Tumkur News: ಬ್ಯಾಕ್‌ಬೆಂಚ್ ಗುಡ್‌ಬೈ; ಶ್ರೀ ಸತ್ಯಸಾಯಿ ಗುರುಕುಲಮ್‌ನಲ್ಲಿ U ಆಕಾರದ ಆಸನ ವ್ಯವಸ್ಥೆ: ಗಮನ ಸೆಳೆದ ಪ್ರಯೋಗ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಕಾರುಣ್ಯ ನಿಕೇತನಂ ಶಾಲೆಯಲ್ಲಿ ಬ್ಯಾಕ್‌ಬೆಂಚ್ ವ್ಯವಸ್ಥೆಗೆ ವಿದಾಯ ಹೇಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಮ್ ಸಂಸ್ಥೆಯ ಅಧೀನದಲ್ಲಿರುವ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ 8ನೇ ತರಗತಿಯಲ್ಲಿ ವಿನೂತನ ಪ್ರಯೋಗ ಆರಂಭಿಸಲಾಗಿದೆ. ವಿದ್ಯಾರ್ಥಿಗಳನ್ನು ಯು ಆಕಾರದಲ್ಲಿ ಕೂರಿಸಲಾಗುತ್ತಿದೆ.
ಗಾಣದಹುಣಸೆಯಲ್ಲಿರುವ ಕಾರುಣ್ಯನಿಕೇತನಮ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯು-ಆಕಾರದ ಆಸನ ವ್ಯವಸ್ಥೆ -
ತುಮಕೂರು, ಜೂ. 4: ಜಿಲ್ಲೆಯ ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಕಾರುಣ್ಯ ನಿಕೇತನಂ ಶಾಲೆಯಲ್ಲಿ ಬ್ಯಾಕ್‌ಬೆಂಚ್ ವ್ಯವಸ್ಥೆಗೆ ವಿದಾಯ ಹೇಳಲಾಗಿದೆ (Tumkur News). ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಮ್ ಸಂಸ್ಥೆಯ ಅಧೀನದಲ್ಲಿರುವ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿಯಲ್ಲಿ ವಿನೂತನ ಪ್ರಯೋಗ ಆರಂಭಿಸಲಾಗಿದೆ. ವಿದ್ಯಾರ್ಥಿಗಳನ್ನು ಯು ಆಕಾರದಲ್ಲಿ ಕೂರಿಸಿ ಪಾಠ ಬೋಧಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಮುಂದಿನ ಬೆಂಚ್, ಹಿಂದಿನ ಬೆಂಚ್ ಎಂಬ ತಾರತಮ್ಯ ನಿವಾರಿಸಿ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಶಾಲೆಯ ಪ್ರಧಾನ ಪಾಲಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಕೇರಳಂ ಮತ್ತು ತಮಿಳುನಾಡಿನಲ್ಲಿ ಈ ಮಾದರಿ ಯಶಸ್ವಿಯಾಗಿದ್ದು, ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯೊಂದರಲ್ಲಿಯೂ ಇದೇ ರೀತಿಯ ಪ್ರಯೋಗ ನಡೆದಿರುವುದು ಗಮನಾರ್ಹ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಮಲಯಾಳಂ ಚಿತ್ರ ʼಸ್ಥಾನಾರ್ಥಿ ಶ್ರೀಕುಟ್ಟನ್ʼನಲ್ಲಿ ಯು-ಆಕಾರದ ಆಸನ ವ್ಯವಸ್ಥೆಯನ್ನು ತೋರಿಸಲಾಗಿತ್ತು. ಇದರಿಂದ ಪ್ರೇರಣೆಗೊಂಡ ಕೇರಳಂನ ಹಲವು ಶಾಲೆಗಳು ಈ ಮಾದರಿಯನ್ನು ಅಳವಡಿಸಿಕೊಂಡವು. ಅಲ್ಲಿ ಬ್ಯಾಕ್‌ಬೆಂಚರ್ ಸಂಸ್ಕೃತಿಗೆ ತಡೆ ಹಾಕುವ ಉದ್ದೇಶ ಹೊಂದಲಾಗಿತ್ತು. ಬಳಿಕ ತಮಿಳುನಾಡು ಸರ್ಕಾರವೂ ಕೆಲವು ಶಾಲೆಗಳಲ್ಲಿ ಪೈಲಟ್ ಯೋಜನೆಯಾಗಿ ಯು-ಆಕಾರದ ಆಸನ ವ್ಯವಸ್ಥೆಗೆ ಅನುಮತಿ ನೀಡಿತ್ತು.
ಅನುಕೂಲಗಳೇನು?
ʼʼಈ ವ್ಯವಸ್ಥೆಯಿಂದ ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರನ್ನು ಸಮಾನವಾಗಿ ನೋಡಬಹುದಾಗಿದ್ದು, ಶಿಕ್ಷಕರಿಗೂ ಪ್ರತಿಯೊಬ್ಬ ವಿದ್ಯಾರ್ಥಿಯತ್ತ ಗಮನ ಹರಿಸಲು ಅನುಕೂಲವಾಗುತ್ತದೆʼʼ ಎಂದು ಶಾಲೆಯ ವಾರ್ಡನ್ ಅನಿಲ್ ಕುಮಾರ್ ಹೇಳಿದ್ದಾರೆ.
ʼʼಒಂದೇ ಸ್ಥಳದಲ್ಲಿ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಕುತ್ತಿಗೆ ನೋವು ಬರುವ ಸಾಧ್ಯತೆ ಇರುವುದರಿಂದ, ಎಲ್ಲ ವಿದ್ಯಾರ್ಥಿಗಳಿಗೂ ರೊಟೇಶನ್ ಮಾದರಿಯನ್ನು ಅಳವಡಿಸಲಾಗುತ್ತದೆʼʼ ಎಂದು ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಈ ರೀತಿಯ ಆಸನ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಪಾಠದತ್ತ ಗಮನ ಹೆಚ್ಚುತ್ತದೆ ಎಂಬುದು ವೈಜ್ಞಾನಿಕ ಅಧ್ಯಯನಗಳಿಂದ ದೃಢಪಟ್ಟಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಇತ್ತೀಚೆಗೆ ಸರ್ಕಾರವನ್ನು ಒತ್ತಾಯಿಸಿದ್ದರು.