ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಜೆಪಿ ಭದ್ರಕೋಟೆ ಉಡುಪಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ 'ಸಿಂಗಂ' ಅಣ್ಣಾಮಲೈ ಗುಡುಗು: ಯುಪಿಐ ಶುಲ್ಕದ ವಿರುದ್ಧ ಎಚ್ಚರಿಕೆ

Annamalai Criticises Centre: ಒಂದು ದಶಕಕ್ಕೂ ಹೆಚ್ಚು ಸಮಯದ ಬಳಿಕ ಐಪಿಎಸ್ ಮಾಜಿ ಅಧಿಕಾರಿ ಅಣ್ಣಾಮಲೈ ಮತ್ತೆ ಉಡುಪಿಗೆ ಮರಳಿದ್ದಾರೆ. ಈ ಬಾರಿ ಅಪರಾಧಗಳನ್ನು ಹತ್ತಿಕ್ಕಲು ಬಂದಿಲ್ಲ. ಬದಲಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಯೊಂದನ್ನು ಪ್ರಶ್ನಿಸಲು ಬಂದಿದ್ದಾರೆ. ಯುಪಿಐ ಶುಲ್ಕದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಅವರು ವಾಕ್ಪ್ರಹಾರ ನಡೆಸಿದ್ದಾರೆ.

ಬಿಜೆಪಿ ಭದ್ರಕೋಟೆ ಉಡುಪಿಯಲ್ಲಿ ಕೇಂದ್ರದ ವಿರುದ್ಧ ಅಣ್ಣಾಮಲೈ ಗುಡುಗು

ಅಣ್ಣಾಮಲೈ (ಸಂಗ್ರಹ ಚಿತ್ರ) -

Priyanka P
Priyanka P Oct 26, 2026 7:19 PM

ಉಡುಪಿ, ಅ. 26: ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ (K Annamalai) ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ʼಸಿಂಗಂʼ ಎನಿಸಿಕೊಂಡಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಸಮಯದ ಬಳಿಕ ಐಪಿಎಸ್ ಮಾಜಿ ಅಧಿಕಾರಿ ಅಣ್ಣಾಮಲೈ ಮತ್ತೆ ಕರಾವಳಿಯ ಈ ಊರಿಗೆ ಮರಳಿದ್ದಾರೆ. ಆದರೆಈ ಬಾರಿ ಅಪರಾಧಗಳನ್ನು ಹತ್ತಿಕ್ಕಲು ಬಂದಿಲ್ಲ. ಬದಲಾಗಿ ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರದ ನೀತಿಯೊಂದನ್ನು ಪ್ರಶ್ನಿಸಲು ಬಂದಿದ್ದಾರೆ.

ತಮಿಳುನಾಡಿನಲ್ಲಿ ಈ ಹಿಂದೆ ಬಿಜೆಪಿಯ ನೇತೃತ್ವ ವಹಿಸಿದ್ದ ಅಣ್ಣಾಮಲೈ ಇದೀಗ 'ವಿ ದಿ ಲೀಡರ್ಸ್' ಎಂಬ ಹೆಸರಿನೊಂದಿಗೆ ತಮ್ಮದೇ ಆದ ರಾಜಕೀಯ ಚಳವಳಿಯನ್ನು ಆರಂಭಿಸಿದ್ದಾರೆ. ಉಡುಪಿಯಲ್ಲಿ ನಡೆದ ಚಿಲ್ಲರೆ ವ್ಯಾಪಾರಿಗಳ ಸಮಾವೇಶದಲ್ಲಿ ಮಾತನಾಡಿದ ಅಣ್ಣಾಮಲೈ, ಏಕೀಕೃತ ಪಾವತಿ ವ್ಯವಸ್ಥೆ (UPI) ಮೂಲಕ ನಡೆಯುವ ವಹಿವಾಟುಗಳ ಮೇಲಿನ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕದಿಂದ ಸಣ್ಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಉಚಿತ ವಹಿವಾಟುಗಳ ಭರವಸೆಯೊಂದಿಗೆ ಬೆಳವಣಿಗೆ ಕಂಡಿರುವ ಡಿಜಿಟಲ್ ಪಾವತಿ ವ್ಯವಸ್ಥೆಯಿಂದ ಆದಾಯ ಸಂಗ್ರಹಿಸುವುದಕ್ಕಿಂತ ಸ್ಥಳೀಯ ವ್ಯಾಪಾರಿಗಳ ಜೀವನೋಪಾಯವನ್ನು ರಕ್ಷಿಸುವುದು ಹೆಚ್ಚು ಮುಖ್ಯ ಎಂದು ಅವರು ವಾದಿಸಿದರು.

“ಯುಪಿಐ ಎಂಬುದು ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿಯಿದ್ದಂತೆ. ಒಂದೇ ಬಾರಿಗೆ ನೂರು ಮೊಟ್ಟೆಗಳನ್ನು ಪಡೆಯುವ ನಿರೀಕ್ಷೆಯಲ್ಲಿ ಆ ಕೋಳಿಯನ್ನೇ ಕೊಂದರೆ, ಕೊನೆಗೆ ಏನೂ ಉಳಿಯುವುದಿಲ್ಲ” ಎಂದು ಅಣ್ಣಾಮಲೈ ಹೇಳಿದರು. ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವುದರಿಂದ, ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ದೈನಂದಿನ ಜೀವನದ ಭಾಗವಾಗಿಸಿರುವ ವ್ಯವಸ್ಥೆಯೇ ದುರ್ಬಲಗೊಳ್ಳಬಹುದು ಎಂದು ಅವರು ಎಚ್ಚರಿಸಿದರು.

“ಸಿಜೆಪಿಯನ್ನು ಎಂದಿಗೂ ಬೆಂಬಲಿಸಲ್ಲ”: ಅಣ್ಣಾಮಲೈ ಸ್ಪಷ್ಟನೆ

ಇದಕ್ಕೆ ಪ್ರತಿಕ್ರಿಯೆಯಾಗಿ, ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ವ್ಯಾಪಾರಿಗಳ ಸುಮಾರು ಶೇ. 96ರಷ್ಟು ವಹಿವಾಟುಗಳು ಬಾಧಿತವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಶೂನ್ಯ ಎಂಡಿಆರ್ ಶುಲ್ಕದ ನಿಯಮಗಳ ಅಡಿಯಲ್ಲಿ ಬರುವ ಸಣ್ಣ ವ್ಯಾಪಾರಿಗಳಿಗೆ ಈ ಹಿಂದಿನಂತೆಯೇ ಶುಲ್ಕ ವಿನಾಯಿತಿ ಮುಂದುವರಿಯಲಿದೆ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.

ಬಿಜೆಪಿಯ ಭದ್ರಕೋಟೆಯಾಗಿರುವ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಹಲವು ವರ್ಷಗಳಿಂದ ಪ್ರಬಲ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಇಂತಹ ರಾಜಕೀಯ ಸೂಕ್ಷ್ಮ ಪ್ರದೇಶದಲ್ಲಿ ಅಣ್ಣಾಮಲೈ ಕೇಂದ್ರ ಸರ್ಕಾರದ ನೀತಿಯನ್ನು ಟೀಕಿಸಿರುವುದು ಮಹತ್ವ ಪಡೆದಿದೆ. ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದಿನಗಳಿಂದ ಹಿಡಿದು, ಬಿಜೆಪಿ ಪಾಳಯದೊಂದಿಗಿನ ಒಡನಾಟದವರೆಗೆ ಅಣ್ಣಾಮಲೈ ಈ ಭಾಗದ ಜನರಿಗೆ ಪರಿಚಿತ ವ್ಯಕ್ತಿಯಾಗಿದ್ದಾರೆ.

ಅಂದಹಾಗೆ, ಅಣ್ಣಾಮಲೈ ಅವರಿಗೆ ಉಡುಪಿಯೊಂದಿಗಿನ ನಂಟು 2013ರ ಸೆಪ್ಟೆಂಬರ್‌ನಲ್ಲಿ ಆರಂಭವಾಯಿತು. ಆಗ ಅವರು ಕಾರ್ಕಳದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ತಮ್ಮ ಪೊಲೀಸ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2015ರ ಜನವರಿ 1ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅವರು, 2016ರ ಜುಲೈನಲ್ಲಿ ಚಿಕ್ಕಮಗಳೂರಿಗೆ ವರ್ಗಾವಣೆಯಾಗುವವರೆಗೆ ಸೇವೆ ಸಲ್ಲಿಸಿದರು. ಈ ಎರಡು ಹುದ್ದೆಗಳಲ್ಲಿ ಒಟ್ಟಾರೆಯಾಗಿ ಸುಮಾರು ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಅವರು, ಸಿಂಗಂ ಎಂದೇ ಗುರುತಿಸಿಕೊಂಡರು.