Tumkur News: ನಾಡು, ನೆಲ, ಸಂಸ್ಕೃತಿ, ಭಾಷೆ, ದೇಶ ಮರೆತರೆ ಅದಕ್ಕಿಂತ ದೊಡ್ಡ ದೇಶ ದ್ರೋಹ ಮತ್ತೊಂದಿಲ್ಲ: ಹಿರೇಮಗಳೂರು ಕಣ್ಣನ್
Tumkur News: ಜಗತ್ತಿನ ಎಲ್ಲ ದೇಶಗಳ ಹುಟ್ಟಿದ ದಿನಾಂಕವನ್ನು ಗುರುತಿಸಲು ಸಾಧ್ಯವಿದೆ. ಆದರೆ ಭಾರತ ದೇಶಕ್ಕೆ ಮಾತ್ರ ಹುಟ್ಟಿನ ದಿನಾಂಕವಿಲ್ಲ. ಯಾವ ದೇಶಕ್ಕೆ ಹುಟ್ಟಿನ ದಿನಾಂಕವಿರುವುದಿಲ್ಲವೋ ಆ ದೇಶಕ್ಕೆ ಸಾವಿನ ದಿನಾಂಕವೂ ಇರುವುದಿಲ್ಲ. ಸನಾತನ ಭಾರತಕ್ಕೆ ಅಷ್ಟು ಆಳವಾದ ಇತಿಹಾಸವಿದೆ ಎಂದು ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ತಿಳಿಸಿದ್ದಾರೆ.
ತುಮಕೂರು, ಜ.20, 2025: ದೇಶ ಹಾಗೂ ಸಂಸ್ಕೃತಿಗೆ ದ್ರೋಹಿಯಾಗಿ ಬದುಕುವುದಕ್ಕಿಂತ ದೇಹಿಯಾಗಿ ಬದುಕುವುದೇ ಲೇಸು. ನಾಡು, ನೆಲ, ಸಂಸ್ಕೃತಿ, ಭಾಷೆ, ದೇಶ ಮರೆತರೆ ಅದಕ್ಕಿಂತ ದೊಡ್ಡ ದೇಶ ದ್ರೋಹ ಮತ್ತೊಂದಿಲ್ಲ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾಲಯದ ಪ್ರೇರಣಾ ಉಪನ್ಯಾಸ ಮಾಲೆಯ ಅಂಗವಾಗಿ ‘ಭಾಷೆ, ಸಂಸ್ಕೃತಿ ಮತ್ತು ಯುವಜನತೆ’ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಜಗತ್ತಿನ ಎಲ್ಲ ದೇಶಗಳ ಹುಟ್ಟಿದ ದಿನಾಂಕವನ್ನು ಗುರುತಿಸಲು ಸಾಧ್ಯವಿದೆ. ಆದರೆ ಭಾರತ ದೇಶಕ್ಕೆ ಮಾತ್ರ ಹುಟ್ಟಿನ ದಿನಾಂಕವಿಲ್ಲ. ಯಾವ ದೇಶಕ್ಕೆ ಹುಟ್ಟಿನ ದಿನಾಂಕವಿರುವುದಿಲ್ಲವೋ ಆ ದೇಶಕ್ಕೆ ಸಾವಿನ ದಿನಾಂಕವೂ ಇರುವುದಿಲ್ಲ. ಸನಾತನ ಭಾರತಕ್ಕೆ ಅಷ್ಟು ಆಳವಾದ ಇತಿಹಾಸವಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ಮಹಾರಾಜ್, ಕನ್ನಡ ಮಾತನಾಡಲು ಕಷ್ಟಪಡುವ ನಾವು ನವೆಂಬರ್ ಕನ್ನಡಿಗರಾಗಿದ್ದೇವೆ. ಮೊದಲು ನಮ್ಮ ದೇಶವನ್ನು ಪ್ರೀತಿಸಬೇಕು. ರಾಷ್ಟ್ರೀಯತೆ, ಜೀವನ, ಧರ್ಮದ ಮೂಲಗಳನ್ನು ಅರಿಯಬೇಕು ಎಂದರು.
ವಿವೇಕಾನಂದರ ವಿಚಾರಗಳಿಂದ ಎಷ್ಟೋ ಜನ ಭಾರತದ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ವಿವೇಕಾನಂದರ ಧ್ಯೇಯಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಭವ್ಯ ಭಾರತದ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸುವ ಉದ್ದೇಶದಿಂದ ಪ್ರೇರಣಾ ಉಪನ್ಯಾಸ ಮಾಲೆಯನ್ನು ಆರಂಭಿಸಲಾಗಿದೆ. ಅಂಕ ಮತ್ತು ಪದವಿಗಳಿಂದ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ, ನಿಷ್ಠೆಯಿಂದ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ಈ ಸುದ್ದಿಯನ್ನೂ ಓದಿ | Makeup Kit Awareness 2025: ಸೌಂದರ್ಯವರ್ಧಕಗಳ ಬಾಳಿಕೆಗೆ ಈ 5 ಟಿಪ್ಸ್ ಫಾಲೋ ಮಾಡಿ
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್, ಮೌಲ್ಯಮಾಪನ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ಬಿ. ರವೀಂದ್ರ ಕುಮಾರ್ ಉಪಸ್ಥಿತರಿದ್ದರು. ಡಾ. ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು. ಡಾ. ಅರುಣ್ ಕುಮಾರ್ ವಂದಿಸಿದರು.