ಉಡುಪಿ, ಜೂ.12: ತೆಂಗಿನಕಾಯಿ (coconut) ತಲೆ ಮೇಲೆ ಬಿದ್ದು ಪುಟ್ಟ ಒಂದೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ನಡೆದಿದೆ. ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಕ್ಯಾಂಟೀನ್ ನಡೆಸುತ್ತಿರುವ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರ ದಕ್ಷ ಮೃತಪಟ್ಟ ಮಗು.
ತಾಯಿ ಸುಚಿತ್ರಾ ತಮ್ಮ ಹಿರಿಯ ಪುತ್ರಿಯನ್ನು ಶಾಲೆಗೆ ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಗುವಿನ ಮನೆಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಗದ್ದೆಯ ಅಂಚಿನ ಕಿರಿದಾದ ಕಾಲ್ದಾರಿಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಅವರು ತಮ್ಮ ಪತಿಯೊಂದಿಗೆ ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ, ಸುಮಾರು 20 ಅಡಿ ಎತ್ತರದ ಮರದಿಂದ ಹಸಿ ತೆಂಗಿನಕಾಯಿಯೊಂದು ಮಗುವಿನ ತಲೆಯ ಮೇಲೆ ಬಿದ್ದಿದೆ.
ತೆಂಗಿನಕಾಯಿ ಬಿದ್ದ ತಕ್ಷಣ, ಮಗುವನ್ನು ರಕ್ಷಿಸಲು ಕೆಸರು ತುಂಬಿದ ಕಾಲು ದಾರಿಯಲ್ಲಿ ಸುಮಾರು ದೂರದವರೆಗೆ ಓಡಿಕೊಂಡೇ ಹೋಗಿದ್ದಾರೆ. ಸ್ಥಳೀಯರು ಕೂಡ ಈ ವೇಳೆ ಅವರಿಗೆ ನೆರವಾದರು. ಸರಿಯಾದ ರಸ್ತೆ ಇಲ್ಲದ ಕಾರಣ ಆಸ್ಪತ್ರೆಗೆ ತಲುಪಲು ತಡವಾಯಿತು. ಮಗುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತುರ್ತು ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು. ಆದರೆ, ತಲೆಗೆ ತೀವ್ರತರವಾದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ.
ರಸ್ತೆಗೆ ತೇವಳುತ್ತ ಬಂದ ಮಗು: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು
ಮಗುವಿನ ಸಾವಿನಿಂದ ಕುಟುಂಬ ಹಾಗೂ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ರಸ್ತೆ ಇದ್ದಿದ್ದರೆ ಮಗುವನ್ನು ಬದುಕಿಸಬಹುದಿತ್ತು ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ಈ ಭಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿವೆ. ಮಳೆಗಾಲದಲ್ಲಿ ಈ ಕಾಲ್ದಾರಿಯಲ್ಲಿ ನಡೆದಾಡುವುದು ತುಂಬಾ ಅಪಾಯಕಾರಿಯಾಗಿದೆ. ವೃದ್ಧರು, ರೋಗಿಗಳನ್ನು ಹೊತ್ತುಕೊಂಡೇ ಹೋಗಬೇಕಾದ ಪರಿಸ್ಥಿತಿಯಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಸಂಪ್‌ಗೆ ಬಿದ್ದು ಮಗು ಸಾವು
ನೀರಿನ ಸಂಪ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 38ರಲ್ಲಿ ನಡೆದಿದೆ. ಮೃತ ಮಗುವನ್ನು ಅಮೀನಾ ಪಟಾಣ್ ಎಂದು ಗುರುತಿಸಲಾಗಿದೆ. ಮಗು ಮೃತಪಟ್ಟಿದ್ದರೂ ಅದನ್ನು ಒಪ್ಪಿಕೊಳ್ಳದ ಪೋಷಕರು ಮತ್ತು ಕುಟುಂಬಸ್ಥರು, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕು ಎಂದು ಮುಂದಾಗಿದ್ದಾರೆ.
ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟರೆ ಮತ್ತೆ ಜೀವ ಬರುತ್ತದೆ ಎಂದು ಯಾರೋ ಹೇಳಿದ ಮಾತು ನಂಬಿ, ಮಗುವನ್ನು ಉಪ್ಪಿನ ರಾಶಿ ಮೇಲೆ ಪೋಷಕರು ಇಟ್ಟಿದ್ದಾರೆ. ಈ ದೃಶ್ಯವು ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ಮಗುವಿನ ಶವವನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದ ಮೇಲೂ ಪೋಷಕರ ಈ ಪ್ರಯತ್ನ ನಿಂತಿರಲಿಲ್ಲ. ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿಯೇ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದ ಪೋಷಕರು, ಮಗುವಿನ ಕಿವಿಯ ಬಳಿ ಮೊಬೈಲ್‌ನಲ್ಲಿ ಕುರಾನ್ ಪ್ರಾರ್ಥನೆಯನ್ನು ಹಾಕಿ ಬದುಕಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲೇ ನಡೆದ ಈ ದೃಶ್ಯ ನೋಡುಗರ ಮನಕಲಕುವಂತೆ ಮಾಡಿತು.