Gubbi (Tumkur) News: ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ: ಹೇಮಾವತಿ ಹೋರಾಟ ಸಮಿತಿಯ ನಿರ್ಣಯ
ಮಕ್ಕಳೇ ಬೇಡ ಅಂತ ಇದ್ರೆ, ಗಂಡಾ ಹೆಣ್ಣಾ ಅಂತ ಟೆಸ್ಟ್ ಮಾಡ್ತೀವಿ ಅನ್ನುವಂತೆ ಯಾವ ಐಐಟಿಯು ಬೇಡ, ಯಾವ ನೈಟಿಯು ಬೇಡ ಎಂದು ವ್ಯಂಗ್ಯ ಪ್ರತಿಕ್ರಿಯಿಸಿದ ಅವರು 25 ವರ್ಷದಿಂದ ಶಾಸಕರು ಆಡಳಿತ ಮಾಡುತ್ತಿದ್ದಾರೆ. ಅವರಿಗೆ ರೈತರ ಆತಂಕದ ಚಿಂತನೆ ಇಲ್ಲ. ಹದಿನೈದು ದಿನದ ಹಿಂದೆ ಸಭೆಯ ದಿನಾಂಕ ನಿಗದಿಯಾಗಿತ್ತು


ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮೂಲಕ ಜಿಲ್ಲೆಯ ನೀರು ಕುಣಿಗಲ್ ಮೂಲಕ ಮಾಗಡಿಯತ್ತ ಹರಿಸುವ ಪೈಪ್ ಲೈನ್ ಯೋಜನೆ ಅವೈಜ್ಞಾನಿಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ರೈತರ ಕಣ್ಣೊರೆಸುವ ತಂತ್ರ ಬಿಟ್ಟು ಚುನಾಯಿತ ಪ್ರತಿನಿಧಿಗಳು ದಿಟ್ಟ ನಿಲುವು ತಾಳಬೇಕು. ಸರ್ಕಾರಕ್ಕೆ ಹೋರಾಟ ಮೂಲಕ ನಮ್ಮ ಹಕ್ಕು ಪ್ರತಿಪಾದಿಸಿ ಈ ಲಿಂಕ್ ಕೆನಾಲ್ ಯೋಜನೆ ರದ್ದು ಪಡಿಸಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಯಾವುದೇ ತಜ್ಞರ ಸಮಿತಿ ಬಂದರೂ ನಮ್ಮದು ಒಕ್ಕೊರಲಿನ ಅಭಿಪ್ರಾಯ ಪ್ರಕಾರ ಕಾಮಗಾರಿ ರದ್ದು ಮಾಡಿ ಮುಖ್ಯ ನಾಲಾ ಮೂಲಕ ಕುಣಿಗಲ್ ಭಾಗಕ್ಕೆ ನೀರು ಹರಿಸಲಿ ಎಂದು ಹೇಮಾವತಿ ಹೋರಾಟ ಸಮಿತಿಯ ಸಭೆಯಲ್ಲಿ ಸರ್ವ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿ ಆಯೋಜಿಸಿದ್ದ ರೈತರು, ಹೋರಾಟಗಾರರ ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರು, ರೈತ ಸಂಘದ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು ಹೋರಾಟವೇ ನೀರು ಉಳಿಸುವ ಮಾರ್ಗ ಎಂದರು.
ಇದನ್ನೂ ಓದಿ: Tumkur (Gubbi) News: ಡಾ.ಬಾಬು ಜಗಜೀವನ ರಾಮ್ ರವರ 39ನೇ ಪುಣ್ಯ ಸ್ಮರಣೆ
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಲಿಂಕ್ ಕೆನಾಲ್ ಬೇಕಿಲ್ಲ ಎಂದು ರೈತರ ಹೋರಾಟ ನಡೆದಿದೆ. ಆದರೆ ಕೆಲವೇ ಶಾಸಕರ ಸಭೆ ಮಾಡಿ ರೈತ ಮುಖಂಡರನ್ನು ಹೊರತು ಪಡಿಸಿ ಸ್ಥಳ ಪರಿಶೀಲನೆ ತಾಂತ್ರಿಕ ಸಮಿತಿ ಪರಿಶೀಲನೆ ಎಲ್ಲಾ ಚಟುವಟಿಕೆಗೆ ಸೂಚಿಸಿರುವುದು ಸರಿಯಲ್ಲ.
ಮಕ್ಕಳೇ ಬೇಡ ಅಂತ ಇದ್ರೆ, ಗಂಡಾ ಹೆಣ್ಣಾ ಅಂತ ಟೆಸ್ಟ್ ಮಾಡ್ತೀವಿ ಅನ್ನುವಂತೆ ಯಾವ ಐಐಟಿ ಯು ಬೇಡ, ಯಾವ ನೈಟಿಯು ಬೇಡ ಎಂದು ವ್ಯಂಗ್ಯ ಪ್ರತಿಕ್ರಿಯಿಸಿದ ಅವರು 25 ವರ್ಷದಿಂದ ಶಾಸಕರು ಆಡಳಿತ ಮಾಡುತ್ತಿದ್ದಾರೆ. ಅವರಿಗೆ ರೈತರ ಆತಂಕದ ಚಿಂತನೆ ಇಲ್ಲ. ಹದಿನೈದು ದಿನದ ಹಿಂದೆ ಸಭೆಯ ದಿನಾಂಕ ನಿಗದಿಯಾಗಿತ್ತು. ಆದರೆ ಶಾಸಕರು ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿ ಕೊಂಡು ಅಮೆರಿಕಾ ಪ್ರವಾಸಕ್ಕೆ ತೆರಳಿರುವುದು ಮುಖ್ಯವಾಗಿತ್ತಾ ಇವರಿಗೆ. ಬಾಯಲ್ಲಿ ನನ್ನದು ವಿರೋಧ ಎನ್ನುತ್ತಾರೆ. ಕಾಳಜಿ ಇದ್ದಿದ್ದರೆ ಪ್ರವಾಸ ಮುಂದೂಡಬೇಕಿತ್ತು. ಒಣ ಮರಕ್ಕೆ ಗಿಣಿ ಕಾದಂತೆ ತಾಲ್ಲೂಕಿನ ಜನಕ್ಕೆ ಏನೂ ಕೆಲಸ ಮಾಡಿಕೊಟ್ಟಿಲ್ಲ.
ಹಿಂದೆ ಹೋರಾಟಗಾರರು ಪ್ರಾಣ ಒತ್ತೆಯಿಟ್ಟು ತಂದ ಹೇಮಾವತಿ ನೀರನ್ನು ಓರ್ವ ಪ್ರಭಾವಿಗೆ ಹೆದರಿ ರೈತರನ್ನು ಒತ್ತೆ ಇಡುವುದು ಸರಿಯಲ್ಲ. ನೀರುಗಂಟಿ ಎಂದು ಕರೆಸಿಕೊಂಡು ಈಗ ಬೇರೆಡೆಗೆ ನೀರು ಹರಿಸಲು ಕಾರಣವಾಗುತ್ತೀರಿ. ಈಗಲೂ ಸಮಯ ಮಿಂಚಿಲ್ಲ. ರೈತರ ಜೊತೆ ನಿಂತು ಕೆನಾಲ್ ಕಾಮಗಾರಿ ನಿಲ್ಲಿಸಿ. ರೈತರಿಗಾಗಿ ತ್ಯಾಗ ಮಾಡುವ ಅವಕಾಶ ಬಂದಿದೆ. ಜನಪರ ನಿಂತು ನಿಮ್ಮ ಹೋರಾಟ ಪ್ರದರ್ಶನ ಮಾಡಿ. ಕುಣಿಗಲ್ ಶಾಸಕರು ಅವರ ರೈತರಿಗೆ ಪ್ರಾಣ ತ್ಯಾಗ ಮಾಡ್ತೀನಿ ಅಂತಾರೆ ಎಂದು ಛೇಡಿಸಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕೆನಾಲ್ ಕಾಮಗಾರಿಯ ಗುತ್ತಿಗೆದಾರ ಪ್ರವಾಸಕ್ಕೆ ವ್ಯವಸ್ಥೆ ಮಾಡಿ ನಮ್ಮ ಶಾಸಕರನ್ನು ಕಿಡ್ನಾಪ್ ಮಾಡಿದ್ದಾರೆ. ತಾಲ್ಲೂಕಿನ ಹಿತಾಸಕ್ತಿ ಅಡವಿಟ್ಟು ಶಾಸಕರು ಸಭೆಯ ಹಿಂದಿನ ದಿನ ಪ್ರವಾಸಕ್ಕೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಶಾಸಕರು ನಾಪತ್ತೆ ದೂರು ನೀಡಲು ಸಮಿತಿ ಸಿದ್ಧವಿದೆ. ನಮ್ಮ ತಾಲ್ಲೂಕಿನ ಪರ ಸಭೆಯಲ್ಲಿ ದನಿ ಎತ್ತುವ ಪ್ರತಿನಿಧಿ ಇಲ್ಲ ಅಂದ್ರೆ ರೈತರು ಗಂಭೀರವಾಗಿ ಆಲೋಚನೆ ಮಾಡಬೇಕಿದೆ. ಕಾಳಜಿ ಇದ್ದಿದ್ದರೆ ಪ್ರವಾಸ ಒಂದು ದಿನ ಮುಂದೂಡಬಹುದಿತ್ತು.
ಕುಣಿಗಲ್ ಶಾಸಕರು ಬೃಹತ್ ನಾಟಕ ಆಡುತ್ತಿದ್ದಾರೆ. ಈ ಮಧ್ಯೆ ನಮ್ಮ ರೈತರು ರಥಯಾತ್ರೆ ಮೂಲಕ ನಮ್ಮ ಹಕ್ಕು ನಮ್ಮ ನೀರು ಉಳಿಸಲು ಜಿಲ್ಲೆಯಾದ್ಯಂತ ಪ್ರವಾಸ ಮಾಡಲು ಸಜ್ಜಾಗಿ ದ್ದಾರೆ. ಯಾವ ಚುನಾಯಿತ ಪ್ರತಿನಿಧಿಗಳನ್ನು ಕಾಯದೆ ಹೋರಾಟ ಸಮಿತಿ ದಿಟ್ಟ ಹೆಜ್ಜೆ ಇಟ್ಟು ಮುಂದಿನ ಹೋರಾಟಕ್ಕೆ ಲಕ್ಷ ಜನರನ್ನು ಸೇರಿಸಲು ಎಲ್ಲಾ ತಾಲ್ಲೂಕಿನಲ್ಲಿ ಸಭೆ ಆಯೋಜನೆ ಮಾಡಲಿದೆ. ಜನಶಕ್ತಿ ಬಗ್ಗೆ ಮತ್ತೊಮ್ಮೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದೆ ಎಂದ ಅವರು ಈ ವರ್ಷದ ಅಂತ್ಯಕ್ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟಕ್ಕೆ ಕುಳಿತಾಗ ನಮ್ಮನ್ನೆಲ್ಲಾ ಹೆದರಿಸಿ ಕೆಲಸ ಮಾಡುವ ಆಲೋಚನೆ ಸಹ ಅವರಲ್ಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಿ ಜಿಲ್ಲೆಯ ಬಂದ್ ನಡೆಸಬೇಕಿದೆ. ಗಡಿ ಭಾಗದಲ್ಲಿ ಹೆದ್ದಾರಿಗೆ ಮಣ್ಣು ಸುರಿದು ಹೋರಾಟ ನಡೆಸಲು ಸಜ್ಜಾಗಬೇಕಿದೆ. ಈಗಲೂ ಗುಬ್ಬಿ ಶಾಸಕರು ರೈತರ ಜೊತೆ ನಿಲ್ಲಲಿ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ನಮ್ಮ ಹೋರಾಟಕ್ಕೆ ಒಂದು ಸಭೆ ನಡೆಸಿ ಕೇವಲ ಶಾಸಕರನ್ನು ಮಾತ್ರ ಆಹ್ವಾನ ಮಾಡಿದ್ದಾರೆ. ನೇರವಾಗಿ ನಮ್ಮಗಳ ಜೊತೆ ಚರ್ಚಿಸ ಬೇಕಿತ್ತು. ವಾಸ್ತವ ಚಿತ್ರಣ ನೀಡುತ್ತಿದ್ದೆವು. ಮೂವರು ಶಾಸಕರು ನಮ್ಮ ಪರ ದನಿಯಾಗಿದ್ದಾರೆ. ಸಂಸದರು ಸಹ ನಮ್ಮ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಪ್ರಭಾವಿ ಉಪ ಮುಖ್ಯಮತ್ರಿಗಳು ಸಭೆಯ ನಂತರ ಮಾಧ್ಯಮಕ್ಕೆ ಹೇಳಿಕೆ ನೀಡಿ ನೀರು ತೆಗೆದುಕೊಂಡು ಹೋಗುವುದು ನಮಗೆ ಗೊತ್ತು. ಎಲ್ಲಾ ತಾಲ್ಲೂಕಿಗೆ ನೀರು ಹೇಗೆ ಹಂಚಬೇಕು ಗೊತ್ತು. ನಮ್ಮದೇ ಸರ್ಕಾರ ಎಂದು ಗರ್ವದ ಮಾತು ಹೇಳಿದ್ದಾರೆ. ಇಲ್ಲಿಯೇ ಅರ್ಥವಾಗುತ್ತದೆ. ಕಾಮಗಾರಿ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದಾರೆ. ಈ ನಡುವೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಅವರು ಕಾಮಗಾರಿಗೆ ಸಾಥ್ ನೀಡುವ ಮಾತು ಹೇಳಿದ್ದು ನಮ್ಮ ದೌರ್ಭಾಗ್ಯ. ನಿಜಕ್ಕೂ ಇದು ಅಚ್ಚರಿ ಕೂಡಾ ಆಗಿದೆ. ಸ್ಥಳಕ್ಕೆ ಶಿವಕುಮಾರ್ ಅವರು ಬರುತ್ತಾರೆ ಎಂಬ ಮಾತಿದೆ. ಬಂದರೆ ಬರಲಿ ಆದರೆ ನಮ್ಮ ಸಂಕಷ್ಟ ಅವರಲ್ಲಿ ಮನವರಿಕೆ ಮಾಡುವ ಕೆಲಸ ಮಾಡೋಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ಮುಂದೆ ಮಾತನಾಡಲು ಹಿಂಜರಿಯುವ ಕಾಂಗ್ರೆಸ್ ಶಾಸಕರು ರೈತರ ಬಗ್ಗೆ ಯಾವ ಕಾಳಜಿ ತೋರುತ್ತಾರೆ. ಸಭೆಯಲ್ಲಿ ರೈತಪರ ಏನು ಮಾತನಾಡುತ್ತಾರೆ. ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಕದ್ದೊ ಯ್ಯುವ ಕೆಲಸಕ್ಕೆ ಸಾಥ್ ನೀಡುವ ನಿಟ್ಟಿನಲ್ಲಿ ಸಭೆಯಲ್ಲಿ ಪಾಲ್ಗೊಂಡಿಲ್ಲ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡದೆ ರೈತರ ಪರ ನಿಲ್ಲಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೇರೆ ಅನುಭವಿಸಬೇಕಿದೆ ಎಂದ ಅವರು ಜಿಲ್ಲೆಯ ರೈತ ಮುಖಂಡರು, ನೀರಿನ ಹೋರಾ ಟಗಾರರು, ಎಲ್ಲಾ ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಕೆಲಸ ಜಿಲ್ಲಾ ಸಚಿವರು ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮುಖಂಡರಾದ ಎಚ್.ಟಿ.ಬೈರಪ್ಪ, ಬ್ಯಾಟರಂಗೇಗೌಡ, ಜಿ.ಡಿ.ಸುರೇಶಗೌಡ, ಶಿವಲಿಂಗ ಯ್ಯ, ಯೋಗಾನಂದಕುಮಾರ್, ರೈತಸಂಘದ ವೆಂಕಟೇಗೌಡ, ಸಿ.ಜಿ.ಲೋಕೇಶ್, ಶಿವಕುಮಾರ್, ಪ್ರಾಂತ ರೈತ ಸಂಘದ ಅಜ್ಜಪ್ಪ, ಪಪಂ ಸದಸ್ಯರಾದ ಶಿವಕುಮಾರ್, ಅಣ್ಣಪ್ಪಸ್ವಾಮಿ, ಅಂಗನವಾಡಿ ನೌಕರರ ಸಂಘದ ಅನುಸೂಯ, ಸರೋಜಮ್ಮ, ತಿರುಮಲೇಶ್ ಸೇರಿದಂತೆ ಇನ್ನಿತರ ಹೋರಾಟ ಗಾರರು ಇದ್ದರು.