ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

GT vs RR: ಶುಭಮನ್‌ ಗಿಲ್‌ ಶತಕ, ರಾಜಸ್ಥಾನ್‌ಗೆ ನಿರಾಶೆ, ಆರ್‌ಸಿಬಿಗೆ ಫೈನಲ್‌ನಲ್ಲಿ ಗುಜರಾತ್‌ ಎದುರಾಳಿ!

GT vs RR Match Highlights: ಶುಭಮನ್‌ ಗಿಲ್‌ ಶತಕದ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಫೈನಲ್‌ಗೆ ಪ್ರವೇಶ ಮಾಡಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

IPL 2026: ರಾಜಸ್ಥಾನ್‌ ಎದುರು ಗೆದ್ದು ಫೈನಲ್‌ಗೇರಿದ ಗುಜರಾತ್‌!

ರಾಜಸ್ಥಾನ್‌ ಎದುರು ಗುಜರಾತ್‌ಗೆ ಭರ್ಜರಿ ಜಯ. -

Profile
Ramesh Kote May 29, 2026 11:36 PM

ಚಂಡೀಗಢ: ಶುಭಮನ್‌ ಗಿಲ್‌ (Shubman Gill) ಅವರ ಭರ್ಜರಿ ಶತಕದ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ (GT vs RR) ರಾಜಸ್ಥಾನ್‌ ರಾಯಲ್ಸ್‌ ಎದುರು 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತು. ಮೇ 31 ರಂದು ಭಾನುವಾರ ತನ್ನ ತವರು ಅಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಮೊದಲನೇ ಕ್ವಾಲಿಫೈಯರ್‌ ಗೆದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳುರು ಎದುರು ಎರಡನೇ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಶುಕ್ರವಾರ ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್‌ ನೀಡಿದ್ದ 215 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡ, ಶುಭಮನ್‌ ಗಿಲ್‌ (104 ರನ್‌) ಹಾಗೂ ಸಾಯಿ ಸುದರಶನ್‌ (58 ರನ್‌) ಅವರ 167 ರನ್‌ಗಳ ಜೊತೆಯಾಟದ ಬಲದಿಂದ 18.4 ಓವರ್‌ಗಳಿಗೆ ಮೂರು ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿ ಗೆದ್ದು ಬೀಗಿತು. ಇದರೊಂದಿಗೆ ಎರಡನೇ ಕಪ್‌ ಗೆಲುವಿನ ಸನಿಹವಾಯಿತು. ಇನ್ನು ವೈಭವ್‌ ಸೂರ್ಯವಂಶಿ ಅವರ ಬ್ಯಾಟಿಂಗ್‌ ಹೊರತಾಗಿಯೂ ಬೌಲಿಂಗ್‌ ವೈಫಲ್ಯದಿಂದ ರಾಜಸ್ಥಾನ್‌ ರಾಯಲ್ಸ್‌ ಸೋಲಿನ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತು.

GT vs RR: 1000 ಐಪಿಎಲ್‌ ರನ್‌ ಪೂರ್ಣಗೊಳಿಸಿ ನೂತನ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಗಿಲ್‌-ಸುದರ್ಶನ್‌ ಜುಗಲ್‌ಬಂದಿ

ಇನಿಂಗ್ಸ್‌ ಆರಂಭಿಸಿದ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಪವರ್‌ಪ್ಲೇನಲ್ಲಿ ವಿಕೆಟ್‌ ನೀಡದೆ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ಆರ್‌ಆರ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಮೊದಲನೇ ವಿಕೆಟ್‌ಗೆ 167 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ ತಂಡವನ್ನು ಬಹುತೇಕ ಗೆಲುವಿನ ಸನಿಹ ತಂದರು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಸುದರ್ಶನ್‌, 32 ಎಸೆತಗಳಲ್ಲಿ 58 ರನ್‌ ಗಳಿಸಿದ ಬಳಿಕ, ಕಳೆದ ಪಂದ್ಯದಂತೆ ಇಲ್ಲಿಯೂ ಹಿಟ್‌ ವಿಕೆಟ್‌ ಮಾಡಿಕೊಂಡು ಔಟ್‌ ಆದರು.



ಐದನೇ ಐಪಿಎಲ್‌ ಶತಕ ಸಿಡಿಸಿದ ಗಿಲ್‌

ಈ ಪಂದ್ಯದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡಿದ ನಾಯಕ ಶುಭಮನ್‌ ಗಿಲ್‌, ಆರ್‌ಆರ್‌ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಅವರು 15ನೇ ಓವರ್‌ವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಅವರು ಆಡಿದ 53 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 15 ಮನಮೋಹಕ ಬೌಂಡರಿಗಳೊಂದಿಗೆ 104 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ 5ನೇ ಐಪಿಎಲ್‌ ಶತಕವನ್ನು ಪೂರ್ಣಗೊಳಿಸಿದರು ಹಾಗೂ ಗುಜರಾತ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



214 ರನ್‌ ಕಲೆ ಹಾಕಿದ್ದ ರಾಜಸ್ಥಾನ್‌ ರಾಯಲ್ಸ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಕೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ, ವೈಭವ್‌ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 214 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಜಿಟಿಗೆ 215 ರನ್‌ಗಳ ಗುರಿಯನ್ನು ನೀಡಿತ್ತು. ಗುಜರಾತ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಕಗಿಸೊ ರಬಾಡ ಹಾಗೂ ಜೇಸನ್‌ ಹೋಲ್ಡರ್‌ ಎರಡು ವಿಕೆಟ್‌ ಕಿತ್ತಿದ್ದರು.

IPL 2026: ಯಾರಿಂದಲೂ ಸಾಧ್ಯವಾಗದ ಮತ್ತೊಂದು ದೊಡ್ಡ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ರಾಜಸ್ಥಾನ್‌ ರಾಯಲ್ಸ್‌ಗೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್‌ ಅವರನ್ನು ಮೊಹಮ್ಮದ್‌ ಸಿರಾಜ್‌ ಮೊದಲನೇ ಓವರ್‌ನಲ್ಲಿಯೇ ಔಟ್‌ ಮಾಡಿದ್ದರು. ನಂತರ ಎರಡನೇ ಓವರ್‌ನಲ್ಲಿ ಧ್ರುವ್‌ ಜುರೆಲ್‌ ಅವರನ್ನು ಕಗಿಸೊ ರಬಾಡ ಔಟ್‌ ಮಾಡಿದ್ದರು. ನಂತರ ಮೂರನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ವೈಭವ್‌ ಸೂರ್ಯವಂಶಿ 127 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಆರ್‌ಆರ್‌ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಜಡೇಜಾ 45 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದರು.



ಸತತ ಎರಡನೇ ಬಾರಿ ಶತಕ ವಂಚಿತ ವೈಭವ್‌

ಪಂದ್ಯದ ಆರಂಭದಲ್ಲಿ ನಿರಂತರವಾಗಿ ವಿಕೆಟ್‌ ಉರುಳುತ್ತಿದ್ದ ಕಾರಣ ವೈಭವ್‌ ಸೂರ್ಯವಂಶಿ ಆರಂಭದಲ್ಲಿ ನಿಧಾನಗತಿಯ ಆಟವನ್ನು ಆಡಿದರು. ಆದರೆ, ರವೀಂದ್ರ ಜಡೇಜಾ ಕ್ರೀಸ್‌ಗೆ ಬಂದ ಬಳಿಕ ವೈಭವ್‌ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದರು. ಅವರು ಈ ಪಂದ್ಯದಲ್ಲಿ 47 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 96 ರನ್‌ ಸಿಡಿಸಿದರು. ಇನ್ನೇನು ಶತಕ ಸಿಡಿಸುವ ಸನಿಹದಲ್ಲಿ ಕಗಿಸೊ ರಬಾಡಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಸತತ ಎರಡನೇ ಬಾರಿಯೂ ಶತಕ ವಂಚಿತರಾದರು. ಡೆತ್‌ ಓವರ್‌ಗಳಲ್ಲಿ ಡೊನೊವಾನ್‌ ಫೆರೆರಾ ಸ್ಪೋಟಕ ಬ್ಯಾಟಿಂಗ್‌ ನಡೆಸಿ 11 ಎಸೆತಗಳಲ್ಲಿ ಅಜೇಯ 38 ರನ್‌ ಚಚ್ಚಿದರು. ಆಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಲು ಸಾಧ್ಯವಾಯಿತು.