ಭೂಗತ ಪಾತಕಿ ರವಿ ಪೂಜಾರಿ ತಾಯಿ ನಿಧನ; ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಕೋರ್ಟ್ ಅನುಮತಿ
ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರ್ತಿ ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಇವರಿಗೆ 86 ವರ್ಷ ವಯಸ್ಸಾಗಿತ್ತು. ಅವರಿಗೆ ಐವರು ಮಕ್ಕಳು. ಶನಿವಾರ ಬೆಳಗ್ಗೆ ಅವರ ಹಿರಿಯ ಮನೆ ಮಲ್ಪೆಯ ನೆರ್ಗಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
-
ಉಡುಪಿ: ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ (Ravi Pujari) ಅವರ ತಾಯಿ ಸುಶೀಲಾ ಪೂಜಾರ್ತಿ ಹೃದಯಾಘಾತದಿಂದ ಗುರುವಾರ(ನ.12) ರಾತ್ರಿ ನಿಧನ ಹೊಂದಿದ್ದಾರೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿ ಉಡುಪಿಯ ಸ್ವಗ್ರಾಮಕ್ಕೆ ಆಗಮಿಸಲಿದ್ದಾರೆ.
ಸುಶೀಲಾ ಪೂಜಾರ್ತಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರಿಗೆ ಐವರು ಮಕ್ಕಳು. ಈ ಪೈಕಿ ಇಬ್ಬರು ಪುತ್ರಿಯರು ಹಾಗೂ ರವಿ ಪೂಜಾರಿ ಸೇರಿದಂತೆ ಮೂವರು ಗಂಡು ಮಕ್ಕಳಿದ್ದಾರೆ. ಶನಿವಾರ ಬೆಳಗ್ಗೆ ಅವರ ಹಿರಿಯ ಮನೆ ಮಲ್ಪೆಯ ನೆರ್ಗಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿಗೆ ಉಡುಪಿಯ ಸ್ವಗ್ರಾಮಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ನ್ಯಾಯಾಲಯದ ಆದೇಶದಂತೆ ರವಿ ಪೂಜಾರಿಯನ್ನು ಶುಕ್ರವಾರ ಮಧ್ಯಾಹ್ನ ಪೊಲೀಸ್ ಎಸ್ಕಾರ್ಟ್ ಭದ್ರತೆಯಲ್ಲಿ ಉಡುಪಿಗೆ ಕರೆತರಲಾಗುತ್ತದೆ. ನವೆಂಬರ್ 14ರಂದು ಬೆಳಗ್ಗೆ 11 ಗಂಟೆಗೆ ಮಲ್ಪೆಯಲ್ಲಿ ನಿಗದಿಯಾಗಿರುವ ತಾಯಿಯ ಅಂತ್ಯಕ್ರಿಯೆ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡ ಬಳಿಕ ಆತನನ್ನು ಮತ್ತೆ ಕರೆದುಕೊಂಡು ಹೋಗುವಂತೆ ನ್ಯಾಯಾಲಯ ಸೂಚಿಸಿದೆ.
ರವಿ ಪೂಜಾರಿಯನ್ನು ಉಡುಪಿಗೆ ಕರೆತರಲು ಅಗತ್ಯ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸುವಂತೆ ಬೆಂಗಳೂರಿನ ಆಡುಗೋಡಿಯ ಸಿಟಿ ಆರ್ಮ್ಡ್ ರಿಸರ್ವ್ (ದಕ್ಷಿಣ) ವಿಭಾಗದ ಡಿಸಿಪಿ ಹಾಗೂ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಬೆಂಗಳೂರಿನ ಜೈಲು ಇಲಾಖೆಯ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಹೆಚ್ಚುವರಿಯಾಗಿ ಉಡುಪಿ ಜಿಲ್ಲಾ ಪೊಲೀಸರಿಂದ ಸ್ಥಳೀಯ ಭದ್ರತೆ ಒದಗಿಸಲಾಗುತ್ತದೆ. ಎಸ್ಕಾರ್ಟ್ ವ್ಯವಸ್ಥೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.