Chikkanayakanahalli News: ದಾರ್ಶನಿಕರ ಜಯಂತಿ ಕರಪತ್ರದಲ್ಲಿ ಸರಕಾರಿ ಲೋಗೋ ದುರ್ಬಳಕೆ: ಶಾಸಕರ ವಿರುದ್ದ ಕಾಂಗ್ರೆಸ್ ವಾಗ್ದಾಳಿ
ಸರಕಾರಿ ಲಾಂಛನವನ್ನು ಸರಕಾರದ ಅಧಿಕೃತ ಉದ್ದೇಶಗಳನ್ನು ಹೊರತುಪಡಿಸಿ ರಾಜಕೀಯ ಪಕ್ಷದ ಕಾರ್ಯಕ್ರಮಗಳು, ವೈಯಕ್ತಿಕ ಪ್ರಚಾರ, ಖಾಸಗಿ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಇದು ಜನರನ್ನು ದಾರಿ ತಪ್ಪಿಸುವ ಮತ್ತು ಸರಕಾರಿ ಸಂಪನ್ಮೂಲಗಳನ್ನು ಪಕ್ಷದ ಪ್ರಚಾರಕ್ಕೆ ಬಳಸುವ ಪ್ರಯತ್ನವಾಗಿದೆ
-
ಚಿಕ್ಕನಾಯಕನಹಳ್ಳಿ: ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ ಅವರು ಸರ್ವ ದಾರ್ಶನಿಕರ ಜಯಂತಿಯ ಪ್ರಚಾರಕ್ಕಾಗಿ ಮುದ್ರಿಸಲಾಗಿರುವ ಕರಪತ್ರಗಳಲ್ಲಿ ಕರ್ನಾಟಕ ಸರಕಾರದ ಲಾಂಛನವನ್ನು ದುರ್ಬಳಕೆ ಮಾಡಲಾಗಿದೆ ಎಂದು ಶಾಸಕರು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಾಸಕರ ಹೆಸರಿ ನೊಂದಿಗೆ ಮುದ್ರಿತವಾಗಿರುವ ಈ ಕರಪತ್ರಗಳು ಸರಕಾರಿ ಲಾಂಛನ ಬಳಸಿ ಜಯಂತಿಗೆ ಅಧಿಕೃತ ಮತ್ತು ಕಾನೂನಾತ್ಮಕ ಮಾನ್ಯತೆ ನೀಡುವ ಹುನ್ನಾರ ನಡೆಸಿವೆ ಎಂದು ಆಪಾದಿಸಿ ದರು.
ಸರಕಾರಿ ಲಾಂಛನವನ್ನು ಸರಕಾರದ ಅಧಿಕೃತ ಉದ್ದೇಶಗಳನ್ನು ಹೊರತುಪಡಿಸಿ ರಾಜಕೀಯ ಪಕ್ಷದ ಕಾರ್ಯಕ್ರಮಗಳು, ವೈಯಕ್ತಿಕ ಪ್ರಚಾರ, ಖಾಸಗಿ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಇದು ಜನರನ್ನು ದಾರಿ ತಪ್ಪಿಸುವ ಮತ್ತು ಸರಕಾರಿ ಸಂಪನ್ಮೂಲಗಳನ್ನು ಪಕ್ಷದ ಪ್ರಚಾರಕ್ಕೆ ಬಳಸುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಸ್ಪಷ್ಟೀಕರಣ ಪಡೆದು ತಪ್ಪಿತಸ್ಥ ಶಾಸಕರು, ಕರಪತ್ರ ಮುದ್ರಿಸಲು ಆದೇಶ ನೀಡಿದ್ದ ಅಧಿಕಾರಿಗಳು ಮತ್ತು ಮುದ್ರಣಾಲಯದ ಮಾಲಿಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಮುಂಬರುವ ಚುನಾವಣೆಗಳ ಹಿನ್ನಲೆಯಲ್ಲಿ ಶಾಸಕರು ಸರ್ವ ದಾರ್ಶನಿಕರ ಜಯಂತಿಗೆ ದಿಢೀರ್ ಮಹತ್ವ ನೀಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದು ಮತ ಬ್ಯಾಂಕ್ ಓಲೈಕೆಗಾಗಿ ನಡೆಯುತ್ತಿರುವ ಹಾಸ್ಯಾಸ್ಪದ ಪ್ರಯತ್ನ. ಶಾಸಕರು ದಾರ್ಶನಿಕರ ತತ್ವಗಳನ್ನು ಮತ್ತು ಚುನಾವಣೆ ಭರವಸೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾ ಗಿದ್ದಾರೆ. ಈಗ ದಾರ್ಶನಿಕರು ಪ್ರತಿನಿಧಿಸುವ ಸಮುದಾಯಗಳ ಮತಗಳನ್ನು ಸೆಳೆಯಲು ಜಯಂತಿಯನ್ನು ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಸಾರ್ವಜನಿಕ ಹಣದ ದುರ್ಬಳಕೆ ಸಂಶಯ
ಕರಪತ್ರಗಳ ಮುದ್ರಣಕ್ಕೆ ಯಾವುದಾದರೂ ಸರಕಾರಿ ನಿಧಿಯನ್ನು ಬಳಸಲಾಗಿದೆಯೇ ಎಂಬ ಸಂಶಯವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ಸಂಪೂರ್ಣ ವಿಚಾರದ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಸೇವಾದಳದ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ನಿದರ್ಶ, ಬಗರ್‌ಹುಕುಂ ಕಮಿಟಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಅಗಸರಹಳ್ಳಿ ನರಸಿಂಹಮೂರ್ತಿ, ಪುರಸಭಾ ನಾಮಿನಿ ಸದಸ್ಯ ಸುಗಂಧರಾಜು, ಚಂದ್ರಶೇಖರ್, ಸೈಯದ್ ನೂರ್, ರಂಗಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.