Pavagada News: ಪ್ರಸಾದ ಸೇವಿಸಿ 40ಕ್ಕೂ ಹೆಚ್ಚು ಜನ ಅಸ್ವಸ್ಥ; ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೆ. ಸೇವಾಲಾಲ್ ಪುರ ತಾಂಡಾದಲ್ಲಿ ದೇವರಪೂಜೆಯಲ್ಲಿ ಪ್ರಸಾದ ಸೇವಿಸಿದ ಬಳಿಕ 40ಕ್ಕೂ ಹೆಚ್ಚು ಜನರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡು, ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ. ಅಸ್ವಸ್ಥಗೊಂಡವರನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
-
ಪಾವಗಡ, ಜೂನ್ 27: ಪಾವಗಡ ತಾಲೂಕಿನ ಕೆ. ಸೇವಾಲಾಲ್ ಪುರ ತಾಂಡಾದಲ್ಲಿ ದೇವರಪೂಜೆ ವೇಳೆ ನೀಡಲಾದ ಪ್ರಸಾದ ಸೇವಿಸಿದ ಬಳಿಕ ಸುಮಾರು 40ಕ್ಕೂ ಹೆಚ್ಚು ಜನರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡು, ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ. ಅಸ್ವಸ್ಥಗೊಂಡವರನ್ನು ತಕ್ಷಣವೇ ಪಾವಗಡ (Pavagada News) ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಬಹುತೇಕರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾರಿಗೂ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಸಾದ ಸೇವನೆಯಿಂದ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಘಟನೆ ಸಂಬಂಧ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದ್ದು, ಅಸ್ವಸ್ಥತೆಗೆ ನಿಖರ ಕಾರಣ ವೈದ್ಯಕೀಯ ವರದಿ ಬಂದ ಬಳಿಕವೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ವರದಿ: ಇಮ್ರಾನ್ ಉಲ್ಲಾ, ಪಾವಗಡ)