ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tiptur Rain: ಕೊಬ್ಬರಿ ನಾಡಿನಲ್ಲಿ ಬಿರುಗಾಳಿ ಸಹಿತ ವರುಣಾರ್ಭಟ; ಧರೆಗೆ ಉರುಳಿದ ನೂರಾರು ಕಲ್ಪವೃಕ್ಷ, ಶೆಡ್‌ ಶೀಟ್‌ ಬಿದ್ದು ಬಾಲಕನಿಗೆ ಗಂಭೀರ ಗಾಯ

Tiptur News: ತಿಪಟೂರಿನಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಮೇತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ತೆಂಗಿನಕಾಯಿ ಫ್ಯಾಕ್ಟರಿ ಕಾರ್ಮಿಕರಿಗೆಂದು ನಿರ್ಮಿಸಿದ್ದ ಶೆಡ್ಡುಗಳ ಮೇಲ್ಚಾವಣಿ ಹಾರಿ ಹೋಗಿವೆ. ಹುಳಿಯಾರು ಮುಖ್ಯ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬಿರುಗಾಳಿಯ ಅರ್ಭಟಕ್ಕೆ 500ಕ್ಕೂ ಹೆಚ್ಚು ತೆಂಗಿನ ಮರಗಳು ಬಿದ್ದು ಹೋಗಿವೆ, 3000ಕ್ಕೂ ಹೆಚ್ಚು ಬಾಳೆ ಗಿಡಗಳು ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳು ನೆಲಕಚ್ಚಿವೆ.

ಕೊಬ್ಬರಿ ನಾಡಿನಲ್ಲಿ ವರುಣಾರ್ಭಟ; ಧರೆಗೆ ಉರುಳಿದ ನೂರಾರು ಕಲ್ಪವೃಕ್ಷ

ತಿಪಟೂರಿನಲ್ಲಿ ಬಿರುಗಾಳಿ ಸಹಿತ ಮಳೆಗೆ ಶೆಡ್ಡುಗಳ ಮೇಲ್ಚಾವಣಿ ಹಾರಿ ಹೋಗಿರುವುದು. -

Profile
Siddalinga Swamy May 30, 2026 7:17 PM

ತಿಪಟೂರು, ಮೇ 30: ತಿಪಟೂರಿನಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಮೇತ ಸುರಿದ ಮಳೆ (Tiptur Rain) ಸಾಕಷ್ಟು ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ತೆಂಗಿನಕಾಯಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆಂದು ನಿರ್ಮಿಸಿದ್ದ ಶೆಡ್ಡುಗಳ ಮೇಲ್ಚಾವಣಿ ಹಾರಿ ಹೋಗಿದ್ದು, ಅಂದಾಜು 30ಕ್ಕೂ ಹೆಚ್ಚು ಕುಟುಂಬಗಳಿಗೆ ಸೂರಿಲ್ಲದಂತಾಗಿದೆ.

ಬಿರುಗಾಳಿ ಸಹಿತ ಮಳೆಯಿಂದ ಶೆಡ್‌ ಶೀಟ್‌ ಮತ್ತು ಇಟ್ಟಿಗೆಗಳು ಬಿದ್ದು, ಹಾಲ್ಕುರಿಕೆ ರಸ್ತೆಗೆ ಹೊಂದಿಕೊಂಡಂತಿರುವ ಶಿವಲಿಂಗ ಕಾಯಿ ಫ್ಯಾಕ್ಟರಿಯ ಕೆಲಸಗಾರ, ಆಲೂರು ಮೂಲದ ರಂಗಸ್ವಾಮಿ ಅವರ ಪುತ್ರ ರಂಜಿತ್ (12) ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಕಣ್ಣು, ಎದೆ ಹಾಗೂ ತೊಡೆ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಬಾಲಕನನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Tiptur News (1)

ಇನ್ನು ಹುಳಿಯಾರು ಮುಖ್ಯ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದು ದಿನವಿಡೀ 15ಕ್ಕೂ ಹೆಚ್ಚು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನ ಪರದಾಡುವಂತಹ ಸ್ಥಿತಿ ಉಂಟಾಗಿದೆ. ಶಂಕರನಗರ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮರಗಳು ಬಿದ್ದ ಪರಿಣಾಮ ಕಾರು, ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳಿಗೆ ಹಾನಿಯಾಗಿದೆ. ಬಿರುಗಾಳಿಯಿಂದಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಮರಗಳು ಬಿದ್ದು ರಾತ್ರಿ ಇಡಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Rain News

ಇನ್ನು ಗ್ರಾಮೀಣ ಭಾಗದಲ್ಲಂತೂ ಬಿರುಗಾಳಿಯ ಅಟ್ಟಹಾಸಕ್ಕೆ 500ಕ್ಕೂ ಹೆಚ್ಚು ತೆಂಗಿನ ಮರಗಳು ಬಿದ್ದು ಹೋಗಿವೆ, 3000ಕ್ಕೂ ಹೆಚ್ಚು ಬಾಳೆ ಗಿಡಗಳು ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳು ನೆಲಕಚ್ಚಿವೆ. ಕೆಲ ಭಾಗಗಳಲ್ಲಿ ಮಾವಿನಕಾಯಿಗಳು ನೆಲ ಸೇರಿ ರೈತರು ಸಂಕಷ್ಟ ಅನುಭವಿಸುವಂತಹ ಸ್ಥಿತಿ ಉಂಟಾಗಿದೆ.

Rain

ನಗರದ ಚರ್ಚ್ ಕಾಂಪೌಂಡ್ ಪಕ್ಕಕ್ಕೆ ಹೊಂದಿಕೊಂಡಂತಿದ್ದ ಬೃಹತ್ ಗಾತ್ರದ ಮರವು ಶೀಟಿನ ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿ ಉಂಟಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ತುಂಬಾ ಹಳೆಯದಾದ ಬೃಹತ್ ಗಾತ್ರದ ಮರಗಳನ್ನು ನಗರ ಪ್ರದೇಶದಲ್ಲಿ ತೆರವುಗೊಳಿಸಿ ಅದೇ ಜಾಗದಲ್ಲಿ ಬೇರೆ ಸಸಿ ನೆಟ್ಟರೆ ಇಂತಹ ಅನಾಹುತಗಳು ಆಗುವುದು ಅಲ್ಪ ಪ್ರಮಾಣದಲ್ಲಾದರೂ ತಪ್ಪಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.