ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಳ್ಳಿಯ ಮಡಿಲಲ್ಲಿ ಪ್ರಕೃತಿ ಬೆಸುಗೆ; ಅಕ್ಟೋಬರ್ 4ರಂದು ಆಲೂರಿನಲ್ಲಿ ಚಿತ್ರಕೂಟ ಆಯುರ್ವೇದ ಹಬ್ಬ 2026

ಒತ್ತಡದಲ್ಲಿ ಬದುಕುತ್ತಿರುವ ಇಂದಿನ ಪೀಳಿಗೆಗೆಆಯುರ್ವೇದವನ್ನು ನೈಜ ಗ್ರಾಮೀಣ ಪರಿಸರದಲ್ಲಿ ಪರಿಚಯಿಸುವ ವಿನೂತನ ಪ್ರಯತ್ನವೊಂದು ಕರಾವಳಿಯಲ್ಲಿ ನಡೆಯಲಿದೆ. ಇದೇ ಭಾನುವಾರ ‘ಚಿತ್ರಕೂಟ ಆಯುರ್ವೇದ ಹಬ್ಬ 2026’ ಅನ್ನು ಆಯೋಜಿಸಲಾಗಿದೆ. ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ನಿತ್ಯಜೀವನದ ಆರೋಗ್ಯಕರ ಶೈಲಿ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸಲು ಕುಟುಂಬ ಸಮೇತ ಭೇಟಿ ನೀಡುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಅಕ್ಟೋಬರ್ 4ರಂದು ಆಲೂರಿನಲ್ಲಿ ಚಿತ್ರಕೂಟ ಆಯುರ್ವೇದ ಹಬ್ಬ 2026

ಅಕ್ಟೋಬರ್ 4ರಂದು ಆಲೂರಿನಲ್ಲಿ ಚಿತ್ರಕೂಟ ಆಯುರ್ವೇದ ಹಬ್ಬ 2026 -

Vishakha Bhat Heggar
Vishakha Bhat Heggar Oct 1, 2026 1:59 PM

ಉಡುಪಿ: ಆಧುನಿಕ ಜೀವನಶೈಲಿ ಹಾಗೂ ಪ್ಯಾಕೆಟ್ ಆಹಾರ ಹಾಗೂ ಡೆಡ್‌ಲೈನ್‌ಗಳ ಒತ್ತಡದಲ್ಲಿ ಬದುಕುತ್ತಿರುವ ಇಂದಿನ ಪೀಳಿಗೆಗೆ ಆಯುರ್ವೇದವನ್ನು ನೈಜ ಗ್ರಾಮೀಣ ಪರಿಸರದಲ್ಲಿ ಪರಿಚಯಿಸುವ ವಿನೂತನ ಪ್ರಯತ್ನವೊಂದು ಕರಾವಳಿಯಲ್ಲಿ ನಡೆಯಲಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಇದೇ ಅಕ್ಟೋಬರ್ 4ರ ಭಾನುವಾರದಂದು ‘ಚಿತ್ರಕೂಟ ಆಯುರ್ವೇದ ಹಬ್ಬ 2026’ ಅನ್ನು ಆಯೋಜಿಸಲಾಗಿದೆ.

‘ಆಯುರ್ವೇದ ನಾಳೆಗೆ | ಹಳ್ಳಿಯ ಮಡಿಲಲ್ಲಿ ಆರೋಗ್ಯ ಹಬ್ಬ’ ಎಂಬ ಧ್ಯೇಯವಾಕ್ಯದೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಹಬ್ಬ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ. ಆಯುರ್ವೇದ ಎಂಬುದು ಕೇವಲ ಕ್ಲಿನಿಕ್‌ನ ಕಷಾಯಕ್ಕೆ ಸೀಮಿತವಾಗಿರದೆ, ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ನಿತ್ಯಜೀವನದ ಆರೋಗ್ಯಕರ ಶೈಲಿ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸಲು ಕುಟುಂಬ ಸಮೇತ ಭೇಟಿ ನೀಡುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.

Chitrakoota Habba (3)

ಹಬ್ಬದ ಪ್ರಮುಖ ಆರು ಆಕರ್ಷಣೆಗಳು:

  1. ನಿಮ್ಮ ಪ್ರಕೃತಿ, ನಿಮ್ಮ ಆಹಾರ: ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ನಾಡಿ ಪರೀಕ್ಷೆ ಹಾಗೂ ತ್ರಿದೋಷಗಳಾದ ವಾತ, ಪಿತ್ತ, ಕಫ ಪ್ರಕೃತಿ ವಿಶ್ಲೇಷಣೆ ನಡೆಸಿ ವೈಯಕ್ತಿಕ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ ನೀಡಲಾಗುತ್ತದೆ.
  2. ಗೋಮಾತೆ ಅಪ್ಪುಗೆ : ದೇಸಿ ಗೋಶಾಲಾ ಭೇಟಿ, ಗೋಸಂಸ್ಕೃತಿಯ ಮಹತ್ವ ಹಾಗೂ ಹಸುವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ನವೀನ ಅನುಭವ ಪಡೆಯಬಹುದು.
  3. ಕಷಾಯ ಶಾಲೆ: ಮನೆಯ ಅಡುಗೆಯ ಸಾಮಗ್ರಿಗಳು ಹಾಗೂ ಹಿತ್ತಿಲಿನ ಔಷಧೀಯ ಗಿಡಮೂಲಿಕೆಗಳಿಂದ ರೋಗನಿರೋಧಕ ಕಷಾಯಗಳನ್ನು ತಯಾರಿಸುವ ನೇರ ಪ್ರಾತ್ಯಕ್ಷಿಕೆ ಇರಲಿದೆ.
  4. ದೇವ ವನ, ಔಷಧಿ ವನ (ಹರ್ಬಲ್ ವಾಕ್): 18 ಎಕರೆ ಹಸಿರು ಪರಿಸರದಲ್ಲಿರುವ ನಾಗಕೇಸರ, ರಕ್ತಚಂದನ, ಏಕನಾಯಕ, ರುದ್ರಾಕ್ಷಿ ಸೇರಿದಂತೆ 150ಕ್ಕೂ ಹೆಚ್ಚು ಅಪರೂಪದ ಗಿಡಮೂಲಿಕೆಗಳ ಪರಿಚಯ ನಡಿಗೆ ನಡೆಯಲಿದ್ದು, ಆಸಕ್ತ ಮಕ್ಕಳಿಗೆ ಔಷಧೀಯ ಸಸಿಗಳನ್ನು ವಿತರಿಸಲಾಗುತ್ತದೆ.
  5. ಆಯುರ್ವೇದ ಜಗತ್ತು: ಪಂಚಕರ್ಮ ಚಿಕಿತ್ಸಾ ವಿಧಾನಗಳ ಪರಿಚಯ ಮತ್ತು ವಿವರಣೆ ನೀಡಲಾಗುವುದು.
  6. ಮಕ್ಕಳಿಗಾಗಿ ಕಿಡ್ಸ್ ಜೋನ್: ಮಕ್ಕಳಿಗಾಗಿ ವಿಶೇಷ ಆಟದ ವಲಯ ಮತ್ತು ವಿನೋದ ಕೂಟ ಇರಲಿದೆ.
Chitrakoota Habba (5)

ಪ್ರಕೃತಿ ಮತ್ತು ದೇಸಿ ಮಳಿಗೆಗಳ ವೈಭವ

ಆಯುರ್ವೇದ ಹಬ್ಬದಲ್ಲಿ ಪ್ರಕೃತಿ, ಆರೋಗ್ಯ ಮತ್ತು ಗ್ರಾಮೀಣ ಪರಂಪರೆಗೆ ಪೂರಕವಾದ ವಿವಿಧ ಸಾವಯವ ಮಳಿಗೆಗಳನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಸದ್ಗುರು ಆಯುರ್ವೇದ, ಆತ್ಮಿಕ್ ಆಯುರ್ವೇದ ಹಾಗೂ ಆಯುರ್ವೇದಿಕ್ ಹುಬ್ಬಳ್ಳಿಯ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು, ನೈಸರ್ಗಿಕ ಮಸಾಜ್ ಸಾಧನಗಳು, ದೇಸಿ ಗೋ ಉತ್ಪನ್ನಗಳು, ತುಮಕೂರಿನ ಸಾವಯವ ಧಾನ್ಯಗಳು, ತಾರಸಿ ತೋಟಕ್ಕೆ ಸೂಕ್ತವಾದ ದೇಸಿ ತರಕಾರಿ ಬೀಜಗಳು, ಕುಂದಾಪುರದ ಸ್ವದೇಶಿ ಮಾಳಿಗೆ ಹಾಗೂ ಉಡುಪಿಯ ಆರ್.ಕೆ. ಉಪ್ಪಿನಕಾಯಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರಲಿವೆ. ಇದರೊಂದಿಗೆ ಆರೋಗ್ಯಕರ ಪಾನೀಯಗಳಾದ ತಾಜಾ ನೀರಾ, ನೆರಳಕಟ್ಟೆಯ ಕಬ್ಬಿನ ಹಾಲು, ಆಲೂರಿನ ಗೋಲಿ ಸೋಡಾ, ನೈಸರ್ಗಿಕ ಐಸ್‌ಕ್ರೀಮ್ ಹಾಗೂ ಪರಿಸರಸ್ನೇಹಿ ಜೀವನಶೈಲಿಗೆ ಒತ್ತು ನೀಡುವ ಆಲೂರಿನ ಮಣ್ಣಿನ ಮಡಕೆಗಳು, ಮರದ ಗೃಹಬಳಕೆ ಪರಿಕರಗಳು ಮತ್ತು ಹಟ್ಟಿಯಂಗಡಿಯ ನಮ್ಮಭೂಮಿ ಸಂಸ್ಥೆಯ ಗ್ರಾಮೀಣ ಕರಕುಶಲ ವಸ್ತುಗಳ ಮಳಿಗೆಗಳು ಸಾರ್ವಜನಿಕರಿಗೆ ನೈಸರ್ಗಿಕ ಜೀವನಶೈಲಿಯನ್ನು ಹತ್ತಿರದಿಂದ ಪರಿಚಯಿಸಲಿವೆ.

ಕರಾವಳಿಯ ಅಪರೂಪದ ಆಯುರ್ವೇದ ಥಾಲಿ

ಮಧ್ಯಾಹ್ನದ ಊಟಕ್ಕೆ ಆರೋಗ್ಯ ಮತ್ತು ರುಚಿಯ ಸಂಗಮವಾದ ಅಪರೂಪದ ಆಯುರ್ವೇದ ಥಾಲಿಯನ್ನು ಅತ್ಯಂತ ರಿಯಾಯಿತಿ ಮೊತ್ತಕ್ಕೆ ನೀಡಲಾಗುತ್ತದೆ. ಈ ಥಾಲಿಯಲ್ಲಿ ಗೆಣಸಿನ ಸೂಪ್, ಹುರುಳಿ ಕೊಟ್ಟೆ ಕಡುಬು, ನೆಲಗಡಲೆ ಕೋಸುಂಬರಿ, ಹೆಸರುಕಾಳು ತೊವೆ, ಕೆಂಪು ಅಕ್ಕಿ ಅನ್ನ, ಹುರುಳಿ ಸಾರು, ಪತ್ರೊಡೆ, ನುಗ್ಗೆ ಸೊಪ್ಪಿನ ಚಟ್ನಿ, ಚಕ್ತೆ ಸೊಪ್ಪಿನ ಕೆಂಪು ಚಟ್ನಿ, ಒಂದೆಲಗ ತಂಬಳಿ, ಬೋಂಡ ಪಾಯಸ, ಬಾಳೆದಿಂಡಿನ ಬೆಲ್ಲದ ಪಾಕ, ಗೊಂಬಳಕಾಯಿ ಜ್ಯೂಸ್, ಮಜ್ಜಿಗೆ ಸೊಪ್ಪಿನ ಮಜ್ಜಿಗೆ ಹಾಗೂ ಸಾಂಪ್ರದಾಯಿಕ ಹಾಲುಬಾಯಿ ಇರಲಿವೆ.

Chitrakoota Habba (2)

ಶಾಲಾ ವಿದ್ಯಾರ್ಥಿಗಳಿಗಾಗಿ ಅಂದೇ ಸ್ಥಳದಲ್ಲಿ ಪ್ರಬಂಧ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ₹3,000 ಹಾಗೂ ದ್ವಿತೀಯ ₹2,000 ನಗದು ಬಹುಮಾನ ನೀಡಲಾಗುವುದು. 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ "ಪ್ರಸ್ತುತ ಕಾಲಘಟ್ಟದಲ್ಲಿ ಆಯುರ್ವೇದದ ಮಹತ್ವ" ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಹಾಗೂ "ಆಯುರ್ವೇದದ ಉಗಮ" ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ. 1 ರಿಂದ 5ನೇ ತರಗತಿಯ ಮಕ್ಕಳಿಗೆ "ಪ್ರಕೃತಿ ಮತ್ತು ಆಯುರ್ವೇದ" ವಿಷಯದ ಮೇಲೆ ಚಿತ್ರಕಲೆ ಸ್ಪರ್ಧೆ ಇರಲಿದೆ. ಮಧ್ಯಾಹ್ನ ಯುವಜನತೆ, ವೈದ್ಯರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ನಡುವೆ (#ChithrakootaGenZAyurveda) ಮುಕ್ತ ಸಂವಾದ ನಡೆಯಲಿದೆ.

Chitrakoota Habba

ಚಿತ್ರಕೂಟ ಚಿಕಿತ್ಸಾಲಯದ ಹಿನ್ನೆಲೆಯೇನು?

ಖ್ಯಾತ ಆಯುರ್ವೇದ ತಜ್ಞರಾದ ಡಾ. ರಾಜೇಶ್ ಬಾಯರಿ ಅವರು 2008ರಲ್ಲಿ ಅಡಿಪಾಯ ಹಾಕಿ, 2010ರಲ್ಲಿ ಆರಂಭಿಸಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯವು ಇಂದು 18 ಎಕರೆ ವಿಸ್ತಾರವಾದ ಹಸಿರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವರಿಗೆ ಪತ್ನಿ ಡಾ. ಅನುಲೇಖಾ ಬಾಯರಿ ಸಾಥ್ ನೀಡುತ್ತಿದ್ದಾರೆ. ಈ ದಂಪತಿ ದೇಸಿ ಗೋಶಾಲೆ, ಸ್ವಂತ ಔಷಧಾಲಯ, ಪ್ರತಿದಿನ ಯೋಗ-ಧ್ಯಾನ ಮುಂತಾದವುಗಳ ಮೂಲಕ ಅಧಿಕೃತ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದು, ಇದುವರೆಗೆ ವಿಶ್ವದ 30ಕ್ಕೂ ಹೆಚ್ಚು ದೇಶಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Chitrakoota Habba (1)

ಈ ಎಲ್ಲ ವಿವರಗಳ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ದೂರವಾಣಿ ಸಂಖ್ಯೆ : 9187471578

ಸ್ಥಳ: ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ, ಆಲೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.

ಇನ್‌ಸ್ಟಾಗ್ರಾಮ್: @chithrakoota | ವೆಬ್‌ಸೈಟ್: chithrakoota.com