ಉಡುಪಿ-ಕಾಸರಗೋಡು ವಿದ್ಯುತ್ ಯೋಜನೆಗೆ ಜಮೀನು ನೀಡಿದ ರೈತರಿಗೆ ಸನ್ಮಾನ
ಸ್ವಂತ ಭೂಮಿ ಬಿಟ್ಟುಕೊಟ್ಟು ಸಹಕರಿಸಿದ ತಾಲೂಕಿನ ವಿವಿಧ ಗ್ರಾಮಗಳ ಭೂ ಮಾಲೀಕರು ಹಾಗೂ ರೈತರನ್ನು ಯುಕೆಟಿಎಲ್ ಕಂಪೆನಿಯ ವ್ಯವಸ್ಥಾಪಕರಾದ ಆಗ್ನೆಸ್ ಗೋನ್ಸಾಲ್ವಿಸ್ ಅವರು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ, ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಹಸ್ತಾಂತರಿಸಿ ಅಭಿನಂದಿಸಿದ್ದಾರೆ.
-
ಬಂಟ್ವಾಳ: ದೇಶದ ಪ್ರಗತಿ ಹಾಗೂ ವಿದ್ಯುತ್ ಸ್ವಾವಲಂಬನೆಗೆ ಅತ್ಯಂತ ಮಹತ್ವದ್ದಾಗಿರುವ ‘ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಲೈನ್’ (UKTL) ಯೋಜನೆಗೆ ಬಂಟ್ವಾಳ ತಾಲೂಕಿ ನಾದ್ಯಂತ ಸಾರ್ವಜನಿಕರು ಹಾಗೂ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಂಟ್ವಾಳದ ರೈತರ ಮತ್ತು ನಾಗರಿಕರು ಯೋಜನೆಗೆ ಬೇಕಾದ ಭೂಮಿಯನ್ನು ನೀಡಿದ್ದು, ಅವರ ದೇಶಪ್ರೇಮ ಹಾಗೂ ಉದಾರ ಮನೋಭಾವವನ್ನು ಯುಕೆಟಿಎಲ್ ಸಂಸ್ಥೆ ಶ್ಲಾಘಿಸಿದೆ.
ಸ್ವಂತ ಭೂಮಿ ಬಿಟ್ಟುಕೊಟ್ಟು ಸಹಕರಿಸಿದ ತಾಲೂಕಿನ ವಿವಿಧ ಗ್ರಾಮಗಳ ಭೂ ಮಾಲೀಕರು ಹಾಗೂ ರೈತರನ್ನು ಯುಕೆಟಿಎಲ್ ಕಂಪೆನಿಯ ವ್ಯವಸ್ಥಾಪಕರಾದ ಆಗ್ನೆಸ್ ಗೋನ್ಸಾಲ್ವಿಸ್ ಅವರು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ, ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಹಸ್ತಾಂತರಿಸಿ ಅಭಿನಂದಿಸಿದ್ದಾರೆ.
ಗ್ರಾಮ ಗ್ರಾಮಗಳಲ್ಲಿ ರೈತರಿಗೆ ಗೌರವ ಸಮರ್ಪಣೆ
ಬಂಟ್ವಾಳ ಕಸಬ ಮರ್ದೆಲ್ ಊರಿನ ರೈತರಾದ ವಾಮನ ಬಂಗೇರ ಅವರು ಯೋಜನೆಯ ಟವರ್ ನಿರ್ಮಾಣಕ್ಕೆ ಜಮೀನು ನೀಡಿ ಸಹಕರಿಸಿದ್ದಕ್ಕಾಗಿ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಗಿದೆ. ಅದೇ ರೀತಿ, ಕಸಬಾ ಗ್ರಾಮದ ಪಶುಪತಿ ಅವರು ಕಾಮಗಾರಿ ಸುಗಮವಾಗಿ ನಡೆಯಲು ಬೇಕಾದ ತಾತ್ಕಾಲಿಕ ರಸ್ತೆ ಸೌಕರ್ಯವನ್ನು ತಮ್ಮ ಜಮೀನಿನಲ್ಲಿ ಒದಗಿಸಿಕೊಡುವ ಮೂಲಕ ಔದಾರ್ಯ ಮೆರೆದಿದ್ದು, ಅವರ ನಿವಾಸದಲ್ಲೇ ಅಭಿನಂದನಾ ಪತ್ರ ನೀಡಿ ಕೃತಜ್ಞತೆ ಸಲ್ಲಿಸಲಾಗಿದೆ. ಪಂಜಿಕಲ್ಲು ಗ್ರಾಮದ ಮುಕುಡ ನಿವಾಸಿಗಳಾದ ಅಲ್ಬನ್ ಪಿಂಟೋ ಹಾಗೂ ಹಿರಿಯ ರೈತರಾದ ಚಾರ್ಲ್ಸ್ ಜೆ. ಸ್ವಿಕ್ವೇರ ಅವರು ದೇಶದ ಮಹತ್ವದ ಯೋಜನೆಗೆ ತೋರಿದ ಸಹಕಾರವನ್ನು ಶ್ಲಾಘಿಸಲಾಗಿದೆ.
ಇದನ್ನೂ ಓದಿ: Chip-Based E-Passports: ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ಪರಿಚಯಿಸಿದ ಭಾರತ! ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
ಅರಳ ಗ್ರಾಮದ ಮುಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿಯವರು ಕೂಡ ರಾಷ್ಟ್ರ ನಿರ್ಮಾಣದ ಈ ಯೋಜನೆಗೆ ಜಾಗ ಬಿಟ್ಟುಕೊಟ್ಟು ದೇಶಪ್ರೇಮದ ಸಂದೇಶ ಸಾರಿದ್ದು, ಸಮಿತಿಯ ಪ್ರಮುಖರನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.
ದೇಶದ ಬೆಳಕಿಗಾಗಿ ಜಮೀನು ನೀಡಿದ ಹೆಮ್ಮೆ
ಭೂಮಿ ಬಿಟ್ಟುಕೊಟ್ಟ ಬಂಟ್ವಾಳದ ರೈತರು ಹಾಗೂ ಪ್ರಮುಖರು ಈ ಯೋಜನೆಯ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಬರ್ದೆಲ್ನ ವಾಮನ ಬಂಗೇರ ಅವರು, ಈ ಪ್ರಾಜೆಕ್ಟ್ಗಾಗಿ ಮತ್ತು ನಮ್ಮ ದೇಶಕ್ಕಾಗಿ ನಾನು ಜಾಗ ಕೊಟ್ಟಿದ್ದೇನೆ. ಈ ಟವರ್ ಕೇರಳಕ್ಕೆ ಹೋಗುವುದಾಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿರುವುದರಿಂದ ನಾವು ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಜಾಗ ಬಿಟ್ಟುಕೊಟ್ಟಿದ್ದಕ್ಕೆ ನಮಗೆ ಕಂಪೆನಿಯಿಂದ ಸೂಕ್ತ ಪರಿಹಾರವೂ ಕೂಡ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜನರ ಬಾಳಿಗೆ ಬೆಳಕಾಗಲಿ ಎಂಬ ಆಶಯ
ಪಂಜಿಕಲ್ ಗ್ರಾಮದ ಮುಕುಡ ನಿವಾಸಿ ಆಲ್ಬರ್ಟ್ ಪಿಂಟೋ ಅವರು ಮಾತನಾಡಿ, ಸಮಾಜಕ್ಕೆ ಉಪಯೋಗ ಆಗಲಿ, ಬಹಳಷ್ಟು ಜನರ ಬಾಳಿಗೆ ಈ ಯೋಜನೆ ಬೆಳಕಾಗಲಿ ಎನ್ನುವ ಸದುದ್ದೇಶ ದಿಂದ ನಾನು ಜಾಗವನ್ನು ಕೊಟ್ಟಿದ್ದೇನೆ. ನನಗೆ ಈಗಾಗಲೇ ಪರಿಹಾರ ಸಿಕ್ಕಿದೆ, ಇನ್ನು ಸ್ವಲ್ಪ ಬಾಕಿ ಉಳಿದಿದ್ದು, ಅದು ಕೂಡ ಶೀಘ್ರದಲ್ಲೇ ಸಿಗುವ ವಿಶ್ವಾಸವಿದೆ ಎಂದು ನುಡಿದರು.
ಅರಳ ಮುಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿಯ ಪ್ರಮುಖರಾದ ಕೆ.ಎಚ್. ಖಾದರ್ ಅವರು ಮಾತನಾಡಿ, ಭಾರತ ಸರ್ಕಾರದ ವಿದ್ಯುತ್ ಸರಬರಾಜು ಯೋಜನೆಗಾಗಿ ನಾವು ಜಾಗ ಬಿಟ್ಟು ಕೊಟ್ಟಿದ್ದೇವೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಹಾಗೂ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲ ವಾಗಿ ಎಲ್ಲರಿಗೂ ವಿದ್ಯುತ್ ಶಕ್ತಿ ಸಿಗುವಂತಾಗಲಿ. ಜಾಗ ನೀಡಿದ್ದಕ್ಕೆ ನಮಗೆ ಸೂಕ್ತ ಪರಿಹಾರವನ್ನು ಕೊಟ್ಟಿದ್ದಾರೆ. ಈ ಯೋಜನೆಯಿಂದ ಇಡೀ ಸಮಾಜಕ್ಕೆ ಪ್ರಯೋಜನವಾಗಲಿ ಎಂಬುವುದೇ ನಮ್ಮ ಆಶಯ ಎಂದು ಶುಭ ಹಾರೈಸಿದರು.