ಭಗವದ್ಗೀತೆ ಅಧ್ಯಯನದಿಂದ ಜೀವನದಲ್ಲಿ ಯಶಸ್ಸು, ಆತ್ಮವಿಶ್ವಾಸ ಸಾಧ್ಯ: ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ
Vijayanagara News: ಭಾರತದ ಆಧ್ಯಾತ್ಮಿಕ ಶ್ರೇಷ್ಠತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತು ಗೌರವಿಸಲು ನಮ್ಮ ಧರ್ಮಗ್ರಂಥಗಳ ಅಧ್ಯಯನವೇ ಪ್ರಮುಖ ಕಾರಣವಾಗಿದೆ. ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ದೇಶದ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.
-
ಹೊಸಪೇಟೆ, ನ.12: ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಜ್ಞಾನ, ಯಶಸ್ಸು ಹಾಗೂ ಸಂಸ್ಕಾರವನ್ನು ಹೊಂದಲು ಭಗವದ್ಗೀತೆಯ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು. ನಗರದ (Vijayanagara News) ಸಂಡೂರು ರಸ್ತೆಯಲ್ಲಿರುವ ನಿವೇದಿತಾ ಶಾಲೆಯ ಆವರಣದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಶೇಷವಾಗಿ ವಿದ್ಯಾರ್ಥಿಗಳು ಶ್ರದ್ಧೆ, ತತ್ಪರತೆ ಹಾಗೂ ಇಂದ್ರಿಯ ಸಂಯಮ ಎಂಬ ಮೂರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜ್ಞಾನಾರ್ಜನೆಯೊಂದಿಗೆ ಶೈಕ್ಷಣಿಕ ಸಾಧನೆಯನ್ನೂ ಮಾಡಬಹುದು ಎಂದರು.
ಭಾರತದ ಆಧ್ಯಾತ್ಮಿಕ ಶ್ರೇಷ್ಠತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತು ಗೌರವಿಸಲು ನಮ್ಮ ಧರ್ಮಗ್ರಂಥಗಳ ಅಧ್ಯಯನವೇ ಪ್ರಮುಖ ಕಾರಣವಾಗಿದೆ. ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ದೇಶದ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹೀಗಾಗಿ ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಓದಬೇಕು. ಅದರಲ್ಲೂ ಮಕ್ಕಳು ಬಾಲ್ಯದಿಂದಲೇ ಗೀತೆಯ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿನ 'ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ' ಎಂಬ ಶ್ಲೋಕವು ವಿದ್ಯಾರ್ಥಿ ಜೀವನಕ್ಕೆ ಅತ್ಯಂತ ಮಹತ್ವದ ಮೂರು ಸೂತ್ರಗಳನ್ನು ನೀಡುತ್ತದೆ. ಶ್ರದ್ಧೆ, ತತ್ಪರತೆ ಮತ್ತು ಇಂದ್ರಿಯ ಸಂಯಮವನ್ನು ರೂಢಿಸಿಕೊಂಡವರಿಗೆ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ವಿವರಿಸಿದರು.
ಶ್ರದ್ಧೆ ಎಂದರೆ ಕಲಿಯುವ ವಿದ್ಯೆ ಹಾಗೂ ಕಲಿಸುವ ಗುರುಗಳ ಬಗ್ಗೆ ಗೌರವ ಮತ್ತು ಪೂಜ್ಯಭಾವ ಹೊಂದಿರುವುದು. ವಿದ್ಯೆ ಮತ್ತು ಗುರುಗಳ ಬಗ್ಗೆ ಅಪಾರ ಶ್ರದ್ಧೆ ಇದ್ದಾಗ ಜ್ಞಾನ ಸುಲಭವಾಗಿ ಪ್ರಾಪ್ತಿಯಾಗುತ್ತದೆ. ಮಹಾಭಾರತದ ಏಕಲವ್ಯನ ಗುರುಭಕ್ತಿ ಹಾಗೂ ಶ್ರದ್ಧೆ ಇದಕ್ಕೆ ಉತ್ತಮ ಉದಾಹರಣೆ ಎಂದರು.
ತತ್ಪರತೆ ಎಂದರೆ ಸಾಧಿಸಬೇಕೆಂಬ ಉತ್ಕಟವಾದ ಆಸಕ್ತಿ ಮತ್ತು ಅದಕ್ಕಾಗಿ ನಿರಂತರ ಪ್ರಯತ್ನಿಸುವ ಮನೋಭಾವ. ವಿದ್ಯಾಭ್ಯಾಸ ಮಾತ್ರವಲ್ಲದೆ ಕ್ರೀಡೆ, ಸಂಗೀತ, ವಿಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ತತ್ಪರತೆ ಅತ್ಯಗತ್ಯ. ಇನ್ನು ಇಂದ್ರಿಯ ಸಂಯಮ ಎಂದರೆ ಚಂಚಲ ಮನಸ್ಸು ಹಾಗೂ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು. ಇಂದಿನ ವಿದ್ಯಾರ್ಥಿಗಳು ಮೊಬೈಲ್, ದೂರದರ್ಶನ ಸೇರಿದಂತೆ ಮನಸ್ಸನ್ನು ಬೇರೆಡೆ ಸೆಳೆಯುವ ಆಕರ್ಷಣೆಗಳಿಂದ ದೂರವಿದ್ದು, ಕಣ್ಣು ಮತ್ತು ಕಿವಿಗಳೆಂಬ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಮೂರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯೊಂದಿಗೆ ಪರೀಕ್ಷೆಗಳಲ್ಲಿಯೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಿವೇದಿತಾ ಶಾಲೆಯ ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಕಂಠಪಾಠ ಮಾಡಿ ಪಠಿಸುವಲ್ಲಿ ವಿಶೇಷ ಆಸಕ್ತಿ ತೋರುತ್ತಿರುವುದು ಶ್ಲಾಘನೀಯ. ಅಮೆರಿಕದಿಂದ ಭಾರತಕ್ಕೆ ಬಂದು ಸ್ವಾಮಿ ವಿವೇಕಾನಂದರ ಪ್ರಭಾವದಿಂದ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿ ದೇಶಸೇವೆಗೆ ಜೀವನವನ್ನೇ ಮುಡಿಪಾಗಿಟ್ಟ ಸಿಸ್ಟರ್ ನಿವೇದಿತಾ ಅವರ ಆದರ್ಶದಂತೆ ಶಾಲೆಯು ಮಕ್ಕಳಲ್ಲಿ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಶ್ರದ್ಧೆಯನ್ನು ಬೆಳೆಸುತ್ತಿರುವುದು ಸಂತಸದ ಸಂಗತಿ ಎಂದರು.
ಭಗವದ್ಗೀತೆಯ ಅಧ್ಯಯನವು ಕೇವಲ ಶಾಲಾ ಹಂತಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿ ಜೀವನದ ನಂತರವೂ ಪ್ರತಿಯೊಬ್ಬರ ಬದುಕಿನಲ್ಲಿ ಗೀತೆಯ ಅಧ್ಯಯನ ಹಾಗೂ ಅದರ ಬೋಧನೆಗಳು ನಿರಂತರವಾಗಿ ಮುಂದುವರಿಯಬೇಕು. ಇದರಿಂದ ವ್ಯಕ್ತಿಯ ಜೀವನ ಜ್ಞಾನಯುಕ್ತವಾಗಿ, ಮೌಲ್ಯಯುತವಾಗಿ ರೂಪುಗೊಳ್ಳಲು ಸಾಧ್ಯ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಶಾಲೆಯ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಿಸೆಂಬರ್ 19ರಂದು ಗೀತಾಭಿಯಾನದ ಮಹಾ ಸಮರ್ಪಣಾ ಕಾರ್ಯಕ್ರಮ
ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕದ ವತಿಯಿಂದ ನಡೆಯುತ್ತಿರುವ ಗೀತಾಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣಾ ಕಾರ್ಯಕ್ರಮ ಡಿಸೆಂಬರ್ 19ರಂದು ಹೊಸಪೇಟೆಯಲ್ಲಿ ನಡೆಯಲಿದೆ.