Pavagada News: ಪಾವಗಡ ಜನರ ನಿದ್ದೆಗೆಡಿಸಿದ್ದ ಶಂಕಿತ ನಕ್ಸಲ್ ಉಪ್ಪಾರ್ ವೆಂಕಟೇಶ್ ಕೊನೆಗೂ ಬಂಧನ
Suspected Naxal Uppar Venkatesh: ಪಾವಗಡ ತಾಲೂಕಿನ ಕಸಬಾ ಹೋಬಳಿ ಕಡಮಲಕುಂಟೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶಂಕಿತ ನಕ್ಸಲ್ ಉಪ್ಪಾರ್ ವೆಂಕಟೇಶ್‌ನನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ ಕನಿಕಲಬಂಡೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
-
ಪಾವಗಡ: ನಾಡಬಾಂಬ್ ಸ್ಫೋಟ, ಹಣಕ್ಕಾಗಿ ಜೀವ ಬೆದರಿಕೆ ಮೂಲಕ ಪಾವಗಡ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಶಂಕಿತ ನಕ್ಸಲ್ ಕನಕಲಬೆಂಡೆಯ ಉಪ್ಪಾರ್ ವೆಂಕಟೇಶ್‌ನನ್ನು (Suspected Naxal Uppar Venkatesh) ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಕಡಮಲಕುಂಟೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಯಾಚರಣೆ ನಡೆದಿದೆ.
ಈ ಹಿಂದೆ ತಾಲೂಕಿನ ಕನಿಕಲಬಂಡೆ ಗ್ರಾಮದ ರೈತ ಕರಿಯಣ್ಣ ಎಂಬುವವರ ಹೊಲದ ಪಂಪ್‌ಸೆಟ್ ಬಳಿ ನಾಡಬಾಂಬ್ ಸ್ಫೋಟಿಸಿ ಹತ್ಯೆಗೆ ಯತ್ನಿಸಲಾಗಿತ್ತು. ಸಿಪಿಐ ಮತ್ತು ಸಿಪಿಎಂ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ ದೇವನ್ನ ದಳಂ' ಹೆಸರಿನಲ್ಲಿ ಪತ್ರ ಬರೆದು 5 ಲಕ್ಷ ರೂಪಾಯಿ ನೀಡುವಂತೆ ಆರೋಪಿ ಬೆದರಿಕೆ ಹಾಕಿದ್ದನು. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ತೀವ್ರ ಆತಂಕದಲ್ಲಿ ದಿನ ಕಳೆಯುವಂತಾಗಿತ್ತು.
ಎಎಸ್ಪಿ ಗೋಪಾಲ್ ನೇತೃತ್ವದಲ್ಲಿ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ವೃತ್ತನಿರೀಕ್ಷಕರಾದ ಸುರೇಶ್, ಕೊಟ್ರೇಶ್, ಹನುಮಂತರಾಯಪ್ಪ ಹಾಗೂ ಎಸ್‌ಐ ಸುನೀಲ್ ನೇತೃತ್ವದ ವಿಶೇಷ ಪೊಲೀಸ್ ತಂಡವು ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಅವಿತಿದ್ದ ಆರೋಪಿಯನ್ನು ಸೆರೆಹಿಡಿದಿದೆ.
Hassan News: ಸ್ನೇಹಿತರ ಜತೆ ಟ್ರಿಪ್ ಹೋಗಿದ್ದ ಯುವತಿ ಹಾಸನದ ಲಾಡ್ಜ್‌ನಲ್ಲಿ ಅನುಮಾನಾಸ್ಪದ ಸಾವು!
ಆರೋಪಿಯ ಬಂಧನದಿಂದ ಕನಿಕಲಬಂಡೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ವೆಂಕಟೇಶ್ ನಿಜವಾಗಿಯೂ ನಕ್ಸಲ್ ನಂಟು ಹೊಂದಿದ್ದಾನೆಯೇ ಅಥವಾ ನಕ್ಸಲ್ ಹೆಸರನ್ನು ಬಳಸಿ ವಸೂಲಿಗೆ ಇಳಿದಿದ್ದನೇ ಎಂಬ ಕೋನದಲ್ಲಿ ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.