡುಗುಗಳಿಗೆ ಕಾರಣವಾಗಿದೆ. ಇವುಗಳ ನಿರ್ಮೂಲನೆಯಾದಾಗ ಮಾತ್ರ ಕನಕದಾಸರು ಕಂಡ ಸಮಾನತೆಯ ಆಶಯ ಸಾಕಾರಗೊಳ್ಳಲು ಸಾಧ್ಯ ಎಂದು ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ ತಿಳಿಸಿದ್ದಾರೆ.
-
ಮಧುಗಿರಿ, ನ.27: ಕನಕದಾಸರು ಮನುಷ್ಯನ ಘನತೆಯನ್ನು ಎತ್ತಿಹಿಡಿಯಲು ಭಕ್ತಿಯನ್ನು ಸಾಧನವನ್ನಾಗಿ ಮಾಡಿಕೊಂಡರು. ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಮತ್ತು ರಾಜಕೀಯ ಸ್ಥಾನಮಾನ ದೊರೆತಾಗ ಮಾತ್ರ ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ ತಿಳಿಸಿದರು. ಪಟ್ಟಣದ (Madhugiri News) ಹೊರವಲಯದಲ್ಲಿರುವ ಕನಕ ಭವನದಲ್ಲಿ ಶುಕ್ರವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರು ಸಾರಿದ ಮೌಲ್ಯಗಳು ಅವರ ಕೀರ್ತನೆಗಳು ಹಾಗೂ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿತವಾಗಿವೆ. ಜಾತೀಯತೆ ಸಮಾಜದಲ್ಲಿನ ಕಂದಾಚಾರ, ಅನಕ್ಷರತೆ, ಅಸಮಾನತೆ ಮತ್ತು ಬಡತನದಂತಹ ಸಾಮಾಜಿಕ ಪಿಡುಗುಗಳಿಗೆ ಕಾರಣವಾಗಿದೆ. ಇವುಗಳ ನಿರ್ಮೂಲನೆಯಾದಾಗ ಮಾತ್ರ ಕನಕದಾಸರು ಕಂಡ ಸಮಾನತೆಯ ಆಶಯ ಸಾಕಾರಗೊಳ್ಳಲು ಸಾಧ್ಯ ಎಂದರು.
ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಮಾತನಾಡಿ, ಕನಕದಾಸರು ಎಲ್ಲ ಜನಾಂಗಗಳ ಬಡವರ ಪರವಾಗಿ ಧ್ವನಿಯಾಗಿದ್ದ ದಾಸ ಸಾಹಿತ್ಯದ ಶ್ರೇಷ್ಠರು. ತಮ್ಮ ಕೃತಿಗಳ ಮೂಲಕ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾರಿದ್ದಾರೆ. ಮನುಷ್ಯನನ್ನು ಜಾತಿ, ಧರ್ಮ ಹಾಗೂ ಸಂಪತ್ತಿನ ಆಧಾರದ ಮೇಲೆ ಅಳೆಯದೆ, ಮಾನವೀಯ ಗುಣಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಂದಿನಿ ಎಸ್, ಎ, ತಾಪಂ ಇಒ ಉತ್ತಮ ಹಾಗೂ ಉಪನ್ಯಾಸಕ ಎನ್. ಮಹಾಲಿಂಗೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಿದ್ದಾಪುರ ಶಿವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ನರಸಿಂಹಮೂರ್ತಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಂಪತ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ತಾ.ಪಂ. ಮಾಜಿ ಅಧ್ಯಕ್ಷರಾದ ಮರಿಯಣ್ಣ, ಮಂಜುನಾಥ್, ಮುಖಂಡರಾದ ಬಾಬುಬಸವಲಿಂಗೇಗೌಡ, ಬಿ.ಜಿ. ರವಿಕುಮಾರ್, ಕಮ್ಮನಕೋಟೆ ಹರೀಶ್, ಆನಂದ್, ಚಿಕ್ಕನರಸಿಂಹಯ್ಯ, ಲೆಂಕಪ್ಪ, ಗಿರೀಶ್, ಶಿಕ್ಷಕರಾದ ನಾರಾಯಣಪ್ಪ, ಟಿ. ರಂಗಧಾಮ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.