Union Budget 2025: ಬಿಹಾರ ಚುನಾವಣೆಯ ಪ್ರಣಾಳಿಕೆಯಂತಿದೆ ಕೇಂದ್ರ ಬಜೆಟ್: ಸಚಿವೆ ಹೆಬ್ಬಾಳ್ಕರ್ ಕಿಡಿ
Union Budget 2025: ಬಿಹಾರ ಜನರ ಓಲೈಕೆಗಾಗಿ ಪ್ರಮುಖ ಐದಾರು ಯೋಜನೆಗಳನ್ನು ಘೋಷಿಸಿದರೆ, ಕರ್ನಾಟಕಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಈ ಬಜೆಟ್‌ನಿಂದ ಸಂಪೂರ್ಣ ನಿರಾಸೆ ಉಂಟಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ (Union Budget 2025) ಮಂಡಿಸಿದ್ದಾರೆ ಎನಿಸುತ್ತಿದೆ. ಬಜೆಟ್‌ನಿಂದ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ.
ಬಿಹಾರ ಜನರ ಓಲೈಕೆಗಾಗಿ ಪ್ರಮುಖ ಐದಾರು ಯೋಜನೆಗಳನ್ನು ಘೋಷಿಸಿದರೆ, ಕರ್ನಾಟಕಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಬೆಂಗಳೂರಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿತ್ತು. ಈ ಬಜೆಟ್‌ನಿಂದ ಸಂಪೂರ್ಣ ನಿರಾಸೆ ಉಂಟಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ನಮ್ಮ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಇದೊಂದು ಸಂಪೂರ್ಣ ರೈತ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್ ಎಂದು ಸಚಿವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Agriculture Budget 2025: ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಬಂಪರ್ ಕೊಡುಗೆ ಘೋಷಿಸಿದ ಕೇಂದ್ರ
ಕೇಂದ್ರದಿಂದ ಅತ್ಯಂತ ನಿರಾಶದಾಯಕ ಬಜೆಟ್: ಸಿಎಂ ಸಿದ್ದರಾಮಯ್ಯ ಟೀಕೆ
ಬೆಂಗಳೂರು: ರಾಜ್ಯದಕ್ಕೆ ನಾವು ಹಲವು ಯೋಜನೆಗಳನ್ನು ನಿರೀಕ್ಷೆ ಮಾಡಿದ್ದೆವು. ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಬಹಳ ನಿರಾಶದಾಯಕ ಬಜೆಟ್(Union Budget 2025), ಇದು ದೂರದೃಷ್ಟಿ ಇಲ್ಲದ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ 50,65,345 ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದೆ. ಕಳೆದ ವರ್ಷದ 48.20 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿತ್ತು, ಅದನ್ನು ಪರಿಷ್ಕೃತ ಅಂದಾಜು ಮಾಡಿದ್ದು 47.16 ಲಕ್ಷ ಕೋಟಿ. ಅಂದರೆ 1.04 ಲಕ್ಷ ಕೋಟಿ ಕಡಿಮೆಯಾಯಿತು. ಈ ಬಾರಿಯ ಬಜೆಟ್‌ನಲ್ಲಿ 15,68,936 ಕೋಟಿ ಸಾಲ ಇದೆ. ಶೇ.30 ಸಾಲ ಇರುತ್ತದೆ. ಅದರಲ್ಲಿ 12.7ಲಕ್ಷ ಕೋಟಿ ಬಡ್ಡಿ ಕೊಡುತ್ತಾರೆ. ಈ ದೇಶದ ಮೇಲೆ ಸುಮಾರು 202ರಿಂದ 205 ಲಕ್ಷ ಕೋಟಿಯಷ್ಟು ಸಾಲ ಇದೆ. ವಿತ್ತೀಯ ಕೊರತೆ ಶೇ.4.4, ಆದಾಯ ಕೊರತೆ ಶೇ.1.5 ಇದೆ.
ಅತ್ಯಂತ ಹೆಚ್ಚು ಆದಾಯ ನೀಡುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಅದರೆ ಅವರ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಹಾಗೂ ಆಂಧ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದೊಂದು ರೀತಿ ಆ ಎರಡು ರಾಜ್ಯಗಳಿಗೆ ಹೆಚ್ಚು ಒತ್ತು ನೀಡಿರುವ ಬಜೆಟ್. ನಮ್ಮ ರಾಜ್ಯದ ಯಾವುದೇ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | Union Budget: ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಬಂಪರ್ ! ತೆರಿಗೆಯಲ್ಲಿ ವಿನಾಯಿತಿ
2023-24ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಇಲ್ಲಿವರೆಗೂ ಒಂದು ರೂಪಾಯಿಯೂ ಬಂದಿಲ್ಲ, ಈ ಬಜೆಟ್‌ನಲ್ಲೂ ಪ್ರಸ್ತಾಪ ಇಲ್ಲ. ರಾಯಚೂರಿನಲ್ಲಿ ಏಮ್ಸ್ ಘೋಷಣೆಯಾಗಲಿದೆ ಎಂದು ನಿರೀಕ್ಷೆ ಮಾಡಿದ್ದೆ. ಕೇಂದ್ರ ಸಚಿವರು ಭರವಸೆಯೂ ನೀಡಿದ್ದರು. ಅದರ ಪ್ರಸ್ತಾವನೆಯೂ ಇಲ್ಲ. ಕುಡಿಯುವ ನೀರು, ರೈಲ್ವೆ ಯೋಜನೆಗಳಿಗೆ ಹಣ ಒದಗಿಸಲು ಕೇಳಿದ್ದೆವು. ಆದರೆ, ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಮನವಿ ಮಾಡಿದ್ದೆವು. ಆದರೆ, ಪ್ರಯೋಜನವಾಗಿಲ್ಲ.
ಈ ಬಜೆಟ್‌ನಲ್ಲಿ ಬಡವರು, ಕಾರ್ಮಿಕರು, ಮಹಿಳೆಯರಿಗೆ ಖರ್ಚು ಮಾಡುವುದನ್ನು ಬಿಟ್ಟು ಕಾರ್ಪೋರೇಟ್ ಕಂಪನಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನು ಬಿಹಾರ ರಾಜ್ಯದ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯದ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಅದೇ ರೀತಿ ಎಂಎಸ್‌ಎಂಇ ವಲಯಕ್ಕೆ ಕೊಡುತ್ತಿದ್ದ ಅನುದಾನವನ್ನೂ ಕಡಿಮೆ ಮಾಡಿದ್ದಾರೆ. ಒಟ್ಟಾರೆಯಾಗಿ ಮೋದಿ ಅವರ ಬಜೆಟ್ ಕರ್ನಾಟಕಕ್ಕೆ ಚೆಂಬು ಕೊಡುವುದನ್ನು ಮುಂದುವರಿಸಿದೆ ಎಂದು ಆಕ್ರೋಶ ಹೊರಹಾಕಿದರು.