ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ; ಶನಿವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ
Former minister Venkataramanappa Death: ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ (80) ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದರು. ಇವರ ಅಂತ್ಯಕ್ರಿಯೆ ಪಾವಗಡ ತಾಲೂಕಿನ ಸ್ವ ಗ್ರಾಮದ ಹನುಮಂತನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ.
ಪಾವಗಡದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನ ಪಡೆದ ಗಣ್ಯರು. -
ಪಾವಗಡ: ಹೃದಯಾಘಾತದಿಂದ ನಿಧನರಾದ ಮಾಜಿ ಸಚಿವ ವೆಂಕಟರಮಣಪ್ಪ (Venkataramanappa) (80) ಅವರ ಅಂತಿಮ ದರ್ಶನಕ್ಕೆ ಪಟ್ಟಣದ ಗುರುಭವನ ಮೈದಾನದಲ್ಲಿ ಶುಕ್ರವಾರ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರಾಜಕೀಯ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಿ ಸಾವಿರಾರು ಮಂದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಪಿ. ಅಶೋಕ್, ಮಾಜಿ ಸಚಿವ ಸೊಗಡು ಶಿವಣ್ಣ, ಆಂಧ್ರ ಪ್ರದೇಶದ ಮಾಜಿ ಸಚಿವ ರಘವೀರ್ ರೆಡ್ಡಿ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೇರಿದಂತೆ ಅನೇಕ ಗಣ್ಯರು, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಆಗಮಿಸಿ ಗೌರವ ನಮನ ಸಲ್ಲಿಸಿದರು.
ಇನ್ನು ಪಾವಗಡ ಜೆಡಿಎಸ್ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಆರ್.ಸಿ.ಅಂಜಿನಪ್ಪ, ತುಮಲ್ ಸದಸ್ಯ ಚನ್ನಮಲ್ಲಪ್ಪ, ವಕೀಲ ನಾಗೇಂದ್ರಪ್ಪ, ಮಧುಗಿರಿ ತಹಸೀಲ್ದಾರ್‌ಗಳಾದ ಶ್ರೀನಿವಾಸ್, ತಹಸೀಲ್ದಾರ್ ವರದರಾಜ್, ಎಇಇ ದೇಶಪಾಂಡೆ, ಇತರೆ ಸಾವಿರಾರು ಅಭಿಮಾನಿಗಳು ಪ್ರಾಥಿವ ಶರೀರವನ್ನು ದರ್ಶನ ಪಡೆದರು.
ಈ ವೇಳೆ ಮಾಜಿ ಸಚಿವರ ಕಿರಿಯ ಪುತ್ರ ಸ್ಥಳೀಯ ಶಾಸಕ ಎಚ್.ವಿ.ವೆಂಕಟೇಶ ಅವರು ಮಾತನಾಡಿ, ತಂದೆಯವರ ಅಗಲಿಕೆಯಿಂದ ತಾಲೂಕಿನ ಜನರಿಗೆ ಬಾರಿ ನಷ್ಟ ಉಂಟಾಗಿದೆ. ಜನರು ಅರ್ಧ ರಾತ್ರಿಯಲ್ಲಿ ಸಮಸ್ಯೆ ಹೇಳಿಕೊಂಡು ಬಂದರೂ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ. ನಾಳೆ ಸ್ವ ಗ್ರಾಮದ ಹನುಮಂತನಹಳ್ಳಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಿದ್ದಾರೆ.
ಸರಳತೆ, ಜನಸೇವೆ ಮೂಲಕ ಗುರುತಿಸಿಕೊಂಡಿದ್ದ ರಾಜಕಾರಣಿ
ಪಾವಗಡ ತಾಲೂಕಿನ ಹನುಮಂತನಹಳ್ಳಿ ಗ್ರಾಮದ ಹಿರಿಯ ರಾಜಕೀಯ ನಾಯಕ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ (80) ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಇದರಿಂದ ಜಿಲ್ಲೆಯ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹಲವು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರು, ಸರಳತೆ ಮತ್ತು ಜನಸೇವೆಯ ಮೂಲಕ ವಿಶೇಷ ಗುರುತಿಸಿಕೊಂಡಿದ್ದರು.
ವೆಂಕಟರಮಣಪ್ಪ ಅವರು ಪತ್ನಿ ಶಾರದಮ್ಮರನ್ನು ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಪುತ್ರಿ ಇದ್ದಾರೆ. ಹಿರಿಯ ಪುತ್ರ ಕುಮಾರಸ್ವಾಮಿ ಕುಟುಂಬದ ವಿದ್ಯಾಸಂಸ್ಥೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಕಿರಿಯ ಪುತ್ರ ಎಚ್.ವಿ. ವೆಂಕಟೇಶ್ ಪ್ರಸ್ತುತ ಪಾವಗಡ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯ ಜೀವನವನ್ನು ಗ್ರಾಮ ಮಟ್ಟದಿಂದ ಆರಂಭಿಸಿದ್ದ ವೆಂಕಟರಮಣಪ್ಪ ಅವರು 1980-81ರಲ್ಲಿ ಪೊನ್ನಸಮುದ್ರ ಗ್ರಾಮದಿಂದ ಮಂಡಲ್ ಪಂಚಾಯತ್ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಬಳಿಕ ಅವರ ರಾಜಕೀಯ ಪಯಣ ನಿರಂತರವಾಗಿ ಬೆಳೆಯುತ್ತಾ, ವಿರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದರು.
ನಂತರ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1999ರಲ್ಲಿ ಮತ್ತೊಮ್ಮೆ ಶಾಸಕರಾಗಿ ಗೆಲುವು ಸಾಧಿಸಿದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ ಅವರು, ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಹಾಗೂ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದರು.
2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದ ವೆಂಕಟರಮಣಪ್ಪ ಅವರು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸುಮಾರು 14 ತಿಂಗಳ ಕಾಲ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಗ್ರಾಮೀಣ ರಾಜಕೀಯದಿಂದ ಸಚಿವ ಸ್ಥಾನವರೆಗೆ ಏರಿದ ಅವರ ಬದುಕು ಅನೇಕ ಯುವ ರಾಜಕೀಯ ನಾಯಕರಿಗೆ ಮಾದರಿಯಾಗಿತ್ತು. ಇವರ ನಿಧನದಿಂದ ಪಾವಗಡ ಭಾಗವು ಅನುಭವ ಸಂಪನ್ನ ನಾಯಕನನ್ನು ಕಳೆದುಕೊಂಡಂತಾಗಿದೆ.