Bangladesh Violence: ಬಾಂಗ್ಲಾದೇಶದಲ್ಲಿ ಮತ್ತೊಂದು ಇಸ್ಕಾನ್ ದೇವಾಲಯಕ್ಕೆ ಬೆಂಕಿ, ಮೂರ್ತಿ ಭಗ್ನ
Bangladesh Violence: ಬಾಂಗ್ಲಾದೇಶದಲ್ಲಿ ಮತ್ತೊಂದು ಇಸ್ಕಾನ್ ದೇವಾಲಯಕ್ಕೆ ಬೆಂಕಿ, ಮೂರ್ತಿ ಭಗ್ನ
![ಹರೀಶ್ ಕೇರ](https://cdn-vishwavani-prod.hindverse.com/media/images/Harish_Kerargylr_YyRvY8Q.2e16d0ba.fill-100x100.jpg)
ಕೋಲ್ಕತಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ (Bangladesh Violence), ಕಗ್ಗೊಲೆ, ದೇವಾಲಯಗಳ ಮೇಲಿನ ದಾಳಿ (Attack on Hindu temples) ಮುಂದುವರಿದಿದೆ. ಇಸ್ಕಾನ್ ಸನ್ಯಾಸಿ (Iskcon monk) ಬಂಧನ ಪ್ರಕರಣದ ಬೆನ್ನಲ್ಲೇ, ಮತ್ತೊಂದು ಇಸ್ಕಾನ್ ದೇವಾಲಯದ (Iskcon Temple) ಮೇಲೆ ದಾಳಿ ನಡೆದಿದೆ. ಢಾಕಾದಲ್ಲಿರುವ ಇಸ್ಕಾನ್ ಕೇಂದ್ರಕ್ಕೆ ಬೆಂಕಿ ಹಚ್ಚಲಾಗಿದ್ದು, ಅಲ್ಲಿರುವ ದೇವರ ಮೂರ್ತಿಗಳನ್ನು ಭಾಗಶಃ ಸುಟ್ಟುಹಾಕಲಾಗಿದೆ.
ಈ ಕುರಿತು ಕೋಲ್ಕತಾ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್ ಹಾಗೂ ಬಾಂಗ್ಲಾ ಇಸ್ಕಾನ್ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ ಬ್ರಹ್ಮಚಾರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಬಾಂಗ್ಲಾದ ಢಾಕಾ ಜಿಲ್ಲೆಯಲ್ಲಿರುವ ನಮ್ಮಟ್ಟಾ ಇಸ್ಕಾನ್ ಕೇಂದ್ರವನ್ನು ಸುಡಲಾಗಿದೆ. ಅದರಲ್ಲಿನ ಶ್ರೀ ಶ್ರೀ ರಾಧಾಕೃಷ್ಣ ದೇವಸ್ಥಾನ ಹಾಗೂ ಶ್ರೀ ಶ್ರೀ ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಳಗಿನ ಜಾವ 2ರಿಂದ 3 ಗಂಟೆಯ ನಡುವೆ ಮೇಲ್ಬಾವಣಿಯ ಮೂಲಕ ಪೆಟ್ರೋಲ್ ಹಾಗೂ ಆಕ್ಟೇನ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಲಕ್ಷ್ಮೀ ನಾರಾಯಣ ಮೂರ್ತಿ ಸೇರಿದಂತೆ ಕೆಲವು ಮೂರ್ತಿಗಳಿಗೆ ಹಾನಿಯಾಗಿದೆ. ಕೂಡಲೇ ಅಗ್ನಿಶಾಮಕ ಕಾರ್ಯ ನಡೆದಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ' ಎಂದು ತಿಳಿಸಿದ್ದಾರೆ.
'ಈ ಘಟನೆಗಳನ್ನು ಬಾಂಗ್ಲಾ ಸರ್ಕಾರದ ಗಮನಕ್ಕೆ ತಂದರೂ ಪೊಲೀಸರು ಹಾಗೂ ಆಡಳಿತದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುತ್ತಿಲ್ಲ' ಎಂದೂ ದಾಸ್ ಆರೋಪಿಸಿದ್ದಾರೆ. ಈ ನಡುವೆ, ಪೊಲೀಸರು ಪ್ರತಿಕ್ರಿಯೆ ನೀಡಿ, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕಳೆದ ವಾರವೂ 3 ದೇಗುಲಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಈ ಮೊದಲು, ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಧರ್ಮ ಪ್ರದರ್ಶಿಸುವ ತಿಲಕ ಧರಿಸದಂತೆ ಇಸ್ಕಾನ್ ಸನ್ಯಾಸಿಗಳು ಹಾಗೂ ಅನುಯಾಯಿಗಳಿಗೆ ಅವರು ಕರೆ ನೀಡಿದ್ದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಒಂದರ ನಂತರ ಒಂದರಂತೆ ದೇವಾಲಯಗಳನ್ನು ಧ್ವಂಸ ಮಾಡಲಾಗುತ್ತಿದೆ. ಇಸ್ಕಾನ್ ಸನ್ಯಾಸಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯಲು ಮೊಹಮ್ಮದ್ ಯೂನಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: Donald Trump: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಟ್ರಂಪ್ ಖಂಡನೆ; ಕಮಲಾ ಹ್ಯಾರಿಸ್ ವಿರುದ್ಧವೂ ಗಂಭೀರ ಆರೋಪ