ರಸಗುಲ್ಲ ಎಂದು ಭಾವಿಸಿ ದೇಸಿ ಬಾಂಬ್‌ಗೆ ಬಾಯಿ ಹಾಕಿದ ವ್ಯಕ್ತಿ; ಸ್ಫೋಟಕ್ಕೆ ದೇಹವೇ ಛಿದ್ರ ಛಿದ್ರ
Rasgulla bomb: ರಸಗುಲ್ಲ ಎಂದು ಭಾವಿಸಿ ವ್ಯಕ್ತಿಯೊಬ್ಬ ದೇಸಿ ಬಾಂಬನ್ನು ಬಾಯಿಗೆ ಹಾಕಿಕೊಂಡಿದ್ದು, ತಕ್ಷಣ ಅದು ಸ್ಫೋಟಗೊಂಡು ಇಡೀ ದೇಹವೇ ಛಿದ್ರ ಛಿದ್ರವಾಗಿರುವ ವಿಚಿತ್ರ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ನ. 12: ಮಧ್ಯ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರಸಗುಲ್ಲ ಎಂದು ಭಾವಿಸಿ ವ್ಯಕ್ತಿಯೊಬ್ಬ ದೇಸಿ ಬಾಂಬನ್ನು ಬಾಯಿಗೆ ಹಾಕಿಕೊಂಡಿದ್ದು, ತಕ್ಷಣ ಅದು ಸ್ಫೋಟಗೊಂಡು ಇಡೀ ದೇಹವೇ ಛಿದ್ರ ಛಿದ್ರವಾಗಿದೆ (Rasgulla bomb). ದಿಂಡೋರಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾದರಿಯ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ಸಂಭವಿಸಿದೆ. ನವೆಂಬರ್ 10ರಂದು ನಡೆದ ಈ ಘಟನೆ ಸದ್ಯ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.
ಮೃತ ವ್ಯಕ್ತಿಯನ್ನು 35 ವರ್ಷದ ರಾಜೇಂದ್ರ ಬರೋತಿಯಾ ಎಂದು ಗುರುತಿಸಲಾಗಿದೆ. ಆತನಿಗೆ ಪರಿಚಯಸ್ಥ ರಾಮ್ ಭಗತ್ ಬರೋತಿಯಾ ರಸಗುಲ್ಲ ಎಂದು ಹೇಳಿ ನಾಡ ಬಾಂಬ್ ನೀಡಿದ್ದ. ಅದನ್ನು ನಂಬಿದ ರಾಜೇಂದ್ರ ಬರೋತಿಯಾ ಸೇವಿಸಲು ಮುಂದಾಗಿದ್ದು, ಕಚ್ಚಿದ ತಕ್ಷಣ ಬಾಂಬ್ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ
ನವೆಂಬರ್ 10ರಂದು ಮನೆಯವರೊಂದಿಗೆ ರಾತ್ರಿ ಊಟ ಮಾಡಿ ರಾಜೇಂದ್ರ ಬರೋತಿಯಾ ಮನೆ ಮುಂದು ಕುಳಿತಿದ್ದ. ಸುಮಾರು 8 ಗಂಟೆಗೆ ಆಗಮಿಸಿದ ನೆರೆ ಮನೆಯ ರಾಮ್ ಭಗತ್ ಕಷ್ಟ ಸುಖ ಮಾತನಾಡತೊಡಗಿದ. ಈ ವೇಳೆ ನಾಡಬಾಂಬನ್ನು ನೀಡಿದ ರಾಮ್ ಭಗತ್ ರಸಗುಲ್ಲ ಎಂದು ತಿಳಿಸಿದ. ಇದನ್ನು ನಂಬಿದ ರಾಜೇಂದ್ರ ಅದನ್ನು ಕಚ್ಚುತ್ತಿದ್ದಂತೆ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿತು.
ʼʼಅದು ಕಾಡುಪ್ರಾಣಿಗಳನ್ನು ಕೊಲ್ಲಲು ಬಳಸುವ ಶಕ್ತಿಶಾಲಿ ನಾಡಬಾಂಬ್ ಆಗಿತ್ತು. ಸ್ಫೋಟದ ಸದ್ದು ಕೇಳಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲʼʼ ಎಂದು ರಾಜೇಂದ್ರ ಪತ್ನಿ ಸುಶೀಲಾ ಭಾಯಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕೊತ್ವಾಲಿ ಠಾಣೆಯ ಇನ್‌ಚಾರ್ಜ್ ದುರ್ಗ ಪ್ರಸಾದ್ ಮಾಹಿತಿ ನೀಡಿ ರಾಮ್ ಭಗರ್ ಮತ್ತು ಮತ್ತೋರ್ವನನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಕತ್ತಲೆ ಕವಿದಿದ್ದರಿಂದ ರಾಜೇಂದ್ರಗೆ ಕೈಯಲ್ಲಿದ್ದುದು ಬಾಂಬ್ ಎನ್ನುವುದು ಗೊತ್ತಾಗಲಿಲ್ಲ ಎಂದಿದ್ದಾರೆ. ಬಾಲಕನೊಬ್ಬ ತನಗೆ ಈ ಬಾಂಬ್ ನೀಡಿದ್ದಾಗಿ ರಾಮ್ ಭಗತ್ ಹೇಳಿದ್ದಾನೆ. ವೈಯಕ್ತಿಕ ದ್ವೇಷ ಸೇರಿ ಎಲ್ಲ ಕೋನಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೆಹಲಿ ಸ್ಫೋಟ ಪ್ರಕರಣ; ಶೂನಲ್ಲಿ ಸ್ಫೋಟಕ ಇಟ್ಟು ಬ್ಲಾಸ್ಟ್ ಮಾಡಲು ನಡೆದಿತ್ತಾ ಪ್ಲಾನ್?
ಪಟಾಕಿ ಎಂದು ಭಾವಿಸಿ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕ
ಪಟಾಕಿ ಎಂದು ಭಾವಿಸಿ ಸ್ಫೋಟಕ ವಸ್ತುವಿಗೆ ಬೆಂಕಿ ಹಚ್ಚಿದ ಬಾಲಕನ ತಲೆ ಛಿದ್ರ ಛಿದ್ರವಾಗಿರುವ ಘಟನೆ ದೀಪಾವಳಿ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆದಿತ್ತು. ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘೋರ ದುರಂತ ನಡೆದಿದ್ದು, ಮೃತ ಬಾಲಕನನ್ನು ಭೀಮರಾಯ ಎಂದು ಗುರುತಿಸಲಾಗಿದೆ.
ಕಾಡುಹಂದಿಗಳಿಗಾಗಿ ತಂದಿಟ್ಟಿದ್ದ ಸ್ಫೋಟಕ ಮದ್ದನ್ನು ಪಟಾಕಿ ಎಂದು ತಪ್ಪಾಗಿ ಭಾವಿಸಿ ಭೀಮರಾಯ ಅದಕ್ಕೆ ಬೆಂಕಿ ಹಚ್ಚಿದ್ದು, ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ. ಹಲವು ಕಿಲೋ ಮೀಟರ್‌ಗಳಷ್ಟು ದೂರಕ್ಕೆ ಶಬ್ದ ಕೇಳಿಸುವಷ್ಟು ಸ್ಫೋಟ ಶಕ್ತಿಯುತವಾಗಿತ್ತು.