ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Digital Arrest: ಶಹಾಪುರದಲ್ಲಿ ನಿವೃತ್ತ ಉಪನ್ಯಾಸಕನಿಗೆ ಡಿಜಿಟಲ್ ಅರೆಸ್ಟ್; 10 ಲಕ್ಷ ದೋಚಿದ ಸೈಬರ್ ಖದೀಮರು!‌

ನಿವೃತ್ತ ಉಪನ್ಯಾಸಕನ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾದ ಅಧಿಕಾರಿ ಎಂದು ಪರಿಚಯಿಸಿಕೊಂಡು, ಹೆದರಿಸಿದ್ದಾನೆ. ನಿಮ್ಮ ಮೇಲೆ ದೂರು ದಾಖಲಾಗಿದೆ ಎಂದು ಹೇಳಿ 10 ಲಕ್ಷ ರೂ. ಹಣ ಪೀಕಿದ್ದಾನೆ.

ನಿವೃತ್ತ ಉಪನ್ಯಾಸಕನಿಗೆ ಡಿಜಿಟಲ್ ಅರೆಸ್ಟ್; 10 ಲಕ್ಷ ದೋಚಿದ ಸೈಬರ್ ಖದೀಮರು!

-

Prabhakara R
Prabhakara R Oct 29, 2026 10:13 PM

ಯಾದಗಿರಿ: ಬ್ಯಾಂಕ್ ಖಾತೆಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಹೆದರಿಸಿ ಶಹಾಪುರದ (Shahapur) ನಿವೃತ್ತ ಉಪನ್ಯಾಸಕ ಧರ್ಮಣ್ಣ ಬಡಿಗೇರ ಅವರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡಿ ಬರೋಬ್ಬರಿ 10 ಲಕ್ಷ ರೂ.ಗಳನ್ನು ಸೈಬರ್ ವಂಚಕರು ಲೂಟಿ ಮಾಡಿರುವ ಘಟನೆ ನಡೆದಿದೆ.

ಅ.26ರಂದು ಧರ್ಮಣ್ಣ ಅವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಧರ್ಮಣ್ಣ ಅವರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಸುಮಾರು 20 ದೂರುಗಳು ದಾಖಲಾಗಿವೆ ಹಾಗೂ ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದಾನೆ.

ಇದಾದ ಬಳಿಕ ವಿಡಿಯೊ ಕರೆಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬರು ವಿಚಾರಣೆ ನಡೆಸುವಂತೆ ನಟಿಸಿ, ಅವರ ಖಾತೆಯಿಂದ ಸುಮಾರು 2 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಬ್ಯಾಂಕ್ ಖಾತೆಯಲ್ಲಿರುವ ಹಣ ಹಾಗೂ ಮನೆಯಲ್ಲಿರುವ ಚಿನ್ನಾಭರಣಗಳ ವಿವರಗಳನ್ನು ಪಡೆದುಕೊಂಡಿದ್ದಾರೆ.

ಖಾತೆಯಲ್ಲಿನ ಹಣದ ಪರಿಶೀಲನೆ ನಡೆಸಬೇಕೆಂದು ಹೇಳಿ, ಬ್ಯಾಂಕ್ ಆಫ್ ಬರೋಡಾದ ಖಾತೆಗೆ 10 ಲಕ್ಷ ರೂ. ವರ್ಗಾಯಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಧರ್ಮಣ್ಣ ಅವರು ಅ.27ರಂದು ಬ್ಯಾಂಕ್‌ಗೆ ತೆರಳಿ ತಮ್ಮ ಯೂನಿಯನ್ ಬ್ಯಾಂಕ್ ಖಾತೆಯಿಂದ ಸೂಚಿಸಿದ ಖಾತೆಗೆ ಆರ್‌ಟಿಜಿಎಸ್ ಮೂಲಕ 10 ಲಕ್ಷ ರೂ. ವರ್ಗಾಯಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ವಂಚಕರು, ಮನೆಯಲ್ಲಿರುವ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟು ಹಣ ಪಡೆದು ಅದನ್ನೂ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಇದರಿಂದ ಅನುಮಾನಗೊಂಡ ಧರ್ಮಣ್ಣ ಅವರು ತಕ್ಷಣ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಬಳಿಕ ಯಾದಗಿರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.